ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಮಾಜಿ ಶಾಸಕ
ಹರಿಹರ,ಏ.15- ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಗತ್ತು ಕಂಡ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ರವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ನಂತರ ದಿಢೀರನೇ ಆಸ್ಪತ್ರೆಯ ಪ್ರಯೋಗಾಲಯ, ಎಮರ್ಜೆನ್ಸಿ ವಾರ್ಡ್, ಜನರಲ್ ವಾರ್ಡ್, ಐಸಿಯು, ಡಯಾಲಿಸಿಸ್ ಕೇಂದ್ರಗಳಿಗೆ ಭೇಟಿ ನೀಡಿ, ಸ್ವಚ್ಛತೆ ಪರಿಶೀಲಿಸಿದರು. ಆಸ್ಪತ್ರೆಯ ಹಿರಿಯ ಚರ್ಮ ರೋಗ ತಜ್ಞ ಭಕ್ತವತ್ಸಲ ಅವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರು ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಬರಬೇಕು, ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಅರಿವು ಮೂಡಿಸಿ, ಜನರನ್ನು ಈ ರೀತಿ ಗುಂಪು ಗುಂಪಾಗಿ ನಿಲ್ಲಿಸಬೇಡಿ ಎಂದರು.
ಎರಡನೇ ಹಂತದ ಮಹಾಮಾರಿ ಕೊರೊನಾ ವೈರಸ್ ದಿನದಿನಕ್ಕೆ ಅಟ್ಟಹಾಸ ಮೆರೆಯುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕೆ ಉತ್ಸವವನ್ನು ಪ್ರಾರಂಭ ಮಾಡಿದ್ದಾರೆ. ಇದರ ಉದ್ದೇಶ ಮಹಾಮಾರಿ ವೈರಸ್ ನಿರ್ಮೂಲನೆ ಮಾಡುವುದಾಗಿದೆ. ಪ್ರತಿಯೊಬ್ಬರು ಮುತುವರ್ಜಿ ವಹಿಸಿ ಕೊರೊನಾ ವೈರಸ್ ಹೊಡೆದೋಡಿಸುವುದಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಮಾಸ್ಕ್ ಇಲ್ಲದೆ ಆಸ್ಪತ್ರೆಯ ಒಳ ಭಾಗದಲ್ಲಿ ಇದ್ದಂತಹ ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು. ಆಸ್ಪತ್ರೆಯ ರೋಗಿಗಳ ಆರೋಗ್ಯ ವಿಚಾರಿಸಿದರು. ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಹಲವರು ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಜಾಗೃತರಾಗಿರಿ. ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಳ್ಳಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿಹೆಚ್ಓ ಡಾ. ಡಿ. ಚಂದ್ರಮೋಹನ್, ಆಸ್ಪತ್ರೆ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್.ಹನುಮನಾಯ್ಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರುಗಳಾದ ಹೆಚ್. ಮಂಜಾನಾಯ್ಕ್, ಬೆಣ್ಣೆ ಸಿದ್ದಪ್ಪ, ಮಂಜುನಾಥ್ ಅಗಡಿ, ವೀರೇಶ್ ಆಚಾರ್, ರಾಜು ಯು. ಐರಣಿ, ರೂಪಾ ಕಾಟ್ವೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಸದಸ್ಯ ರಾಜು ರೋಖಡೆ, ಆಶ್ರಯ ಸಮಿತಿ ಸದಸ್ಯರುಗಳಾದ ರಾಘವೇಂದ್ರ ಕೊಂಡಜ್ಜಿ, ಸುನೀಲ್, ನಗರಸಭೆಯ ನಾಮ ನಿರ್ದೇಶನ ಸದಸ್ಯ ಮಾರುತಿ ಶೆಟ್ಟಿ, ವಿನಾಯಕ ಆರಾಧ್ಯ ಮಠ, ಕೆಂಚನಹಳ್ಳಿ ಮಹಾಂತೇಶ, ಶಾಂತಕುಮಾರ್, ಆಸ್ಪತ್ರೆಯ ವೈದ್ಯರು-ಸಿಬ್ಬಂದಿ ವರ್ಗ ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.