ಜೆಡಿಎಸ್ ಸಮಾಲೋಚನಾ ಸಭೆಯಲ್ಲಿ ಎಚ್ಚರಿಕೆ
ದಾವಣಗೆರೆ, ಫೆ.12- ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಬೂತ್ ಮಟ್ಟದಿಂದ ಸದೃಢಗೊಳಿಸಲು ಕಾರ್ಯಯೋಜನೆ ಹಮ್ಮಿಕೊಳ್ಳ ಲಾಗುವುದು ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕರೂ, ಮೈಸೂರು-ಬೆಂಗಳೂರು ವಿಭಾಗದ ಜಿಲ್ಲೆಗಳ ಪಕ್ಷದ ವೀಕ್ಷಕರೂ ಆದ ಹೆಚ್.ಎಸ್. ಶಿವಶಂಕರ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರ, ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಬೂತ್‌ಗೆ 15 ರಿಂದ 20 ಜನ ಸದಸ್ಯರನ್ನು ಮಾಡುವ ಮೂಲಕ ಪಕ್ಷವನ್ನು ತಳ ಮಟ್ಟದಿಂದಲೇ ಗಟ್ಟಿಗೊಳಿಸಬೇಕಿದೆ ಎಂದರು.
ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಜನತೆ ಈಗಾಗಲೇ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳನ್ನು ನೋಡಿದ್ದಾಗಿದೆ. ಮುಂದೆ ನಮ್ಮ ಪಕ್ಷಕ್ಕೂ ಉತ್ತಮ ಕಾಲ ಕೂಡಿ ಬರಲಿದೆ ಎಂದು ಹೇಳಿದರು.
ಪಕ್ಷವಿರೋಧಿ ಚಟುವಟಿಕೆಗಳು, ಹೇಳಿಕೆಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಕಾರ್ಯಕರ್ತರು ಅಲ್ಲಿ ಇಲ್ಲಿ ಕುಳಿತು ನಾಯಕರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಬೇಕು. ಪಕ್ಷವನ್ನು ಒಡೆ ಯುವ ಕೆಲಸವನ್ನು ನಾನು ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಮತದಾರರಿಗೆ ದೂರ ದೃಷ್ಟಿ ಕಡಿಮೆಯಾಗಿದೆ. ಕ್ಷಣಿಕ ಅನುಕೂಲಕ್ಕಾಗಿ ಐತಿಹಾಸಿಕ ಕಾರ್ಯಕ್ರಮಗಳನ್ನು ಮರೆತಿದ್ದಾರೆ. ಜೆಡಿಎಸ್ ನಾಯಕರು ಕೊಟ್ಟ ಕೊಡುಗೆೆಯನ್ನು ಯಾವ ಸರ್ಕಾರಗಳೂ ಕೊಟ್ಟಿಲ್ಲ. ಹೆಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಗ್ರಾಮ ವಾಸ್ತವ್ಯ, ಜನತಾದರ್ಶನ ಯಾರೂ ಮಾಡಲಿಲ್ಲ. ರಾಷ್ಟ್ರೀಯ ಪಕ್ಷಗಳು ಹಣ ಉಳ್ಳವರ ಪರವಾಗಿವೆ. ಬಡವರ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ ಶಿವಶಂಕರ್, ಕಾರ್ಯಕರ್ತರು ಪಕ್ಷದ ಮುಖಂಡರು ಜಾರಿಗೆ ತಂದ ಯೋಜನೆಗಳು, ಮಾಡಿದ ಕಾರ್ಯಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗರಿ ಗರಿ ಬಟ್ಟೆ ಹಾಕಿದ ಮಾತ್ರ, ಬೃಹತ್ ಫ್ಲೆಕ್ಸ್ ಹಾಕಿಸಿಕೊಂಡ ಮಾತ್ರಕ್ಕೆ ನಾಯಕನಾಗುವುದಿಲ್ಲ. ಪಾಲಿಕೆ ಚುನಾವಣೆಯಲ್ಲೂ ಗೆಲ್ಲಲು ಯೋಗ್ಯತೆ ಇಲ್ಲದವರು ಶಾಸಕ, ಸಂಸದರ ಚುನಾವಣೆಗೆ ಸ್ಪರ್ಧಿಸಲು ಮುಂದಾಗುತ್ತಿದ್ದಾರೆ. ಮೊದಲು ನಿಮ್ಮ ಶಕ್ತಿಯನ್ನು ತಿಳಿದುಕೊಳ್ಳಿ. ವಿನಾಕಾರಣ ಸೋತು ಪಕ್ಷದ ಶಕ್ತಿಯನ್ನೂ ಕುಗ್ಗಿಸಬೇಡಿ ಎಂದು ಕಿಡಿಕಾರಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ವೀಕ್ಷಕ ಜೆ.ಅಮಾನುಲ್ಲಾಖಾನ್, ಪಕ್ಷವನ್ನು ಪುನಃಶ್ಚೇತನಗೊಳಿಸುವ ಉದ್ದೇಶದಿಂದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳನ್ನು ವಿಸರ್ಜಿಸಲಾಗಿದೆ. ವೀಕ್ಷಕರ ಸಲಹೆ ಮೇರೆಗೆ ವರಿಷ್ಠರು ಮುಂದಿನ ಹುದ್ದೆಗಳಿಗೆ ನೇಮಕ ಮಾಡಲಿದ್ದಾರೆ ಎಂದರು.
ನಾಡಿದ್ದು ದಿನಾಂಕ 14 ರ ಭಾನುವಾರ ಬೆಂಗಳೂರಿನ ಗಾಯತ್ರಿ ಪ್ಯಾಲೆಸ್‌ನಲ್ಲಿ ಪಕ್ಷದ ಸಭೆ ನಡೆಯಲಿದ್ದು, ದಾವಣಗೆರೆ ಜಿಲ್ಲೆಯಿಂದ ಸುಮಾರು 2 ಸಾವಿರ ಜನ ತೆರಳಲು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರುಗಳಾದ ಎಂ.ಎನ್. ನಾಗರಾಜ್, ಷಹವಾಜ್ ಖಾನ್, ಟಿ.ಅಸ್ಗರ್ ಇತರರು ಪಕ್ಷ ಸಂಘಟನೆ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.