ಜನಸ್ಪಂದನ ಸಭೆ ದೂರು ನೀಡುವ ವೇದಿಕೆಯಲ್ಲ

ಅಧಿಕಾರಿಗಳ ವಿರುದ್ಧ ದೂರು ನೀಡುವ ಅರ್ಜಿಗಳ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ

ದಾವಣಗೆರೆ ಏ. 8 – ಜನಸ್ಪಂದನ ಸಭೆಯನ್ನು ದೂರು ನೀಡುವ ವೇದಿಕೆಯನ್ನಾಗಿಸಿ ಕೊಂಡರೆ  ಸಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಜನಸ್ಪಂದನ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ದೂರು ಅರ್ಜಿ, ವೈಯಕ್ತಿಕ ಅಥವಾ ಇನ್ನಿತರೆ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರಿಗಳ ಹಾಗೂ ವ್ಯವಸ್ಥೆಯ ವಿರುದ್ಧ ದೂರು ನೀಡಿಕೆಯ ಅರ್ಜಿಗಳು ಹೆಚ್ಚು ಸಲ್ಲಿಕೆಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡಿ ನೋವು ಅನುಭವಿಸಿದವರು, ಮೂಲಭೂತ ಸೌರ್ಕಯಗಳ ಕೊರತೆ ಎದುರಿಸುವವರು. ಹೀಗೆ ವಿವಿಧ ಸವಲತ್ತು ಪಡೆಯದೆ ಶೋಷಿತರಾದವರ ಧ್ವನಿಯಾಗಲು ಜನಸ್ಪಂದನ ಸಭೆ ನಡೆಸಲಾಗುತ್ತಿದೆ.  ಈ ಸಭೆಯ ಮೂಲಕ ಹಲವರ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲಾಗುತ್ತಿದೆ.  ಆದರೆ ಅದನ್ನು ದೂರು ನೀಡುವ ವೇದಿಕೆಯನ್ನಾಗಿಸಿಕೊಳ್ಳಬಾರದು ಎಂದರು.

ಅಧಿಕಾರಿಗಳೂ ಸಹ ಸಾರ್ವಜನಿಕ ಕುಂದುಕೊರತೆಗಳು, ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಂಕುಚಿತ ಮನೋಭಾವದಿಂದ ನೋಡದೆ, ವಿಶಾಲ ಮನಸ್ಸಿನಿಂದ ನೋಡಬೇಕು.  ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಿ ಎಂದು  ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೆ ಶನಿವಾರ ಕುಗ್ರಾಮಗಳಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ.  ತಹಶೀಲ್ದಾರರು ಕೂಡ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದರು.

ನೆರವಿಗಾಗಿ ಪೊಲೀಸ್ ಪತ್ನಿ ಮನವಿ: ಪೊಲೀಸ್ ಇಲಾಖೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ, ಹೀಗಾಗಿ ತಮ್ಮ ಕುಟುಂಬ ತೀವ್ರ ತೊಂದರೆಗೆ ಸಿಲುಕಿದೆ, ಆರ್ಥಿಕ ಹಾಗೂ ಚಿಕಿತ್ಸಾ ನೆರವು ಒದಗಿಸುವಂತೆ ಮಹಿಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು,  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಮಸಾಲೆ ವ್ಯಾಪಾರಕ್ಕೆ ಪತ್ನಿಗೂ ಸೌಲ ಸೌಲಭ್ಯ ನೀಡಿ: ಬೀದಿ ಬೀದಿಗಳಲ್ಲಿ ತಿರುಗಾಟ ನಡೆಸಿ ಮಸಾಲೆ ವ್ಯಾಪಾರ ಮಾಡುವ ದಾವಣಗೆರೆಯ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಕೂಡ ವ್ಯಾಪಾರ ಮಾಡಲು ಸಿದ್ಧವಿದ್ದು, ಅಗತ್ಯ ಸಾಲ ಸೌಲಭ್ಯ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ದಂಪತಿಗಳಿಬ್ಬರಿಗೂ ವ್ಯಾಪಾರ ಚಟುವಟಿಕೆ ನಡೆಸಲು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಒಂದು ವಾರದ ಒಳಗಾಗಿ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಹಾಗೂ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ನಗರದ ವೃದ್ಧ ಬಸಪ್ಪ, ವಸತಿ ಸೌಲಭ್ಯ ನೀಡುವಂತೆ ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಾಗ, ಬರುವ ದಿನಗಳಲ್ಲಿ ತಮಗೆ ಆದ್ಯತೆ ಮೇರೆಗೆ ಮನೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಗುತ್ತಿಗೆ ಆಧಾರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗೆ ತಮ್ಮನ್ನು 6 ತಿಂಗಳ ಅವಧಿಗೆ ನೇಮಿಸಲಾಗಿತ್ತು.  ಆದರೆ ಕೇವಲ ಎರಡು ತಿಂಗಳ ಒಳಗಾಗಿಯೇ ತಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ನಮಗೆ ಸೇವೆಯಲ್ಲಿ ಮುಂದುವರೆಯಲು ಅನುವು ಮಾಡಿಕೊಡಬೇಕು ಎಂದು ಮೂವರು ಮಹಿಳಾ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಎಸ್ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್,  ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!