ದಾವಣಗೆರೆ, ಏ.9 – ಪ್ರತಿ ಗ್ರಾಮದಲ್ಲೂ ಮಕ್ಕಳ ಗ್ರಾಮಸಭೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬ್ರೆಡ್ಸ್ ಸಂಸ್ಥೆ, ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್‌ನ ಕ್ರೀಮ್ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಸಿಆರ್‍ಇಎಎಂ ಯೋಜನೆಯ ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಗ್ರಾಮ ಸಭೆಗಳು ಬಾಲ ಕಾರ್ಮಿಕ ಪದ್ದತಿ, ಬಾಲ್ಯವಿವಾಹದಂತಹ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿ. ಮಕ್ಕಳ ಹಕ್ಕುಗಳ ಸಂಘಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜಿಸಲು ಡಿಡಿಪಿಐ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂದವರು ಹೇಳಿದರು.
ನಮ್ಮ ಎಲ್ಲಾ ಅಧಿಕಾರಿಗಳು ಮಕ್ಕಳ ಸ್ನೇಹಿ ಅಧಿಕಾರಿಗಳಾಗಿದ್ದು ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ ಹಾಗೂ ಮಕ್ಕಳನ್ನು ರಕ್ಷಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಲಿ ದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಮಾತನಾಡಿ, ಮಕ್ಕಳ ರಕ್ಷಣೆ ಹಾಗೂ ಸುರಕ್ಷತೆಗಾಗಿ ಮಹಾನಗರ ಪಾಲಿಕೆ ಬದ್ದವಾಗಿದೆ. ಪಾಲಿಕೆಯ ವ್ಯಾಪ್ತಿಗೆ ಬರುವ ಎಲ್ಲಾ ಶಾಲಾ-ಕಾಲೇಜುಗಳ ಬಳಿ ರಸ್ತೆ ತಡೆಯನ್ನು ಹಾಕಿ ನಾಮಫಲಕಗಳನ್ನು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಳೆದೆರಡು ವರ್ಷಗಳಲ್ಲಿ ಮನೆ ಬಿಟ್ಟು ಓಡಿಹೋಗಿದ್ದ ಸುಮಾರು 800 ಮಕ್ಕಳನ್ನು ರೈಲು ನಿಲ್ದಾಣಗಳಲ್ಲಿ ಪತ್ತೆ ಹಚ್ಚಿ, ಅವರಿಗೆ ಕೌನ್ಸೆಲಿಂಗ್ ನಡೆಸಿ ಅವರನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಮಾತನಾಡಿ, ಪೋಷಕರು ಮಕ್ಕಳ ಮೇಲೆ ಅಂಕ ಗಳಿಕೆಯ ಒತ್ತಡ ಹಾಕುವುದನ್ನು ನಿಲ್ಲಿಸಿ, ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಬೆಳೆಯಲು ಬಿಡಬೇಕು. ಶಿಕ್ಷಕರು ಮಕ್ಕಳಲ್ಲಿರುವ ವಿಶೇಷ ಆಸಕ್ತಿ ಗುರುತಿಸಿ ಪೋಷಕರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಇಂದಿಗೂ ಅನೇಕ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಅವರನ್ನು ಗುರುತಿಸಿ ಸಹಾಯ ಮಾಡುವ ಅಭಿಲಾಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಅವರಿಗೆ ಸನ್ಮಾನಿಸಲಾಯಿತು.
ಇದೇ ವೇಳೆ ‘ಮಕ್ಕಳಿಗಾಗಿ ಮಕ್ಕಳ ಹಕ್ಕು’ ಎಂಬ ಪುಸ್ತಕವನ್ನು ಜಿಲ್ಲಾಧಿಕಾರಿ ಬೀಳಗಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ನಾಯ್ಕ. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್ ಕುಮಾರ್, ಕ್ರೀಮ್ ಯೋಜನೆ ಕಾರ್ಯಕಾರಿ ನಿರ್ದೇಶಕ ಫಾ. ಜಾಯ್ ನೆಡುಂಪರಂಬಿಲ್ ಮತ್ತಿತರರು ಉಪಸ್ಥಿತರಿದ್ದರು.
ಬಿ. ಶ್ರೀನಿವಾಸ್ ಪ್ರಾರ್ಥಿಸಿದರು, ಅರ್ಶದ್ ಅಲಿ ಸ್ವಾಗತಿಸಿದರು. ಬಿ. ಮಂಜಪ್ಪ ನಿರೂಪಿಸಿದರೆ, ಎ.ಟಿ. ವಸಂತ ಕುಮಾರ್ ವಂದಿಸಿದರು.