ಪಾಲಿಕೆ ಮೇಯರ್ ವೀರೇಶ್‌ರಿಂದ 12.49 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡನೆ
ದಾವಣಗೆರೆ, ಏ. 16 – ಸ್ವಚ್ಛತೆ, ದೂಳು ಮುಕ್ತ ಹಾಗೂ ಹಸಿರು ನಗರಕ್ಕೆ ಆದ್ಯತೆ ನೀಡುವ ಬಜೆಟ್ ರೂಪಿಸಿರುವುದಾಗಿ ಹೇಳಿರುವ ಮೇಯರ್ ಎಸ್.ಟಿ. ವೀರೇಶ್, ಬಿಡಾಡಿ ದನ, ನಾಯಿ ಹಾಗೂ ಹಂದಿಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
2021-22ರ ಸಾಲಿಗಾಗಿ 12.49 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿ ಅನುಮೋದನೆ ಪಡೆಯುವ ವೇಳೆ ಮಾತನಾಡಿದ ಅವರು, ಮಂಗಳೂರು ಮಾದರಿಯಲ್ಲಿ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಹೆಬ್ಬಾಳು ಬಳಿ 6-7 ಎಕರೆ ಪ್ರದೇಶದಲ್ಲಿ ಹಂದಿಗಳ ದೊಡ್ಡಿ ನಿರ್ಮಿಸುವ ಮೂಲಕ ನಗರದಲ್ಲಿ ಹಂದಿಗಳ ಸಮಸ್ಯೆ ನಿವಾರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಂದಿಗಳ ಸಮಸ್ಯೆ ಪರಿಹಾರ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.
ಈ ಹಿಂದೆ ಬಾತಿ ಬಳಿ ಹಂದಿಗಳ ಶೆಡ್ ನಿರ್ಮಿಸಲು ಯೋಜಿಸಲಾಗಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಲ್ಲಿ ಗೋಶಾಲೆ ನಿರ್ಮಿಸಿ ಬಿಡಾಡಿ ದನಗಳನ್ನು ಅಲ್ಲಿಗೆ ರವಾನಿಸಲಾಗುವುದು ಎಂದು ವೀರೇಶ್ ತಿಳಿಸಿದ್ದಾರೆ.
ಅನುದಾನ ಬಳಕೆಯಾಗಿಲ್ಲ, ಯೋಜನೆ ಜಾರಿಯಾಗಿಲ್ಲ: ಎ.ನಾಗರಾಜ್
15ನೇ ರಾಜ್ಯ ಹಣಕಾಸು ಆಯೋಗದ ಮೂಲಕ ಪಾಲಿಕೆಗೆ 34.63 ಕೋಟಿ ರೂ.ಗಳ ಅನುದಾನ ಬಂದಿದೆ. ಅದರ ಬಳಕೆ ಆಗಿಲ್ಲ. ಬಜೆಟ್‌ನಲ್ಲಿ ಅಂಕಿ – ಅಂಶಗಳಿವೆಯೇ ಹೊರತು ವಾಸ್ತವಾಂಶ ಇಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಬಜೆಟ್‌ನಲ್ಲಿ 26 ಯೋಜನೆಗಳನ್ನು ರೂಪಿಸ ಲಾಗಿತ್ತು. ಆದರೆ, ಇವುಗಳಲ್ಲಿ ಕೆಲವಷ್ಟೇ ಬಂದಿವೆ. ಹಸಿ – ಒಣ ಕಸ ಬೇರ್ಪಡಿಸುವಿಕೆ, ಸ್ಕೈ ವಾಕ್, ಉದ್ಯಾನ ಬೀದಿ, ಫುಡ್ ಕೋರ್ಟ್, ಸ್ಮಶಾನ ಅಭಿವೃದ್ಧಿ, ಇಂಗು ಗುಂಡಿ ನಿರ್ಮಾಣ, ಬಸವೇಶ್ವರ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗಳ ಸ್ಥಾಪನೆ ಸೇರಿದಂತೆ ಬಹುತೇಕ ಯೋಜನೆಗಳು ಜಾರಿಗೆ ಬಂದಿಲ್ಲ ಎಂದು ಹೇಳಿದರು.
