ಕದಂಬ ಪಾರ್ಕ್ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಭರವಸೆ
ದಾವಣಗೆರೆ, ಫೆ.3- ಬೆಂಗಳೂರಿನ ಜಯನಗರ ಮಾದರಿಯಲ್ಲಿ ಸ್ಥಳೀಯ ಜಯ ನಗರ ಸುತ್ತಮುತ್ತಲ ಪ್ರದೇಶವೂ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕೈಗೊಂಡು ಜನರ ಋಣ ತೀರಿಸುವೆ ಎಂದು ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದರು.
ಇಲ್ಲಿನ 35ನೇ ವಾರ್ಡಿನ ಜಯನಗರ `ಸಿ’ ಬ್ಲಾಕ್‍ನ ನಾಗರಿಕ ಹಿತರಕ್ಷಣಾ ಸಮಿತಿ ಯಿಂದ ಮೊನ್ನೆ ಏರ್ಪಾಡಾಗಿದ್ದ ಕದಂಬ ಪಾರ್ಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು ನೋಡಿದವರೇ ಈ ಭಾಗದಲ್ಲಿ ಹೆಚ್ಚಾಗಿ ಮನೆ ಕಟ್ಟಿಕೊಂಡಿದ್ದು, ರಾಜಧಾನಿ ವಾತಾವರಣ ಇಲ್ಲೂ ಕಂಡು ಬರುತ್ತಿದೆ ಎಂದರು.
ಸ್ಥಳೀಯ ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ಪಾರ್ಕ್ ಅಭಿವೃದ್ಧಿ, ನಿರ್ವಹಣೆಗೆ ಮುಂದಾಗಿದ್ದು ಇತರರಿಗೂ ಮಾದರಿಯಾಗಿದೆ. ಅದೇ ರೀತಿ ಶುದ್ಧ ಪ್ರಾಣವಾಯು ಸಿಗುವಂತಾಗಲು ಸಸಿಗಳನ್ನು ನೆಟ್ಟು, ಅವುಗಳನ್ನು ದೊಡ್ಡ ಮರಗಳನ್ನಾಗಿ ಬೆಳೆಸುವ ಕೆಲಸ ಸಹ ಆಗಬೇಕು. ಮುಂದಿನ ದಿನಗಳಲ್ಲಿ ಸಮಿತಿಯ ಎಲ್ಲಾ ಬೇಡಿಕೆಗಳನ್ನು ಈ ಭಾಗದ ಪಾಲಿಕೆ ಸದಸ್ಯರಾದ ಉಮಾ ಪ್ರಕಾಶ್ ಅವರು ಅಧಿಕಾರಿಗಳೊಡನೆ ಚರ್ಚಿಸಿ, ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಪಾಲಿಕೆ ಸದಸ್ಯರೂ ಆದ ಮಾಜಿ ಮೇಯರ್ ಶ್ರೀಮತಿ ಉಮಾ ಪ್ರಕಾಶ್ ಮಾತ ನಾಡಿ, ಕಳೆದ ಸಲ ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಆಗಲಿಲ್ಲ. ಅದಕ್ಕೂ ಮುಂಚೆ ತಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವಾಗಿತ್ತು. ಅಂದು ಸಚಿವರಾಗಿದ್ದ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರರ ಮಾರ್ಗದರ್ಶನ ದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೆವು. ಪಾಲಿಕೆ ಸಿಬ್ಬಂದಿ ಕೊರತೆ ಮಧ್ಯೆಯೂ ಸಾಕಷ್ಟು ಅಭಿವೃದ್ಧಿ ಕಾರ್ಯವಾ ಗುತ್ತಿದೆ. ಸ್ಥಳೀಯರು ಪಾರ್ಕ್ ನಿರ್ವಹಣೆಗೆ ಕೈಜೋಡಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯವನ್ನು 35ನೇ ವಾರ್ಡ್‍ನ ಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿಟುವಳ್ಳಿ ಭಾಗಕ್ಕೆ, ಹೊಸ ಬಡಾವಣೆಗಳಿಗೆ ನೀರು ಕೊಟ್ಟ ಭಗೀರಥ ಶಾಸಕ ಎಸ್.ಎ.ರವೀಂದ್ರನಾಥ್. ಪಾಲಿಕೆಗೆ ಸಿಎಂ ವಿಶೇಷಾನುದಾನ 100 ಕೋಟಿ ಬಂದಾಗ 5-6 ಕೋಟಿ ವೆಚ್ಚದಲ್ಲಿ ಈ ಭಾಗದ ಅಭಿವೃದ್ಧಿಗೆ ಕಾರಣರಾಗಿದ್ದರು. ನೂರಾರು ಪಾರ್ಕ್ ರಕ್ಷಣೆ ಮಾಡಿದ್ದು, ಟಾರ್ ರಸ್ತೆ ಆಗಿದ್ದು ರವೀಂದ್ರನಾಥ್ ಸಚಿವರಿದ್ದ ಅವಧಿಯಲ್ಲಿ.
