ದಾವಣಗೆರೆ,ಏ.18- ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬರುವ ಮೇ 9 ರಂದು ಚುನಾವಣೆ ನಡೆಯಲಿದ್ದು, ಇಲ್ಲಿ ಅವಿರೋಧವಾಗಿ ಆಯ್ಕೆಯಾಗಬಹುದಾಗಿದ್ದರೂ ಒಬ್ಬರಿಂದಾಗಿ ಚುನಾವಣೆ ನಡೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧ್ಯಕ್ಷ ಸ್ಥಾನ ಬಯಸಿ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದ ಒಟ್ಟು 8 ಜನರಲ್ಲಿ 6 ಜನರು ತಮ್ಮ ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಿದಿದ್ದಾರೆ. ಚುನಾವಣಾ ಅಂತಿಮ ಕಣದಲ್ಲಿ ಇದೀಗ ಇಬ್ಬರು ಮಾತ್ರ ಉಳಿದಿದ್ದು, ಅವರಿಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಅವಿರೋಧ ಆಯ್ಕೆ ನಡೆಯ ಬೇಕೆಂದು ಜಿಲ್ಲೆಯ ಕನ್ನಡಿ ಗರು, ಸಾಹಿತ್ಯಾಸಕ್ತರು, ಹಿತೈಷಿಗಳ ಅಭಿಪ್ರಾಯಗಳು ಚುನಾವಣೆ ನಿಗದಿ ಯಾದಾಗಿನಿಂದಲೂ ಕೇಳಿ ಬರುತ್ತಲೇ ಇದ್ದವು.
ಏತನ್ಮಧ್ಯೆ, 8 ಜನರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ನಾಲ್ವರು ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದರು. ಅವರುಗಳು 3-4 ತಿಂಗಳುಗಳಿಂದ ಸತತವಾಗಿ ಜಿಲ್ಲೆಯಾದ್ಯಂತ ಪ್ರವಾಸ ಮಾಡುತ್ತಾ ಮತಯಾಚನೆ ನಡೆಸುತ್ತಿದ್ದರು.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ -19 ಅಲೆಯ ನಡುವೆಯೂ, ಬಿಸಿಲಿನ ತಾಪವನ್ನೂ ಲೆಕ್ಕಿಸದೇ, ಆಕಾಂಕ್ಷಿಗಳಲ್ಲಿ ಕೆಲವರು ತಮ್ಮ ಇಳಿ ವಯಸ್ಸನ್ನೂ ಗಣನೆಗೆ ತೆಗೆದುಕೊಳ್ಳದೇ, ಕಸಾಪದ ಮೂಲಕ ಕನ್ನಡ ಸೇವೆ ಮಾಡಲೇಬೇಕು ಎಂಬ ಛಲದಿಂದ ನಡೆಸುತ್ತಿದ್ದ ಪ್ರಚಾರ ಇತರರಿಗೂ ಕನ್ನಡದ ಸೇವೆ ಮಾಡಲು ಪ್ರೇರಣೆ ನೀಡುವಂತಿತ್ತು.
ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ ಅವಿರೋಧ ಆಯ್ಕೆ ನಡೆಯಬೇಕು. ಆ ಮೂಲಕ ದಾವಣಗೆರೆ ಜಿಲ್ಲೆಯ ಹೆಸರು ರಾಜ್ಯಕ್ಕೆ ಮಾದರಿಯಾಗಬೇಕು ; ದಾಖಲೆಯಾಗಿ ಬೆಳೆಯಬೇಕು ಎಂಬ ಅಭಿಲಾಷೆಯಿಂದ ಹಿತೈಷಿಗಳು ವೇದಿಕೆಯೊಂದನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾದರು. ಕೊನೆಗೂ ಅವಿರೋಧ ಆಯ್ಕೆಯಾಗದಿರುವ ಬಗ್ಗೆ ವ್ಯಥೆ ಪಟ್ಟಿದ್ದಾರೆ.