ಈ ಬಾರಿಯ ಬಜೆಟ್‌ನಲ್ಲಿ 37 ಯೋಜನೆಗಳನ್ನು ಪ್ರಕಟಿಸಲಾಗಿದೆ. ಆದರೆ, ಅನುದಾನವೇ ಬಳಕೆಯಾಗದಿದ್ದರೆ ಬಜೆಟ್ ಕೇವಲ ಅಂಕಿ – ಅಂಶಗಳಾಗಿ ಉಳಿಯುತ್ತದೆ ಎಂದು ಆಕ್ಷೇಪಿಸಿದರು. ನಂತರ ಈ ಬಗ್ಗೆ ಮಾತನಾಡಿದ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಕೊರೊನಾ ಸಂಕಷ್ಟದ ಕಾರಣದಿಂದಾಗಿ ಅನುದಾನ ಬಳಕೆ ಸಾಧ್ಯವಾಗಿಲ್ಲ. ಇದೇ ಅವಧಿಯಲ್ಲಿ 30 ಸಾವಿರ ಆಹಾರದ ಕಿಟ್ಗಳನ್ನು ಬಡವರಿಗೆ ತಲುಪಿಸಲಾಯಿತು ಎಂದು ಹೇಳಿದರು.
ಬಜೆಟ್ ಪ್ರಮುಖ ಅಂಶಗಳು
- 2 ಕೋಟಿ ರೂ. ವೆಚ್ಚದಲ್ಲಿ ಬಸಾಪುರ, ಕರೂರು, ಎಸ್ಒಜಿ ಕಾಲೋನಿ ಹಾಗೂ ಬಸವನಗೌಡ ಬಡಾವಣೆಗಳ ಸ್ಮಶಾನ ಅಭಿವೃದ್ಧಿ. ಹಿಂದೂ ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆ.
- ಕೋಟಿ ರೂ. ವೆಚ್ಚದಲ್ಲಿ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಸುಸಜ್ಜಿತ ಉದ್ಯಾನವನ
- 2 ಕೋಟಿ ರೂ. ವೆಚ್ಚದಲ್ಲಿ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಮಾದರಿ ರಸ್ತೆ ನಿರ್ಮಾಣ
- 1 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಕಟ್ಟಡ ಪರಿಸರ ಸ್ನೇಹಿಯಾಗಿ ಪರಿವರ್ತನೆ. ಮಳೆ ನೀರು ಕೊಯ್ಲು, ವರ್ಟಿಕಲ್ ಉದ್ಯಾನವನ, ವಾಹನ ನಿಲುಗಡೆ ಸೌಲಭ್ಯ.
- ಮಹಿಳೆಯರಿಗೆ ಒಳಾಂಗಣ ಕ್ರೀಡಾಂಗಣಕ್ಕಾಗಿ 25 ಲಕ್ಷ ರೂ. ಅನುದಾನ
- ಡಿಸಿಎಂ ಟೌನ್ಶಿಪ್ನಲ್ಲಿರುವ ಅನಿಲ್ ಕುಂಬ್ಳೆ ಸ್ಟೇಡಿಯಂ ಅನ್ನು ಒಳಾಂಗಣ ಕ್ರೀಡಾಂಗಣವಾಗಿ ಅಭಿವೃದ್ಧಿ ಪಡಿಸಲು 1 ಕೋಟಿ ರೂ.
- ಶ್ವಾನಗಳಿಗೆ ಸಂತಾನ ಹರಣ, ಗೋಶಾಲೆ ಹಾಗೂ ವರಾಹ ಶಾಲೆ ನಿರ್ಮಾಣಕ್ಕೆ ಒಟ್ಟು 1.05 ಕೋಟಿ ರೂ.
- ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಗೆ 10 ಲಕ್ಷ ರೂ. ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ನಿಧಿಗೆ 10 ಲಕ್ಷ ರೂ.
- ಒಂದು ಬಡಾವಣೆ ಮಾದರಿಯಾಗಿ ಅಭಿವೃದ್ಧಿ ಪಡಿಸಲು 2 ಕೋಟಿ ರೂ. ಪಾಲಿಕೆ ನಿವೇಶನದಲ್ಲಿ 1.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ
- ಪಾಲಿಕೆ ಆವರಣದಲ್ಲಿ ಬಸವೇಶ್ವರ, ಬೆಸ್ಕಾಂ ಕಚೇರಿ ಬಳಿಯ ಅಂಬೇಡ್ಕರ್ ಸರ್ಕಲ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಹಾಗೂ ಅರುಣ ಟಾಕೀಸ್ ಬಳಿಯ ವೃತ್ತದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪನೆಗೆ 50 ಲಕ್ಷ ರೂ.
