ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷರೂ ಆದ ಎನ್.ಎ.ಮುರುಗೇಶ್
ದಾವಣಗೆರೆ, ಫೆ.12- ಸಹಕಾರ ಸಂಘಗಳ ಯಶಸ್ಸಿಗೆ ಆಡಳಿತ ಮಂಡಳಿಯವರಲ್ಲಿ ಪ್ರಾಮಾಣಿಕತೆ, ನಿಷ್ಠೂರತೆ ಮತ್ತು ಪಾರದರ್ಶಕತೆ ಅವಶ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ, ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಅಧ್ಯ ಕ್ಷರೂ ಆದ ಎನ್.ಎ.ಮುರುಗೇಶ್ ಕಿವಿಮಾತು ಹೇಳಿದರು.
ನಗರದ ಜನತಾ ಬಜಾರ್ ಸಭಾಂಗಣದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಇಂದು ಏರ್ಪಡಿಸಿದ್ದ ವಿಶೇಷ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಭದ್ರತೆ ಇಲ್ಲದೇ ಸಾಲವನ್ನು ನೀಡಬಾರದು, ತಮ್ಮ ಸಂಬಂಧಿಕರಿಗೆ, ತಮಗೆ ಬೇಕಾದವರಿಗೆ ಸಾಲ ಕೊಡಬಾರದು ಎಂದು ಎಚ್ಚರಿಸಿದರು.
ಸಹಕಾರ ಸಂಘಗಳಲ್ಲಿ ಇರುವ ಹಣ ಸಾರ್ವಜನಿಕರದ್ದು ಎಂಬುದನ್ನು ಮರೆಯಬಾರದು. ಸದಸ್ಯರು ಮತ್ತು ಸಂಘಗಳ ನಡುವೆ ಸೇತುವೆಯಂತೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇವೆ ಸಲ್ಲಿಸಬೇಕು ಎಂದು ಆಶಿಸಿದರು.
ಈಗ ಸಹಕಾರ ಸಂಘಗಳು ಆರ್ಥಿಕವಾಗಿ ಬಲಿಷ್ಠವಾಗುತ್ತಿವೆ. ಕೇಂದ್ರ ಸರ್ಕಾರಕ್ಕೆ ಸಹಕಾರ ಸಂಘಗಳು ಶೇ. 8 ರಷ್ಟು ಹಣವನ್ನು ಒದಗಿಸಿವೆ ಎಂದು ತಿಳಿಸಿದರು.
ಸಹಕಾರ ಸಂಘಗಳು ಸರ್ಕಾರದ ಸಹಾಯವಿಲ್ಲದೇ, ಆರ್‌ಬಿಐ ನಿರ್ದೇಶನದಂತೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.
ಶಿಬಿರವನ್ನು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಸಿರಿಗೆರೆ ರಾಜಣ್ಣ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಿ.ಶೇಖರಪ್ಪ, ಆರ್.ಜಿ.ಶ್ರೀನಿವಾಸಮೂರ್ತಿ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಕೆ. ಮಹೇಶ್ವರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಎಸ್.ಜಿ.ಕುಲಕರ್ಣಿ, ಜಿ.ಎಸ್.ಸುರೇಂದ್ರ ಮತ್ತಿತರರು ಆಗಮಿಸಿದ್ದರು. ಕೆ.ಎಂ. ಜಗದೀಶ್ ಸ್ವಾಗತಿಸಿದರು.