ಹಿರಿಯ ವರ್ತಕರಾದ ಮಾಗನೂರು ಸಂಗಮೇಶ್ವರ ಗೌಡ, ಶಿಕ್ಷಣ ತಜ್ಞ ಡಾ. ಹೆಚ್.ವಿ. ವಾಮದೇವಪ್ಪ, ಹಿರಿಯ ಸಾಹಿತಿ ಎಸ್.ಟಿ.ಶಾಂತಗಂಗಾಧರ, ಸಾಮಾಜಿಕ ಹಿತ ಚಿಂತಕರಾದ ಬಸವರಾಜ ಸೋಮನಹಳ್ಳಿ, ಶಶಿಧರ ಹೆಮ್ಮನಬೇತೂರು, ಸಮಾಜ ಸೇವಕ ಕಕ್ಕರಗೊಳ್ಳ ಪರಮೇಶ್ವರಪ್ಪ ಮತ್ತಿತರರು ನಡೆಸಿದ ಸತತ ಪ್ರಯತ್ನ ವಿಫಲವಾಗಿದೆ.
ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಆಶಯದಂತೆ ತರಳಬಾಳು ಜಗದ್ಗುರು ಬೃಹನ್ಮಠದ ಅರಳಿಕಟ್ಟೆ ಶಾಖಾ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರು ಅವಿರೋಧ ಆಯ್ಕೆಗಾಗಿ ನಡೆಸಿದ ಪ್ರಯತ್ನಕ್ಕೆ ಫಲ ಸಿಗದಿರುವುದು ಭಕ್ತರ ಮತ್ತು ಸಾಹಿ ತ್ಯಾಸಕ್ತರ ವಲಯದಲ್ಲಿ ವ್ಯಾಕುಲತೆ ವ್ಯಕ್ತವಾಗಿದೆ.
ನಾಮಪತ್ರ ಸಲ್ಲಿಸಿದ್ದ ಆಕಾಂಕ್ಷಿಗಳನ್ನು ನಗರದ ಅನುಭವ ಮಂಟಪದಲ್ಲಿ ಕಲೆ ಹಾಕಿದ ಶ್ರೀಗಳು, ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿದರೆ ಚುನಾವಣೆ ಬೇಡ. ಚುನಾವಣೆ ನಡೆದರೆ ಅದರಿಂದಾಗಬಹುದಾದ ಆರ್ಥಿಕ ನಷ್ಟ, ಹುಟ್ಟಿಕೊಳ್ಳಬಹುದಾದ ದ್ವೇಷ – ಅಸೂಯೆ, ದೈಹಿಕ ಪರಿಶ್ರಮ, ಸಮಾಜ ನೋಡಬಹುದಾದ ದೃಷ್ಟಿಕೋನ ಇತ್ಯಾದಿ ವಿಚಾರಗಳನ್ನು ವಿವರಿಸಿ, ಅವಿರೋಧ ಆಯ್ಕೆ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು. ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ನಾವು ಸೂಚಿಸುವ ಒಬ್ಬ ಆಕಾಂಕ್ಷಿಯನ್ನು ಬಿಟ್ಟು ಉಳಿದವರು ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
- ಅಭಿಪ್ರಾಯಗಳನ್ನು ಸಂಗ್ರಹಿಸಿ ಅವಿರೋಧ ಆಯ್ಕೆಗೆ ಮುಂದಾದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
- ಶ್ರೀಗಳ ಕಳಕಳಿಗೆ ಮನ್ನಣೆ ನೀಡಿದ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ರೇವಣಸಿದ್ದಪ್ಪ ಅಂಗಡಿ ಸೇರಿದಂತೆ, ಆರು ಜನ ಆಕಾಂಕ್ಷಿಗಳು.
