ಜಿ.ಪಂ. ಕೆಡಿಪಿ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್
ದಾವಣಗೆರೆ ಫೆ. 11- ಮೆಕ್ಕೆಜೋಳದ ನಡುವೆ ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಬೆಳೆಯುವಂತೆ ರೈತರ ಮನವೊಲಿಸುವ ಮೂಲಕ ಜಿಲ್ಲೆಯಲ್ಲಿ ಮಿಶ್ರ ಬೆಳೆ ಪದ್ಧತಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಿಶ್ರ ಬೆಳೆಯನ್ನಾಗಿ ತೊಗರಿ ಬೆಳೆಯಲು ಚಿಕ್ಕ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ 1 ಕೆ.ಜಿ. ಬಿತ್ತನೆ ಬೀಜದ ಪೊಟ್ಟಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಮೆಕ್ಕೆಜೋಳ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ ಅವರು ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಿದಾಗ, ಜಿಲ್ಲೆಯಲ್ಲಿ 1.34 ಲಕ್ಷ ಹೆಕ್ಟೇರ್ಗಳಲ್ಲಿ ಮೆಕ್ಕೆಜೋಳ ಬೆಳೆಯಲಾ ಗುತ್ತಿದೆ. ಸುಮಾರು 7 ಲಕ್ಷ ಟನ್ಗಳಷ್ಟು ಇಳುವರಿ ನಿರೀಕ್ಷೆ ಇದೆ. ಆದರೆ 2 ಲಕ್ಷ ಟನ್ ಮೆಕ್ಕೆಜೋಳಕ್ಕೆ ಮಾತ್ರ ಬೇಡಿಕೆ ಇರುತ್ತದೆ. ಇದು ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ತಾಂತ್ರಿಕ ಕಾರಣಗಳಿಂದಾಗಿ ಖರೀದಿ ಕೇಂದ್ರ ಆರಂಭಿಸದೇ ಇರುವುದೂ ಸಹ ದರ ವ್ಯತ್ಯಾಸಕ್ಕೆ ಕಾರಣ ಎಂದು ಜಂಟಿ ಕೃಷಿ ನಿರ್ದೇಶಕರು ವಿವರಿಸಿದರು. ರೈತರು ಮೆಕ್ಕೆಜೋಳವನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಅಲ್ಲದೆ ಹೊಸ ಕೀಟ, ರೋಗಬಾಧೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂತರ ಬೆಳೆಯಾಗಿ ತೊಗರಿ ಬೆಳೆಯುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದರು.
3699 ಅನರ್ಹ ಪಡಿತರ ಚೀಟಿ ವಶ :
ಜಿಲ್ಲೆಯಲ್ಲಿ ಶೇ.74ರಷ್ಟು ಜನರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. 25 ಸರ್ಕಾರಿ ನೌಕರರು ಹಾಗೂ ಆರ್ಥಿಕವಾಗಿ ಉತ್ತಮ ಸ್ಥಿತಿಯ ಲ್ಲಿದ್ದು ಪಡಿತರ ಚೀಟಿ ಹೊಂದಿದವ ರಿಂದ 3,699 ಅನರ್ಹ ಕಾರ್ಡ್ ಗಳನ್ನು ವಶಪಡಿಸಿಕೊಂಡು, 3,21,738 ರೂ. ದಂಡ ವಿಧಿಸಲಾಗಿದೆ ಎಂದು ಆಹಾರ ಇಲಾಖೆ ಸಹಾಯಕ
ನಿರ್ದೇಶಕ ಸೈಯದ್ ಖಲೀಮುಲ್ಲಾ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ವಿವಿಧ ರೀತಿಯ 4,14,057 ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿವೆ. ದಿನಕ್ಕೆ ಐದು ಪಡಿತರ ಅಂಗಡಿಗಳಿಗೆ ಭೇಟಿ ನೀಡಿ, ಕನಿಷ್ಟ ಹತ್ತು ಅನರ್ಹ ಪಡಿತರ ಚೀಟಿಗಳನ್ನು ಗುರುತಿಸುವಂತೆ ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ್, ನೂರಾರು ಕೋಟಿ ಆಸ್ತಿ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಏನೂ ಮಾಡಲಾಗುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಬಹುತೇಕ ಹೋಟೆಲ್ಗಳು ಪಡಿತರ ಅಕ್ಕಿ ಆಧಾರದಿಂದಲೇ ನಡೆಯುತ್ತಿವೆ, ಬಿಪಿಎಲ್ ಕಾರ್ಡ್ ಕೊಡುವಾಗ ಕುಟುಂಬದ ಆರ್ಥಿಕ ಸ್ಥಿತಿಗತಿಯನ್ನು ಸಮರ್ಪಕವಾಗಿ ಪರಿಶೀಲಿಸಿಯೇ ನೀಡಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಶೇಖರಪ್ಪ ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ್, ಈ ಬಗ್ಗೆ ಇಲಾಖೆಯಿಂದ ರೈತರಲ್ಲಿ ಅರಿವು ಮೂಡಿಸಿ ಎಂದರು. ಇಲಾಖೆಯಿಂದ ಗ್ರಾಮಗಳಲ್ಲಿ ಮಿಶ್ರ ಬೆಳೆ ಬಗ್ಗೆ ಜಾಗೃತಿ ಮೂಡಿಸಲು ಗುರಿ ನಿಗದಿ ಪಡಿಸಿಕೊಳ್ಳುವಂತೆ ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಸಲಹೆ ನೀಡಿದರು. ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ ಸಿರಿಧಾನ್ಯ ಬೆಳೆಗೂ ರೈತರಿಗೆ ಶಿಫಾರಸು ಮಾಡುವಂತೆ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಮೀಕಾಂತ್ ಮಾತನಾಡಿ, ಕೋವಿಡ್ ಕಾರಣದಿಂದ ಹಣ್ಣು, ತರಕಾರಿ ಬೆಳೆಯಲ್ಲಿ ನಷ್ಟ ಅನುಭವಿಸಿದ ರೈತರಿಗೆ 4.25 ಕೋಟಿ ರೂ. ಪರಿಹಾರ ಧನ ವಿತರಣೆ ಮಾಡಲಾಗಿದೆ. ಇನ್ನೂ ಸುಮಾರು 2.60 ಕೋಟಿ ರೂ. ಪರಿಹಾರ ಬಿಡುಗಡೆಯಾಗಬೇಕಿದೆ ಎಂದರು. ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಆಸಕ್ತ ರೈತ ಮಹಿಳೆಯರ ಗುಂಪುಗಳನ್ನು ರಚಿಸಿ, ಅವರಿಗೆ ಅಣಬೆ ಬೇಸಾಯ, ಜೇನುಕೃಷಿ, ತಾರಸಿ ಕೈತೋಟದಂತಹ ಚಟುವಟಿಕೆಗಳ ತರಬೇತಿ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಫಕೀರಪ್ಪ, ಉಪ ಕಾರ್ಯದರ್ಶಿ ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.