ನವದೆಹಲಿ/ಡೆಹರಾಡೂನ್ ಫೆ. 7 – ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ ಸಂಭವಿಸಿ ಅಲಕಾನಂದ ನದಿ ಜಾಲದಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಇದರಿಂದಾಗಿ ಜಲ ವಿದ್ಯುತ್ ಘಟಕಗಳು ಕೊಚ್ಚಿ ಹೋಗಿದ್ದು, ನೂರಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿರುವ ಕಳವಳ ಉಂಟಾಗಿದೆ.
ನಂದಾದೇವಿ ಹಿಮನದಿಯ ಭಾರೀ ಪ್ರಮಾಣದ ಹಿಮ ಕುಸಿತವಾಗಿ ಧೌಲಿ ಗಂಗಾ, ಋಷಿ ಗಂಗಾ ಹಾಗೂ ಅಲಕಾ ನಂದ ನದಿಗಳಲ್ಲಿ ಕ್ಷಿಪ್ರ ಪ್ರವಾಹ ಉಂಟಾಗಿದೆ. ಈ ಎಲ್ಲ ನದಿಗಳು ಗಂಗಾ ನದಿಯ ಉಪನದಿಗಳಾಗಿವೆ. ಪ್ರವಾಹ ದಿಂದ ಬೆಟ್ಟಗಳ ಪ್ರದೇಶದಲ್ಲಿ ವ್ಯಾಪಕ ಆತಂಕ ಹಾಗೂ ಹಾನಿ ಉಂಟಾಗಿದೆ.
ಎನ್.ಟಿ.ಪಿ.ಸಿ.ಯ ತಪೋವನ್ – ವಿಷ್ಣುಘಡ ಜಲ ವಿದ್ಯುತ್ ಯೋಜನೆ ಹಾಗೂ ಋಷಿ ಗಂಗಾ ಜಲ ವಿದ್ಯುತ್ ಯೋಜನೆಗಳಿಗೆ ತೀವ್ರ ಹಾನಿಯಾಗಿದೆ. ಇಲ್ಲಿನ ಹಲವಾರು ಕಾರ್ಮಿಕರು ನೀರು ತುಂಬಿದ ಕೊಳವೆಗಳಲ್ಲಿ ಸಿಲುಕಿರುವ ಆತಂಕವಾಗಿದೆ. ತಪೋವನ ಯೋಜನೆ ಪ್ರದೇಶದಲ್ಲಿ ಸಿಲುಕಿದ್ದ 16 ಜನರನ್ನು ರಕ್ಷಿಸಲಾಗಿದೆ. ಆದರೂ, 125 ಜನರು ಕಾಣೆಯಾಗಿದ್ದಾರೆ. ರಾತ್ರಿಯಾದಂತೆ ಸೂಕ್ಷ್ಮವಾಗಿರುವ ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಕಷ್ಟವಾಗುತ್ತಿದೆ.
ಏಳು ಮೃತದೇಹಗಳನ್ನು ಇದುವರೆಗೂ ವಶಪಡಿಸಿಕೊಳ್ಳಲಾಗಿದೆ ಹಾಗೂ ಕನಿಷ್ಠ 125 ಜನರು ಕಾಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಪ್ರವಾಹಕ್ಕೆ ಸಿಲುಕಿ ನದಿಗಳ ಮಾರ್ಗ ದಲ್ಲಿದ್ದ ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಹಲವಾರು ಜನನಿಬಿಡ ಪ್ರದೇಶಗಳಲ್ಲೂ ಹಾನಿಯಾಗಿರುವ ಆತಂಕವಿದೆ. ಹಲವಾರು ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ನದಿ ತಳ ಪಾತ್ರದಲ್ಲಿರುವ ಜನರು ಸುರಕ್ಷಿತವಾಗಿರುವುದನ್ನು ಅಧಿಕಾರಿಗಳು ಸಂಜೆ ವೇಳೆ ಖಚಿತಪಡಿಸಿದ್ದಾರೆ.
ರಿಶಿ ಗಂಗಾಗೆ ನಿರ್ಮಿಸಲಾಗಿದ್ದ 13.2 ಮೆಗಾವ್ಯಾಟ್ ಸಣ್ಣ ಜಲ ವಿದ್ಯುತ್ ಘಟಕ ಕೊಚ್ಚಿ ಹೋಗಿದೆ. ಆದರೆ, ನೀರಿನ ಮಟ್ಟ ನಿಯಂತ್ರಿಸಿದ್ದರಿಂದ ನದಿಯ ತಳಪಾತ್ರದಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ ತಿಳಿಸಿದ್ದಾರೆ.
2013ರ ಕೇದಾರನಾಥ ಪ್ರವಾಹದ ಕಹಿ ನೆನಪು
ಡೆಹರಾಡೂನ್, ಫೆ. 7 – ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತದಿಂದ ಉಂಟಾಗಿರುವ ಭಾರೀ ಪ್ರವಾಹದ ಹಾನಿಯು 2013ರ ಕೇದಾರನಾಥ ಪ್ರವಾಹದ ಕಹಿ ನೆನಪು ಮರಳುವಂತೆ ಮಾಡಿದೆ. ಸೂಕ್ಷ್ಮ ಪರಿಸರ ಹೊಂದಿರುವ ರಾಜ್ಯದಲ್ಲಿ ಆಗಿನ ಪ್ರವಾಹದಿಂದ ವ್ಯಾಪಕ ಹಾನಿಯಾಗಿತ್ತು.