ಸ್ವಚ್ಛತೆ ಕಾಪಾಡದ ನಿವೇಶನ ಮಾಲೀಕರಿಗೆ ದಂಡ: ಸ್ವಚ್ಛತೆ ಕಾಪಾಡದ ನಿವೇಶನ ಮಾಲೀಕರಿಗೆ ದಂಡ ವಿಧಿಸಲು ಪಾಲಿಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಕ್ರಮ ಜಾರಿಗಾಗಿ 20 ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಖಾಲಿ ನಿವೇಶನಗಳಲ್ಲಿ ಜಾಲಿ ಗಿಡ ಬೆಳೆದು, ಹಂದಿ – ನಾಯಿ, ವಿಷಜಂತುಗಳ ವಾಸಸ್ಥಾನವಾಗಿವೆ. ಇಂತಹ ಮಾಲೀಕರು ನಿವೇಶನ ಸ್ವಚ್ಛಗೊಳಿಸದೇ ಇದ್ದರೆ, ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ ದಂಡ ವಿಧಿಸಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.
ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹ
ಪಾಲಿಕೆ ವ್ಯಾಪ್ತಿಯಲ್ಲಿನ 549 ಪೌರ ಕಾರ್ಮಿಕರಿಗಾಗಿ ನಗರದ ನಾಲ್ಕು ಭಾಗಗಳಲ್ಲಿ ಸುಸಜ್ಜಿತ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು 30 ಲಕ್ಷ ರೂಗಳನ್ನು ಕಾಯ್ದಿರಿಸಲಾಗಿದೆ.
ಬೆಳಿಗ್ಗೆ 5 ಗಂಟೆಯಿಂದಲೇ ಸ್ವಚ್ಛತಾ ಕಾರ್ಯ ಆರಂಭಿಸುವ ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯುವ ನೀರು, ಶೌಚಾಲಯ ಮತ್ತಿತರೆ ಮೂಲಭೂತ ಸೌಲಭ್ಯವುಳ್ಳ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು.
ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್ನಲ್ಲೂ ವಿಶ್ರಾಂತಿ ಗೃಹ ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಪಾಲಿಕೆಯಿಂದ ಕಸದ ಬುಟ್ಟಿ ಕೊಟ್ಟರೆ ಸ್ವಚ್ಛತೆ
ಶುಕ್ರವಾರ ಮಾತ್ರ ಒಣ ಕಸ ಹಾಗೂ ಉಳಿದ ದಿನಗಳಲ್ಲಿ ಹಸಿ ಕಸ ನೀಡಬೇಕೆಂದು ಪಾಲಿಕೆ ಜನರಿಗೆ ತಿಳಿಸಿದೆ. ಆದರೆ, ಬಡವರು ಮನೆಯಲ್ಲಿ ಕಸ ಇಟ್ಟುಕೊಳ್ಳಲು ಪಾಲಿಕೆಯಿಂದಲೇ ಬಾಕ್ಸ್ ನೀಡುವ ವ್ಯವಸ್ಥೆ ಮಾಡಿದರೆ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ತಿಳಿಸಿದ್ದಾರೆ.
ಬಡವರಿಗೆ ಕಸದ ಬುಟ್ಟಿ ತರಲು ಆಗುವುದಿಲ್ಲ. ಹೀಗಾಗಿ ಪಾಲಿಕೆಯಿಂದ ಕಸದ ಬುಟ್ಟಿ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದವರು ಆಗ್ರಹಿಸಿದರು.
ಮಂಗಳೂರಿನಲ್ಲಿ ಮಂಗಳ ರಿಸೋರ್ಸಸ್ ಹಾಗೂ ರಾಮಕೃಷ್ಣ ಮಿಷನ್ ಜೊತೆಗೂಡಿ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ಯೋಜನೆಯಲ್ಲಿ ಯಶಸ್ಸು ಕಂಡಿವೆ. ಮಂಗಳೂರಿನ 8 ಸಾವಿರಕ್ಕೂ ಹೆಚ್ಚು ಮನೆಗಳಲ್ಲೇ ಗೊಬ್ಬರ ಮಾಡಿಕೊಳ್ಳಲಾಗುತ್ತಿದೆ. ಇದೇ ಮಾದರಿಯನ್ನು ನಗರದಲ್ಲಿ ಜಾರಿಗೆ ತರಲಾಗುವುದು ಎಂದವರು ಹೇಳಿದರು.
