ಬುದ್ದಿ ಪ್ರಳಯದಿಂದಾಗುವ ಅನಾಹುತ ವರ್ಣನಾತೀತ

ಶರಣ ಸಂಗಮದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಫೆ.7- ಜಲ ಪ್ರಳಯ, ಭೂ ಪ್ರಳಯ, ಜ್ವಾಲಾಮುಖಿ ಮತ್ತು ಮಹಾ ಪ್ರವಾಹಗಳಿಂದಾಗುವ ಅನಾಹುತಕ್ಕಿಂತ ಬುದ್ದಿ ಪ್ರಳಯದಿಂದಾಗುವ ಅನಾಹುತ ವರ್ಣನಾತೀತ ಎಂದು ವಿರಕ್ತ ಮಠದ ಚರಮೂರ್ತಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಶಿವಯೋಗಾಶ್ರಮದ ಬಸವ ಕೇಂದ್ರದ ಆವರಣದಲ್ಲಿ ಬಸವ ಕೇಂದ್ರ ಶ್ರೀ ಮುರುಘರಾಜೇಂದ್ರ ವಿರಕ್ತ ಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಮೊನ್ನೆ ಹಮ್ಮಿಕೊಳ್ಳಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಕೆರಳುವಿಕೆ ಮತ್ತು ಸಮತೋಲನ ವಿಷಯ ಕುರಿತು ಶ್ರೀಗಳು ಆಶೀರ್ವಚನ ನೀಡಿದರು.

ಪ್ರತಿಯೊಬ್ಬರು ಸಮತೋಲನದ ನಡೆ ಮತ್ತು ನುಡಿಯನ್ನು ರೂಢಿಸಿಕೊಂಡಾಗ ಬದುಕು ಪ್ರಬುದ್ಧವಾಗಲಿದೆ. ಶರೀರ, ಇಂದ್ರಿಯ ಮತ್ತು ಬುದ್ದಿಯ ಸಮತೋಲನ ಸಾಧನೆಯು ವಿಶಿಷ್ಟವಾದ ಸಾಧನೆ. ಇಂತಹ ಸಾಧನೆ ಸಾಧ್ಯವಾದಾಗ ಮಾತು, ವರ್ತನೆ ಮತ್ತು ನಿರ್ಣಯಗಳಲ್ಲಿಯೂ ಸಮತೋಲನ ಕಾಣಬ ಹುದು. ಪ್ರಬುದ್ಧ ನಡೆ-ನುಡಿ ಇದ್ದವರೇ ಎಲ್ಲಾ ಕಾಲಕ್ಕೂ ಆದರ್ಶ. ಅವರೇ ಬುದ್ಧ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ದಾರ್ಶನಿಕರು. ದಾರ್ಶನಿಕರ ಸಮತೋಲನ ನಡೆ-ನುಡಿಯ ದಾರಿಯಲ್ಲಿ ಸಾಗೋಣ ಎಂದು ಹೇಳಿದರು.

ಮನಸ್ಸು ಕೆರಳಿಸುವ ಕೋಪಕ್ಕೆ ಬುದ್ಧಿ ನೀಡದೇ ಸಮಚಿ ತ್ತದಿಂದ ಇರಬೇಕು. ಇದಕ್ಕೆ ಶಿವಯೋಗ, ಧ್ಯಾನ ಮಾಡಿ ಸಮಾಧಾ ನಿಗಳಾಗಬೇಕು. ಕೆರಳಿಸಲೆಂದೇ ನಿಂದಕರು ನಿಂದಿಸಿದಾಗ ಕಿವಿಗೊಡಬಾರದು. ಬೆಳವಣಿಗೆಯ ಹಾದಿಯತ್ತ ಗಮನವಿಟ್ಟು ಸಮಾಧಾನಿಗಳಾಗಬೇಕೆಂದರು. ಪ್ರೇರಣೆ ತುಂಬಿದಾಗ ಸತ್ಕಾರ್ಯ ಗಳು ನಡೆದು ಸಮಾಜ, ದೇಶಕ್ಕೆ ಒಳಿತು ಕಾಣಬಹುದು. ಇದುವೇ ಬದುಕಿನ ಸಾರ್ಥಕತೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮುಗ್ಧ ಜನರನ್ನು ಪ್ರಚೋದಿಸಿ ಸಮಾಜದ ಶಾಂತಿ ಕದಡುವಂತಹುದು ಹೆಚ್ಚಾಗಿರುವುದು ದೊಡ್ಡ ದುರಂತ ಎಂದು ವಿಷಾದಿಸಿದರು.

ಪ್ರೇರಣೆ ಬದುಕನ್ನು ಅರಳಿಸಿದರೆ, ಪ್ರಚೋದನೆ ಕೆರಳಿಸಲಿದೆ. ಪ್ರಚೋದನೆಗಳಿಗೆ ಮುಗ್ಧರು ಒಳಗಾಗದೇ ಸ್ವಂತವಾಗಿ ಆಲೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕೆಂದರು.

ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ಉಪನ್ಯಾಸ ನೀಡಿದರು. ಇದೇ ವೇಳೆ ಲಿಂಗದೇವಿ ಗುಬ್ಬಿ ಅವರು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದೇಹದಾನದ ವಾಗ್ದಾನ ಮಾಡಿದರು. 

ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಅಹಿಂದ ಪ್ರಜಾಶಕ್ತಿಯ ರಾಜ್ಯಾಧ್ಯಕ್ಷ ಜಿ.ಎಂ. ಗೋವಿಂದರಾಜು ಸೇರಿದಂತೆ ಇತರರು ಇದ್ದರು. ರುಕ್ಮಾಬಾಯಿ ಅವರಿಂದ ವಚನ ಗಾಯನ ನಡೆಯಿತು. ವಿರಕ್ತಮಠದ ಬಸವಕಲಾ ಲೋಕದಿಂದ ವಚನ ಸಂಗೀತ ಹಾಡಲಾಯಿತು. ವಿರಕ್ತ ಮಠದ ಶಿವಬಸಯ್ಯ ಭಕ್ತಿ ಗೀತೆ ಹಾಡಿದರು. ಫಾರೂಕ್ ನಿರೂಪಿಸಿದರು. ರೋಷನ್ ಸ್ವಾಗತಿಸಿದರು.

error: Content is protected !!