ದಾವಣಗೆರೆ, ಫೆ.10- ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಚಟುವಟಿಕೆಗಳನ್ನು ನಡೆಸಬೇಕು. ಪರವಾನಗಿ ಇಲ್ಲದವರಿಗೆ ಪರವಾನಗಿ ಪಡೆಯಲು ಮಾರ್ಗದರ್ಶನ ನೀಡುವುದರೊಂದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆದರೆ ಕಾನೂನು ಮೀರಿ ನಡೆದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದರು. ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 58 ಕ್ರಷರ್‍ಗಳಿವೆ ಹಾಗೂ 78 ಕಲ್ಲುಗಣಿಗಳಿವೆ. 78 ಕ್ವಾರಿಗಳ ಪೈಕಿ 10 ಮಾತ್ರ ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದಿದ್ದು, 18 ಪ್ರಗತಿಯಲ್ಲಿವೆ. 07 ನವೀಕರಣ ಪ್ರಕ್ರಿಯೆಯಲ್ಲಿದ್ದರೆ 7 ಮ್ಯಾನುವಲ್ ಮತ್ತು 36 ಕ್ವಾರಿಗಳಲ್ಲಿ ಕೆಲಸ ನಡೆಯುತ್ತಿಲ್ಲವೆಂದು ಗಣಿ ಇಲಾಖೆ ವರದಿ ನೀಡಿದೆ ಎಂದು ಹೇಳಿದರು.
ವಾರದೊಳಗೆ ವರದಿ ನೀಡಲು ಗಡುವು: ಕ್ವಾರಿಗಳಿರುವ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಆರ್‍ಐ ಮತ್ತು ವಿಎ ಸೇರಿದಂತೆ ತಂಡ ರಚಿಸಿ ಗಣಿ ಇಲಾಖೆಯ ವರದಿಯಲ್ಲಿರುವಂತೆ ಕ್ವಾರಿಗಳು ಕೆಲಸ ನಿರ್ವಹಿಸುತ್ತಿವೆಯೇ? ಮುಖ್ಯವಾಗಿ ಕೆಲಸ ನಿಲ್ಲಿಸಿರುವ (ಐಡಲ್) ಕ್ವಾರಿಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಒಂದು ವಾರದೊಳಗೆ ನನಗೆ ವರದಿ ನೀಡಬೇಕು. ಈ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು. ಒಂದು ಪಕ್ಷ ಅನಧಿಕೃತವಾಗಿ ಕ್ವಾರಿ ನಡೆಸುತ್ತಿದ್ದರೆ ಹಾಗೂ ಕಾಯ್ದೆಯನ್ವಯ ನಿಯಮಗಳನ್ನು ಅನುಸರಿಸದೇ ಕ್ವಾರಿ ನಡೆಸುತ್ತಿದ್ದರೆ ಅಂತಹ ಕ್ವಾರಿಗಳಿಗೆ ನೋಟಿಸ್ ನೀಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಅವರು ಮಾತನಾಡಿ, ಶಿವಮೊಗ್ಗದ ಹುಣ ಸೋಡಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಸ್ಫೋಟಕಗಳ ಬಳಕೆಯಲ್ಲಿ ನಿರ್ಲಕ್ಷ್ಯದಿಂದಾಗಿ ಸಾವು – ನೋವಿಗೆ ಕಾರಣವಾಗಿದೆ ಎಂದರು.
ಗಣಿ ಮಾಡುವ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯ. ಗಣಿಗಾರಿಕೆ ಪ್ರದೇಶದ ಪ್ರವೇಶ, ನಿರ್ಗಮನ, ಗಣಿ ಸ್ಥಳ, ಸ್ಟೋರೇಜ್ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಸಿಸಿಟಿವಿ ಅಳವಡಿಕೆಯಿಂದ ಸ್ಥಳದಲ್ಲಿ ಏನಾದರೂ ದುರ್ಘಟನೆಗಳು ಸಂಭವಿಸಿದರೆ ಪೊಲೀಸರಿಗೆ ತನಿಖೆ ನಡೆಸಲು ಅನುಕೂಲ. ಕರ್ನಾಟಕ ಪಬ್ಲಿಕ್ ಸೇಫ್ಟಿ ಆಕ್ಟ್ ಅನ್ವಯ ಎಲ್ಲೆಡೆ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿಯ ಸಹಾಯದಿಂದ ನಡೆದ ಘಟನೆಗಳ ಬಗ್ಗೆ ಸಂರ್ಪೂಣವಾದ ಮಾಹಿತಿ ಹಾಗೂ ತನಿಖೆಗೆ ಬೇಕಾದ ಮೂಲಗಳನ್ನು ಪಡೆಯಬಹುದು. ಕೇವಲ ಕ್ವಾರಿಯಲ್ಲಿ ಮಾತ್ರವಲ್ಲದೇ, ಆಫೀಸ್, ಮನೆ, ದೇವಸ್ಥಾನಗಳಲ್ಲೂ ಕೂಡ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು.
