ದಾವಣಗೆರೆ, ಫೆ.12- ಬಾಡಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ನಗರ ಪಾಲಿಕೆಯ ಮಳಿಗೆಗಳಿಂದ ವಸೂಲಾತಿ ಕಾರ್ಯಾಚರಣೆ ಮುಂದುವರೆದಿದ್ದು, ಇಂದೂ ಸಹ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ಬಾಡಿಗೆ ಕಟ್ಟದ ಮಳಿಗೆಗಳನ್ನು ಸೀಜ್ ಮಾಡಿ ಬಾಡಿಗೆದಾರರಿಗೆ ಸೂಚನೆ ನೀಡಿದರು.
ನಗರದ ಮೋತಿ ಚಿತ್ರಮಂದಿರದ ಹಿಂಭಾಗದ ಗುಜರಿ ಲೈನ್‍ನಲ್ಲಿನ ಸುಮಾರು 60 ಮಳಿಗೆಗಳತ್ತ ತೆರಳಿದ ತಂಡವು ಟ್ರೇಡ್ ಲೈಸನ್ಸ್ ಹೊಂದಿಲ್ಲದ, ನೆಲ ಬಾಡಿಗೆ ಕಟ್ಟದ ಮಳಿಗೆಗಳಿಗೆ ಬೀಗ ಜಡಿದು ಸೀಜ್ ಮಾಡಿದರು.
ದಾಳಿ ವೇಳೆ ಸ್ಥಳದಲ್ಲಿದ್ದ ಅಂಗಡಿಯ ಬಾಡಿಗೆದಾರರ ಬಳಿ ಟ್ರೇಡ್ ಲೈಸನ್ಸ್ ಪರಿಶೀಲಿಸಿ, ಬಾಕಿ ಇರುವ ಬಾಡಿಗೆ ಕಟ್ಟುವ ತನಕ ಅಂಗಡಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು. ಆಗ ಅಂಗಡಿಯಲ್ಲಿದ್ದವ ಟ್ರೇಡ್ ಲೈಸನ್ಸ್ ಮನೆಯಲ್ಲಿದ್ದು, ಅಂಗಡಿ ಬಾಡಿಗೆದಾರ ತಾನಲ್ಲ, ಅವರು ಹುಬ್ಬಳ್ಳಿಯಲ್ಲಿದ್ದಾರೆ ಎಂದ. ಆಗ ಆಯುಕ್ತರು, ಅಂಗಡಿಗೆ ಬಾಡಿಗೆ ಕೊಡುವ ಬಗ್ಗೆ ವಿಚಾರಿಸಿದಾಗ, ಆರು ಸಾವಿರ ಎಂದು ಉತ್ತರಿಸಿದ. ಅಂಗಡಿ ಬಾಡಿಗೆದಾರ ಪಾಲಿಕೆಯಿಂದ ಕಡಿಮೆ ಬಾಡಿಗೆಗೆ ಪಡೆದು ಅದನ್ನು ಹೆಚ್ಚುವರಿಯಾಗಿ ಬೇರೆಯವರಿಗೆ ಬಾಡಿಗೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಅನೇಕ ಅಂಗಡಿಗಳಲ್ಲಿ ಬಾಡಿಗೆದಾರರ ಬಳಿ ದಾಖಲೆಗಳನ್ನು ಪರಿಶೀಲಿಸುತ್ತಾ, ಟ್ರೇಡ್ ಲೈಸನ್ಸ್ ಮತ್ತು ನೆಲ ಬಾಡಿಗೆ ಕಟ್ಟದ ಮಳಿಗೆಗಳನ್ನು ಸೀಜ್ ಮಾಡುವಂತೆ ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿ ನಗರ ಪಾಲಿಕೆಯ 506 ಮಳಿಗೆಗಳಿದ್ದು, ಅವುಗಳಿಂದ 2 ಕೋಟಿ 61 ಲಕ್ಷ ಬಾಡಿಗೆ ಕಟ್ಟಬೇಕಿದ್ದು, ಇದರಲ್ಲಿ ಒಟ್ಟು 1 ಕೋಟಿಯಷ್ಟು ಬಾಡಿಗೆ ವಸೂಲಿ ಮಾಡಲಾಗಿದೆ. ಬಾಕಿ ಇರುವ ಇನ್ನುಳಿದ 1 ಕೋಟಿ 61 ಲಕ್ಷ ಬಾಡಿಗೆ ವಸೂಲಾತಿ ಮಾಡಲಾಗುತ್ತಿದೆ. ಗುಜರಿ ಲೈನ್‍ನಲ್ಲಿನ 60 ಮಳಿಗೆಗಳ ಪೈಕಿ ಇಬ್ಬರು ಬಿಟ್ಟರೆ 58 ಅಂಗಡಿಗಳಿಂದ ನೆಲಬಾಡಿಗೆ ಕಟ್ಟಿಲ್ಲ. ಈ ಜಾಗವೊಂದ ರಲ್ಲೇ 68 ಲಕ್ಷದಷ್ಟು ಬಾಡಿಗೆ ಬಾಕಿ ಇದೆ. ಈ ಮಳಿಗೆದಾರರಿಗೆ ಕಳೆದ 15 ದಿನಗಳ ಹಿಂದೆ ಪಾಲಿಕೆ ಯಿಂದ ನೋಟಿಸ್ ನೀಡಲಾಗಿತ್ತು. ಆದರೂ ಮಳಿಗೆ ದಾರರು ಬಾಡಿಗೆ ಕಟ್ಟಿಲ್ಲ. ಟ್ರೇಡ್ ಲೈಸನ್ಸ್ ಪಡೆದಿಲ್ಲ.
