ಪ್ರೊ. ಗಾಯತ್ರಿ ದೇವರಾಜ್
ದಾವಣಗೆರೆ, ಜು.4- ವಯೋಸಹಜ ನಿವೃತ್ತಿಯು ವೃತ್ತಿ ಬದುಕಿನ ಸಹಜ ಪ್ರಕ್ರಿಯೆ. ನಿವೃತ್ತಿ ಜೀವನವನ್ನೂ ನೆಮ್ಮದಿ ಮತ್ತು ಸಂತೃಪ್ತಿಯಾಗಿ ಕಳೆಯುವುದು ಮುಖ್ಯ. ಇದನ್ನು ಪ್ರತಿಯೊಬ್ಬರೂ ಸ್ಫೂರ್ತಿಯಿಂದ ಸ್ವೀಕರಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೃತ್ತಿಯಾದಾಗ ಕೆಲಸ ಮಾಡಿದ ಸಂಸ್ಥೆಯಿಂದ ಒಳ್ಳೆಯ ಹೆಸರು, ಮಾಡಿದ ಕೆಲಸ, ಸಹೋದ್ಯೋಗಿಗಳ ವಿಶ್ವಾಸಗಳನ್ನು ಮಾತ್ರ ಒಯ್ಯಲು ಸಾಧ್ಯ. ಆದರೆ ಶಾಶ್ವತವಾಗಿ ಉಳಿಯುವುದು ವೃತ್ತಿಯಲ್ಲಿದ್ದಾಗ ಮಾಡಿದ ಕೆಲಸಗಳಷ್ಟೆ. ಹಿರಿಯರು ಕಿರಿಯರಿಗೆ ಸಕಾಲಿಕವಾಗಿ ಮಾರ್ಗದರ್ಶನ ನೀಡಿ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಡಾ. ರವೀಂದ್ರ ಕಮ್ಮಾರ ಅವರು ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಅವರು ಮಾಡಿದ ಕೆಲಸಗಳು ಸ್ಮರಣೀಯ. ಕಲಾವಿದನಿಗೆ ಜೀವನದಲ್ಲಿ ನಿವೃತ್ತಿ ಎಂಬುದೇ ಇಲ್ಲ. ಅವರಲ್ಲಿರುವ ಕಲಾವಿದನು ಅವರನ್ನು ನಿರಂತರವಾಗಿ ಕ್ರಿಯಾಶೀಲವಾಗಿ ಇಡುವಂತೆ ಮಾಡಲಿದ್ದಾನೆ. ಹೀಗಾಗಿ ಅವರು ವೃತ್ತಿಯಿಂದ ನಿವೃತ್ತರಾಗಿ, ಪ್ರವೃತ್ತಿಯಲ್ಲಿ ಮತ್ತೆ ತೊಡಗಿಸಿಕೊಳ್ಳುವ ವಿಶ್ವಾಸವಿದೆ. ಅದರಲ್ಲೂ ಯಶಸ್ಸು ಕಾಣಬೇಕು ಎಂಬುದು ಎಲ್ಲರ ಆಶಯ ಎಂದು ನುಡಿದರು.
ಕಮ್ಮಾರ ಅವರ ಆತ್ಮೀಯರಾದ ರಾಜೇಂದ್ರ ಪರ್ವತೀಕರ, ದತ್ತಾತ್ರೇಯ ಎನ್. ಭಟ್, ಆನಂದ್ ಮಾತನಾಡಿದರು.
ಶಿಕ್ಷಣ ನಿಕಾಯದ ಡೀನ್ ಡಾ. ಕೆ.ವೆಂಕಟೇಶ್, ದಾವಿವಿ ಸಹಾಯಕ ಪ್ರಾಧ್ಯಾಪಕ ಡಾ. ಟಿ.ಎಲ್. ಪ್ರವೀಣ್, ಡಾ.ಶಿವವೀರಕುಮಾರ್, ಡಾ. ಸಂತೋಷ್, ಡಾ. ಶಿವಕುಮಾರ ಕಣಸೋಗಿ, ದೃಶ್ಯ ಕಲಾ ಕಾಲೇಜಿನ ಉಪನ್ಯಾಸಕರಾದ ಶಿವಶಂಕರ ಸುತಾರ್, ಹರೀಶ್ ರಾವ್, ಹರೀಶ್ ಹೆಡ್ಡನವರ್, ಹೇಮಲತಾ, ಸಂಜಯ್, ಪ್ರಮೋದ್, ದಾವಿವಿ ಅಧೀಕ್ಷಕ ರಂಗಸ್ವಾಮಿ, ಕಾಲೇಜಿನ ಸಿಬ್ಬಂದಿ ಶಿವಕುಮಾರ್ ಅಜಗಣ್ಣನವರ, ವಿಜಯಕುಮಾರ್ ಉಪಸ್ಥಿತರಿದ್ದರು.
ಡಾ. ಸತೀಶ್ ವಲ್ಯಾಪುರೆ ಸ್ವಾಗತಿಸಿದರು. ಡಾ. ಜಯರಾಜ್ ಚಿಕ್ಕಪಾಟೀಲ ಕಾರ್ಯಕ್ರಮ ನಿರೂಪಿಸಿದರು.