- ಅವಿರೋಧ ಆಯ್ಕೆ ಸಂಬಂಧ ನಡೆದ ಸಭೆಯಿಂದಲೇ ದೂರ ಉಳಿದ ಆರ್. ಶಿವಕುಮಾರಸ್ವಾಮಿ ಕುರ್ಕಿ ಅ
- ವಿರೋಧ ಆಯ್ಕೆಗೆ ಬಿ. ವಾಮದೇವಪ್ಪ ಅವರನ್ನು ಅಭ್ಯರ್ಥಿ ಯನ್ನಾಗಿಸಿದ್ದ ಶ್ರೀಗಳು
- ಒಬ್ಬರ ವಿರೋಧದಿಂದ ಚುನಾವಣೆ ನಡೆಯುವಂತಹ ಪರಿಸ್ಥಿತಿ ನಿರ್ಮಾಣ
ಈ ಸಂದರ್ಭದಲ್ಲಿ ಅಪಸ್ವರ ಎತ್ತಿದ ಆಕಾಂಕ್ಷಿಗಳಲ್ಲೊಬ್ಬರು, ತಾನು ಅಧ್ಯಕ್ಷನಾಗಲೇಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಅವಿರೋಧ ಆಯ್ಕೆಯಾಗಲು ನಮ್ಮ ಆಶಯವಷ್ಟೇ, ಇಲ್ಲಿ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಯಾರಿಂದಲೂ ಒತ್ತಾಯಪೂರ್ವಕವಾಗಿ ನಾಮಪತ್ರ ವಾಪಸ್ಸಾತಿಗೆ ಸಹಿ ಹಾಕಿಸಿಕೊಳ್ಳುವುದಿಲ್ಲ. ನಾವು ಸಲಹೆಗಳನ್ನು ನೀಡಿದ್ದೇವೆ ಅಷ್ಟೆ. ಆಯ್ಕೆ ನಿಮ್ಮದು, ನಿಮಗೆ ಸ್ವತಂತ್ರವಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಎಲ್ಲಾ ಆಕಾಂಕ್ಷಿಗಳ ಪರವಾಗಿ ಮಾತನಾಡಿದ ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಅವರು, ಅವಿರೋಧ ಆಯ್ಕೆಗೆ ಶ್ರೀಗಳು ಯಾರನ್ನೇ ಸೂಚಿಸಿದರೂ ನಾವು ಸಹಮತ ವ್ಯಕ್ತಪಡಿಸುತ್ತೇವೆ. ಸ್ವಾಮೀಜಿ ಸೂಚಿಸುವ ಹೆಸರು ಗುರುಗಳ ಅಭ್ಯರ್ಥಿಯನ್ನಾಗಿಸದೇ, ನಮ್ಮ ಅಭ್ಯರ್ಥಿ ಎಂದೇ ತಿಳಿದು ಅವರ ಆಯ್ಕೆಗೆ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಶ್ರೀಗಳ ಕಳಕಳಿ ಮತ್ತು ಸಲಹೆಗಳನ್ನು ಪುರಸ್ಕರಿಸಿದ ಸಭೆಯಲ್ಲಿದ್ದ ಎಲ್ಲಾ ಏಳು ಜನ ಆಕಾಂಕ್ಷಿಗಳು ತಮ್ಮ ತಮ್ಮ ಉಮೇದುವಾರಿಕೆ ವಾಪಸ್ಸಾತಿ ಅರ್ಜಿಗೆ ಸಹಿ ಮಾಡಿ ಶ್ರೀಗಳಿಗೆ ಒಪ್ಪಿಸಿದರು. ಅರ್ಜಿಗಳನ್ನು ಪರಿಶೀಲಿಸಿದ ಶ್ರೀಗಳು, ಒಂದು ಅರ್ಜಿಯನ್ನು ಮಾತ್ರ ತಮ್ಮ ಬಳಿ ಇಟ್ಟುಕೊಂಡು ಉಳಿದ ಆರು ಅರ್ಜಿಗಳನ್ನು ತಮ್ಮ ಪ್ರತಿನಿಧಿ ಕಡೆಗೆ ಕೊಟ್ಟರು. ಆ ಪ್ರತಿನಿಧಿಯೊಂದಿಗೆ ಎಲ್ಲಾ ಏಳು ಜನ ಆಕಾಂಕ್ಷಿಗಳೂ ನೇರವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿದರು. ಅಲ್ಲಿನ ಅಧಿಕಾರಿಗಳು, ಶ್ರೀಗಳು ಕಳುಹಿಸಿದ್ದ ಆರು ಜನರ ಉಮೇದುವಾರಿಕೆ ವಾಪಸ್ಸಾತಿ ಅರ್ಜಿಗಳ ಪೈಕಿ ಒಬ್ಬೊಬ್ಬರನ್ನಾಗಿ ಒಳಗೆ ಕರೆದು, ಅವರವರ ಅರ್ಜಿಗಳಲ್ಲಿನ ಸಹಿಗಳನ್ನು ದೃಢಪಡಿಸಿಕೊಂಡು ಅಂಗೀಕರಿಸಿದರು. ಒಳಗೆ ಕರೆಯದೇ ಹೊರಗೇ ಉಳಿದುಕೊಂಡ ಒಬ್ಬ ಆಕಾಂಕ್ಷಿಯೇ ಬಿ.ವಾಮದೇವಪ್ಪ.