– ವಿಶ್ವನಾಥ ಪಿ. ಮುದಜ್ಜಿ, ಪಾಲಿಕೆ ಆಯುಕ್ತ.
ದಾಳಿ ವೇಳೆ ಕಾಲ್ಕಿತ್ತ ಬಾಡಿಗೆದಾರರು: ಅಧಿಕಾರಿಗಳ ತಂಡ ಒಂದೊಂದೇ ಅಂಗಡಿಗಳ ದಾಖಲೆ, ಬಾಡಿಗೆ ಬಾಕಿಯನ್ನು ಪರಿಶೀಲಿಸುತ್ತಾ ಸೀಜ್ ಮಾಡುತ್ತಿದ್ದ ವೇಳೆ ಕೆಲ ಬಾಡಿಗೆದಾರರು ಸ್ವತಃ ತಮ್ಮ ಅಂಗಡಿಗಳಿಗೆ ಕ್ಷಣ ಮಾತ್ರದಲ್ಲೇ ಬೀಗ ಹಾಕಿಕೊಂಡು ದಾಳಿಯಿಂದ ಪಾರಾಗಲು ಕಾಲ್ಕಿತ್ತರು. ಆದರೂ ಬಾಕಿ ಉಳಿಸಿಕೊಂಡಿದ್ದ ಮಳಿಗೆಗಳನ್ನು ಅಧಿಕಾರಿಗಳು ಸೀಜ್ ಮಾಡಿಸಿದರು. ಈ ಅಂಗಡಿಗಳ ಶೆಟರ್ಸ್ ಗೆ ನೊಟೀಸ್ ಅಂಟಿಸುವಂತೆ ಆಯುಕ್ತರು ಸೂಚಿಸಿದರು. ಹಾಗೇನಾದರೂ ಸೀಜ್ ಆದರೂ ಅಂಗಡಿ ತೆರೆದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಬಾಡಿಗೆದಾರರ ವಿರೋಧ: ಬಾಡಿಗೆ ಕಟ್ಟದ ಮಳಿಗೆಗಳಿಗೆ ಸೀಜ್ ಮಾಡುವುದನ್ನು ಕೆಲ ಅಂಗಡಿ ಬಾಡಿಗೆದಾರರು ವಿರೋಧವನ್ನೊಡಿದರು. ನಮಗೆ ನೋಟಿಸ್ ನೀಡದೇ ಏಕಾಏಕಿ ಬಾಗಿಲು ಮುಚ್ಚುತ್ತಿರುವುದು ಸರಿಯೇ? ಎಂದು ಬಾಡಿಗೆದಾರರು ಪ್ರಶ್ನಿಸಿದರು.
ಇದಕ್ಕೆ ಆಯುಕ್ತರು, ನೋಟಿಸ್ ನೀಡಿದರೂ ಸಹ ನೀವು ನೆಲ ಬಾಡಿಗೆ ಕಟ್ಟಿಲ್ಲ. ಅಲ್ಲದೇ, ಟ್ರೇಡ್ ಲೆಸನ್ಸ್ ಸಹ ಇಲ್ಲ. ಆದ್ದರಿಂದ ನಾವು ಬೀಗ ಹಾಕುತ್ತೇವೆಂದರು. ಇದನ್ನು ಒಪ್ಪದ ಬಾಡಿಗೆದಾರರು ಕೋರ್ಟ್ ಆದೇಶದಂತೆ ನಾವು ಹಣ ಪಾವತಿಸುತ್ತೇವೆಂದರು.
ಕಳೆದ 40 ವರ್ಷಗಳಿಂದ ಇಲ್ಲಿ ವ್ಯಾಪಾರ ನಡೆಸುತ್ತಿದ್ದು, 1992ರಲ್ಲಿ ಗಲಾಟೆ ನಡೆದಾಗ ಮಳಿಗೆಗಳು ಸುಟ್ಟು ಹೋಗಿದ್ದವು. ಅಂದು ನಗರಸಭೆಯಿಂದ ಮಳಿಗೆಗಳನ್ನು ಕಟ್ಟಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ಆದರೆ, ಕಟ್ಟಿಕೊಟ್ಟಿಲ್ಲ. ನಾವು ಮಳಿಗೆಗಳನ್ನು ಕಟ್ಟಿಕೊಂಡಿದ್ದೇವೆ. ಮೊದಲು 3 ರೂ. ಅಡಿಯಂತೆ ನೆಲ ಬಾಡಿಗೆ ಕಟ್ಟುವಂತೆ ಆದೇಶ ನೀಡಿದ್ದರು. 2008ರ ನಂತರ ಒಂದು ಸಾವಿರದಿಂದ ಒಂದುವರೆ ಸಾವಿರ ರೂ. ನೆಲ ಬಾಡಿಗೆ ಮಾಡಿದರು. ಹೀಗಾಗಿ ಕೋರ್ಟ್‍ನಲ್ಲಿ ನಾವು ಹಣ ಕಟ್ಟುತ್ತೇವೆ ಎಂದು ಮಹಮ್ಮದ್ ಕೌಸರ್ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಅಧಿಕಾರಿ ಕೆ. ನಾಗರಾಜ್, ಕಂದಾಯ ವಿಭಾಗದ ವ್ಯವಸ್ಥಾಪಕ ಪಿ. ವೆಂಕಟೇಶ್, ಸಹಾಯಕ ಕಂದಾಯ ಅಧಿಕಾರಿ ಸುನಿಲ್, ಕಂದಾಯ ನಿರೀಕ್ಷಕರುಗಳಾದ ತಿಮ್ಮಯ್ಯ, ಹನುಮಂತಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.