2013ರ ಜೂನ್ 16-17ರಂದು ಸಂಭವಿಸಿದ್ದ ಧಾರಾಕಾರ ಮಳೆಯಿಂದಾಗಿ ಹಿಂದೆಂದೂ ಕಾಣದ ವ್ಯಾಪಕ ಹಾನಿಯಾಗಿತ್ತು. ಮೇಘಸ್ಫೋಟದಿಂದಾಗಿ ಕೇದಾರನಾಥದಲ್ಲಿರುವ ಚೊರಬಾರಿ ಕೆರೆ ದಂಡೆ ಒಡೆದು ದೊಡ್ಡ ಪ್ರಮಾಣದ ಕ್ಷಿಪ್ರ ಪ್ರವಾಹ ಉಂಟಾಗಿತ್ತು. ಇದರಿಂದ ಮೂಲಭೂತ ಸೌಲಭ್ಯ, ಕೃಷಿ ಜಮೀನುಗಳಿಗೆ ಭಾರೀ ಹಾನಿಯಾಗುವ ಜೊತೆಗೆ ಸಾವು – ನೋವುಗಳು ಸಂಭವಿಸಿದ್ದವು.
ಆದರೆ, ಆಗ ಮಳೆಯಿಂದ ವಿನಾಶ ಉಂಟಾಗಿತ್ತು. ಭಾನುವಾರ ಶುಭ್ರ ಹಗಲಿನಲ್ಲಿ ವಿಕೋಪ ಉಂಟಾಗಿದೆ. ಈ ಬಾರಿ ವಾತಾವರಣ ಅನುಕೂಲಕರವಾಗಿದ್ದರಿಂದ ತ್ವರಿತವಾಗಿ ನೆರವು ರವಾನಿಸಲು ಸಾಧ್ಯವಾಗಿದೆ. ತಪೋವನ – ರೇನಿ ಜಲ ವಿದ್ಯುತ್ ಘಟಕದಲ್ಲಿ 150 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ 125 ಜನ ಕಾಣೆಯಾಗಿದ್ದು, ಅವರ ರಕ್ಷಣೆಗೆ ಅತಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಜಲ ವಿದ್ಯುತ್ ಘಟಕದ ಸುರಂಗಗಳಲ್ಲಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ಇನ್ನೊಂದು ಸುರಂಗದಲ್ಲೂ ಸೈನ್ಯದ ಜೊತೆಗೂಡಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಪ್ರವಾಹದಿಂದ ಢೌಲಿ ಗಂಗಾ ನದಿಗೆ ತಪೋವನದಲ್ಲಿ ನಿರ್ಮಿಸಲಾಗಿರುವ ಎನ್.ಟಿ.ಪಿ.ಸಿ.ಯ ಜಲ ವಿದ್ಯುತ್ ಘಟಕಕ್ಕೂ ಹಾನಿಯಾಗಿದೆ. ಆದರೆ, ನೆರೆಯ ಹಳ್ಳಿಗಳಿಗೆ ಯಾವುದೇ ಅಪಾಯ ಎದುರಾಗಿಲ್ಲ ಎಂದು ಕೇಂದ್ರ ಜಲ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಘಟಕದ ಸಮೀಪ ಇರುವ ರೇನಿ ಹಳ್ಳಿ ಬಳಿಯ ಸೇತುವೆ ಕುಸಿದಿದೆ. ಇದರಿಂದಾಗಿ ಗಡಿ ಠಾಣೆಯ ಬಳಿಯ ಸಂಪರ್ಕಕ್ಕೆ ತೀವ್ರ ಅಡಚಣೆ ಎದುರಾಗಿದೆ.
ಬೆಳಿಗ್ಗೆ 10.45ರ ಸಮಯದಲ್ಲಿ ಪ್ರವಾಹದ ಮಾಹಿತಿ ದೊರೆತಿತ್ತು. ನಂತರ ಜೋಶಿಮಠದಲ್ಲಿರುವ ಗಡಿ ಭದ್ರತಾ ಪಡೆಗಳು ಒಂದು ಗಂಟೆಯಲ್ಲೇ ಕಾರ್ಯಪ್ರವೃತ್ತವಾಗಿವೆ.
ಪೌರಿ, ತೆಹ್ರಿ, ರುದ್ರಪ್ರಯಾಗ, ಹರಿದ್ವಾರ ಹಾಗೂ ಡೆಹರಾಡೂನ್ ಸೇರಿ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಐ.ಟಿ.ಬಿ.ಪಿ. ಹಾಗೂ ರಾಷ್ಟ್ರೀಯ ವಿಕೋಪ ಸ್ಪಂದನಾ ದಳಗಳನ್ನು ನೆರವು ಕಾರ್ಯಾಚರಣೆಗೆ ರವಾನಿಸಲಾಗಿತ್ತು.
ಜೋಶಿಮಠದಲ್ಲಿ ಉಂಟಾಗಿರುವ ಹಿಮಪಾತದ ಬಗ್ಗೆ ತೀವ್ರ ಕಳವಳವಾಗಿದೆ ಎಂದಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ಜನರ ಸುರಕ್ಷತೆಗಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಿದ್ದೇವೆ. ಈ ಸಂದರ್ಭದಲ್ಲಿ ದೇಶ ಉತ್ತರಾಖಂಡದ ಜೊತೆಗೆ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮುಖ್ಯಮಂತ್ರಿ ರಾವತ್ ಜೊತೆ ಮಾತನಾಡಿದ್ದು, ಪರಿಸ್ಥಿತಿ ನಿಭಾಯಿಸಲು ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಯಾವುದೇ ಮಳೆಯ ಮುನ್ನೆಚ್ಚರಿಕೆ ಇಲ್ಲ ಎಂದು ಹವಾಮಾನ ಇಲಾಖೆ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ.