ಪ್ರಯಾಗ್‌ರಾಜ್, ಫೆ. 11 – ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ತ್ರಿವೇಣಿ ಸಂಗಮದಲ್ಲಿ ಮೌನಿ ಅಮವಾಸ್ಯೆ ದಿನದಂದು ಪವಿತ್ರ ಸ್ನಾನ ಕೈಗೊಂಡಿದ್ದಾರೆ.
ಅಲಹಾಬಾದ್‌ಗೆ ಬಂದಿಳಿದಿದ್ದ ಅವರು, ನೆಹರು – ಗಾಂಧಿ ಕುಟುಂಬಕ್ಕೆ ಸೇರಿದ ಆನಂದ ಭವನಕ್ಕೆ ಭೇಟಿ ನೀಡಿದರು. ಆನಂದ ಭವನವನ್ನು ಸ್ವಾತಂತ್ರ್ಯ ಹೋರಾಟದ ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಅಸ್ಥಿಕಲಶವನ್ನು ಗಂಗೆಯಲ್ಲಿ ವಿಸರ್ಜಿಸುವುದಕ್ಕೆ ಮುಂಚೆ ಸ್ವಲ್ಪ ಕಾಲ ಆನಂದ ಭವನದಲ್ಲಿ ಇರಿಸಲಾಗಿತ್ತು. ಅಸ್ತಿಕಲಶ ಇರಿಸಿದ್ದ ಸ್ಥಳಕ್ಕೆ ಪ್ರಿಯಾಂಕಾ ಗಾಂಧಿ ನಮನ ಸಲ್ಲಿಸಿದರು.
ತ್ರಿವೇಣಿ ಸಂಗಮದಲ್ಲಿ ಅವರು ತಮ್ಮ ಸಹಚರರ ಜೊತೆ ಪವಿತ್ರ ಸ್ನಾನ ಕೈ ಗೊಂಡರು. ನಂತರ ದೋಣಿಯಲ್ಲಿ ತಾವೇ ಹುಟ್ಟು ಹಾಕುತ್ತಲೇ ವಾಪಸ್ಸಾದರು.
ಈ ಸಂದರ್ಭದಲ್ಲಿ ಅವರ ಪುತ್ರಿ ಮಿರಯ ಹಾಗೂ ಕಾಂಗ್ರೆಸ್ ಶಾಸಕ ಆರಾಧನಾ ಮಿಶ್ರ ಅವರೂ ಉಪಸ್ಥಿತರಿದ್ದರು. ನಿನ್ನೆ ಸಹರಾನ್‌ಪುರದಲ್ಲಿ ಆಯೋಜಿಸಲಾಗಿದ್ದ ರೈತ ಮಹಾಪಂಚಾಯತಿಯಲ್ಲೂ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಯ್ದೆಗಳನ್ನು ವಾಪಸ್ ಪಡೆಯಲಿದೆ ಎಂದು ತಿಳಿಸಿದ್ದರು.