ಈ ನಡುವೆ ನಾಮಪತ್ರ ಸಲ್ಲಿಸಿದ್ದ ಒಟ್ಟು 8 ಜನ ಆಕಾಂಕ್ಷಿಗಳಿಗೂ ದೂರವಾಣಿ ಮೂಲಕ ಸಭೆಗೆ ಆಹ್ವಾನಿಸಲಾಗಿತ್ತಾದರೂ, ಸಭೆಗೆ ಬರುವುದಾಗಿ ಶ್ರೀಗಳ ಪ್ರತಿನಿಧಿಗೆ ಹೇಳಿದ್ದರೆಂದು ಹೇಳಲಾದ ಆರ್. ಶಿವಕುಮಾರಸ್ವಾಮಿ ಕುರ್ಕಿ ಮಾತ್ರ ಸಂಜೆಯಾದರೂ ಸಭೆಗೆ ಬರಲೇ ಇಲ್ಲ. ಕೊನೆಗೂ ನಾಮಪತ್ರ ವಾಪಸ್ಸಾತಿ ಪಡೆಯುವ ಪ್ರಕ್ರಿಯೆಯೂ ಮುಗಿದೇ ಹೋಯಿತು. ಇದರಿಂದ ಅವಿರೋಧ ಆಯ್ಕೆಯ ಎಲ್ಲರ ಕನಸು ನುಚ್ಚು ನೂರಾಯಿತು.
ಜಿಲ್ಲಾ ಕಸಾಪ ಹಾಲಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ಹರಿಹರ ತಾಲ್ಲೂಕು ಹಾಲಿ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಹರಿಹರ ತಾಲ್ಲೂಕು ಕುಂಬಳೂರಿನ ಕೆ.ಕಾಮರಾಜ್, ದಾವಣಗೆರೆಯ ರವಿ ಬಾಡ, ಶಾಮನೂರಿನ ಎಂ.ಎ. ರಾಜಣ್ಣ ಪೂಜಾರ್, ದಾವಣಗೆರೆಯ ಕೆ.ಎಂ. ರಾಘವೇಂದ್ರ ಆಚಾರ್ ಅವರುಗಳು ಶ್ರೀಗಳವರ ಕಳಕಳಿಗೆ ಮನಸೋತು ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ಒಪ್ಪಿಗೆ ನೀಡುವುದರ ಮೂಲಕ ಶ್ರೀಗಳ ಆಶಯಕ್ಕೆ ಮನ್ನಣೆ ನೀಡಿದರು. ಆದರೆ, ಆರ್. ಶಿವಕುಮಾರಸ್ವಾಮಿ ಕುರ್ಕಿ ಸಭೆಯಿಂದಲೇ ದೂರ ಉಳಿದಿರುವ ಬಗ್ಗೆ ಪರಮೇಶ್ವರಪ್ಪ, ಶಶಿಧರ್ ಮತ್ತಿತರರು ಖೇದ ವ್ಯಕ್ತಪಡಿಸಿದ್ದಾರೆ.