– ಹನುಮಂತರಾಯ, ಪೊಲೀಸ್ ವರಿಷ್ಠಾಧಿಕಾರಿ
ದಾವಣಗೆರೆ ನಗರದಲ್ಲಿಯೇ ದುಗ್ಗಮ್ಮನ ಜಾತ್ರೆ ತರುವಾಯ ದೇವಸ್ಥಾನದ ಸುಮಾರು 300 ಮೀಟರ್ ಅಂತರದಲ್ಲಿ ಹೆಂಚಿನ ಗೋದಾಮೊಂದರಲ್ಲಿ ದೊಡ್ಡ ಪ್ರಮಾಣದ ಸ್ಫೋಟಕವನ್ನು ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಆಜಾದ್ ನಗರದ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕವನ್ನು ಸೀಜ್ ಮಾಡಿ ಸಂಬಂಧಿಸಿದವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಲೈಸೆನ್ಸನ್ನು ಕೂಡ ನಿಯಮಾನುಸಾರ ನಿಲಂಬನೆಯಲ್ಲಿಡಲಾಗಿದೆ. ಕಾಡಜ್ಜಿ ಬಳಿ ಕೂಡ ಸ್ಫೋಟಕ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಕ್ರಷರ್‍ಗಳಿಂದ ಬರುವ ಗಾಡಿಗಳು ಅತೀ ತೂಕ ಹೊತ್ತು ಓಡಾಡುತ್ತಿದ್ದು, ಇದರಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಸ್ಫೋಟಕ ಅವಘಡವನ್ನು ಪ್ರಸ್ತಾಪಿಸಿದ ಅವರು, ಸ್ಫೋಟಕ ತುಂಬಿದ ವಾಹನಗಳು ಚಿತ್ರ ದುರ್ಗ-ದಾವಣಗೆರೆ ಮೂಲಕ ಹೆಬ್ಬಾಳು ಟೋಲ್‍ನಲ್ಲಿ ಹಾದು ಹೋಗಿವೆ. ಸ್ಫೋಟಕ ವಾಹನಗಳ ನಡುವಿನ ಅಂತರ ಕೂಡ ನಿರ್ವಹಿಸಲಾಗಿಲ್ಲ. ಜೊತೆ ಜೊತೆಗೇ ತೆರಳಿವೆ. ಅಕಸ್ಮಾತ್ ಇಲ್ಲಿ ಸ್ಫೋಟ ಆಗಿದ್ದರೂ ಯಥೇಚ್ಛವಾಗಿ ಹಾನಿಯಾಗುತ್ತಿತ್ತು ಎಂದು ತಿಳಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ಕೆಲಸ ಮಾಡದೇ ಇರುವ ಐಡಲ್ ಕ್ವಾರಿಗಳಿಗೆ 30 ದಿನಗಳ ನೋಟಿಸ್ ನೀಡಿ ಅವಕಾಶ ನೀಡಲಾಗುವುದು ಎಂದರು.
ಸಭೆಯಲ್ಲಿ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಾಲ್ಲೂಕುಗಳ ತಹಶೀಲ್ದಾರರು, ಡಿವೈಎಸ್‍ಪಿಗಳು, ಸಿಪಿಐ ಮತ್ತು ಇತರೆ ಸಿಬ್ಬಂದಿ ಹಾಗೂ ಕ್ರಷರ್ ಮತ್ತು ಕ್ವಾರಿಗಳ ಮಾಲೀಕರು ಹಾಜರಿದ್ದರು.