ಇ-ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ, ಮಾದರಿ ಉದ್ಯಾನವನ ನಿರ್ಮಾಣ, ಪಾಲಿಕೆ ಕಚೇರಿ ಹಸಿರೀಕರಣ, ಬಿಡಾಡಿ ಶ್ವಾನಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ, ನಗರ ಅರಣ್ಯೀಕರಣ, ಇಂಗು ಗುಂಡಿಗಳ ನಿರ್ಮಾಣದಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೇಯರ್ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಮುಂದಿನ ಒಂದು ವರ್ಷದಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರವನ್ನು 10ರ ಒಳಗೆ ಹಾಗೂ ಮುಂದಿನ ವರ್ಷಗಳಲ್ಲಿ ಐದು ಶ್ರೇಯಾಂಕದ ಒಳಗೆ ತರುವ ಗುರಿ ಇದೆ ಎಂದವರು ತಿಳಿಸಿದರು.
ಉಳಿತಾಯ ಬಜೆಟ್ : 2021-22ರ ಸಾಲಿನಲ್ಲಿ ಎಸ್‌ಎಫ್‌ಸಿ ಅನುದಾನ, ಸೇರಿದಂತೆ ಹಲವಾರು ಮೂಲಗಳಿಂದ 433.29 ಕೋಟಿ ರೂ.ಗಳ ಆದಾಯ ದೊರೆಯಲಿದೆ. 420.79 ಕೋಟಿ ರೂ.ಗಳ ವೆಚ್ಚವಾಗುವ ಅಂದಾಜಿದ್ದು, 12.409 ಕೋಟಿ ರೂ.ಗಳ ಉಳಿತಾಯವಾಗಲಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಕೊರೊನಾ ಇಲ್ಲ : ಇಡೀ ದೇಶ ಹಾಗೂ ಪ್ರಪಂಚ ಕೊರೊನಾದಿಂದ ತತ್ತರಿಸುತ್ತಿದೆ. ಆದರೆ, ಬಜೆಟ್‌ನಲ್ಲಿ ಎಲ್ಲೂ ಕೊರೊನಾ ಕುರಿತು ಪ್ರಸ್ತಾಪಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ಎ. ನಾಗರಾಜ್ ಆಕ್ಷೇಪಿಸಿದರು.
ನಂತರ ಇದಕ್ಕೆ ಉತ್ತರಿಸಿದ ಮೇಯರ್, ಕೊರೊನಾ ಎದುರಿಸುವ ಅನುದಾನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಲೇ ಬರುವ ಕಾರಣ, ಆ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ ಎಂದರು.
ಖಬರಸ್ತಾನ ಅಭಿವೃದ್ಧಿ ಪಡಿಸಿ : ಬಜೆಟ್‌ನಲ್ಲಿ ಸ್ಮಶಾನಗಳ ಅಭಿವೃದ್ಧಿಗೆ ಹಣಕಾಸು ನೆರವು ನೀಡಿದ್ದನ್ನು ಪ್ರಸ್ತಾಪಿಸಿದ ಪಾಲಿಕೆ ಸದಸ್ಯ ಚಮನ್ ಸಾಬ್, ಖಬರಸ್ಥಾನಗಳಿಗೂ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಸದಸ್ಯರಾದ ಪ್ರಸನ್ನ ಕುಮಾರ್, ಕೆ.ಎಂ.ವೀರೇಶ್ ಮತ್ತಿತರರು ಮಾತನಾಡಿ ಬಜೆಟ್ ಪ್ರಸ್ತಾವನೆಗಳನ್ನು ಸ್ವಾಗತಿಸುವುದಾಗಿ ಹೇಳಿದರು.
ಬಜೆಟ್ ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ರೇಣುಕ ಶ್ರೀನಿವಾಸ್, ಗೀತಾ ದಿಳ್ಳೆಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.