– ಎ.ವೈ.ಪ್ರಕಾಶ್, ಹಿರಿಯ ವಕೀಲ, ಬಿಜೆಪಿ ಮುಖಂಡ.
ಕಸದ ಗಾಡಿ ಸಮಸ್ಯೆ ಬಗ್ಗೆ ಸಿಬ್ಬಂದಿಯೂ ದೂರುತ್ತಿದ್ದಾರೆ. ಮನೆಯ ಮುಂದೆಯೇ ಕಸದ ಗಾಡಿ ಮೈಕ್‍ನಲ್ಲಿ ಹಾಡು ಹಾಕಿ ಕೊಂಡು ಬಂದು ನಿಂತರೂ ಜನರು ಕಸ ಹಾಕಲು ತಡ ಮಾಡುತ್ತಾರೆ. ಇದರಿಂದ ಮುಂದೆ ಹೋಗಲು ಸಿಬ್ಬಂದಿಗೂ ತೊಂದರೆಯಾಗುತ್ತಿದೆ. ಕಸದ ಗಾಡಿ ಮನೆ ಬಳಿ ಬಂದಾಗ ತ್ವರಿತವಾಗಿ ಕಸ ಹಾಕಿ, ಸ್ವಚ್ಛತೆಗೆ ಜನರೂ ಸ್ಪಂದಿಸಬೇಕು ಎಂದು ಅವರು ಕರೆ ನೀಡಿದರು.
ಜಯನಗರ, ಎಸ್ಸೆಸ್ ಹೈಟೆಕ್ ಬಡಾ ವಣೆ, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಶಕ್ತಿ ನಗರದಲ್ಲೂ ಅಭಿವೃದ್ಧಿ ಕೈಗೊಳ್ಳ ಲಾಗುವುದು. ರಾಜ ಕಾಲುವೆಯ ದುರಸ್ತಿ, ನಾಮಫಲಕ ಅಳವಡಿಕೆ, ರಸ್ತೆಯಂತಹ ಮೂಲ ಸೌಕರ್ಯ ಕಲ್ಪಿಸಲಾಗುವುದು. ಖಾಲಿ ನಿವೇಶನದಲ್ಲಿ ಕಸ ಸುರಿಯಬೇಡಿ ಎಂದು ಅವರು ಮನವಿ ಮಾಡಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಹಿಂದೆ ನೂರಾರು ಪಾರ್ಕ್‍ಗಳಿಗೆ ದೂರದೃಷ್ಟಿಯಿಂದ ಬೇಲಿ, ಕಾಂಪೌಂಡ್ ಹಾಕಿಸುವ ಮೂಲಕ ಆಗ ಸಚಿವರಾಗಿದ್ದ ಎಸ್.ಎ. ರವೀಂದ್ರನಾಥ್ ಪಾರ್ಕ್ ಉಳಿಯಲು ಕಾರಣರಾಗಿ ದ್ದಾರೆ ಎಂದರು. ಕದಂಬ ಉದ್ಯಾನವನವೆಂಬ ನಾಮಕರಣ ಮಾಡಿ, ಪಾರ್ಕ್ ಅಭಿವೃದ್ಧಿಗೆ ಸ್ಥಳೀಯರೇ ಮುಂದಾಗಿದ್ದು ಇತರರಿಗೂ ಪೇರಣೆಯಾಗಿದ್ದಾರೆ ಎಂದು ಶ್ಲ್ಯಾಘಿಸಿದರು.
ಸಮಿತಿ ಅಧ್ಯಕ್ಷ ಪಿ.ಅಂಜನಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪ್ರಸನ್ನಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಹಿರಿಯ ವಕೀಲರೂ ಆದ ದೂಡಾ ಮಾಜಿ ಅಧ್ಯಕ್ಷ ಏಕನಾಥ್ ರಾಯ್ಕರ್, ಎ.ವೈ.ಪ್ರಕಾಶ್, ಪಾಲಿಕೆ ಸದಸ್ಯ ಕೆ.ಎಂ.ವೀರೇಶ್, ಹಿರಿಯ ಸಾಹಿತಿ ಎಸ್.ಟಿ. ಶಾಂತ ಗಂಗಾಧರ್, ಬಿ.ಎನ್. ಬಿಕ್ಕೋಜಪ್ಪ, ಟಿ.ಈ.ರುದ್ರಪ್ಪ, ವೈ.ತಿಪ್ಪೇಸ್ವಾಮಿ ಶೆಟ್ರು, ಪಿ.ಎಸ್.ನಾಗರಾಜ್, ವೈ.ಅನಂತ ಶೆಟ್ರು, ಡಿ.ರವಿಕುಮಾರ್, ಪಂಕಜಾ, ಸುರೇಶ್ ವಿ.ಮಸಲವಾಡ, ನಿಂಗಪ್ಪ ಇಟಗಿ, ಜಿ.ಪಿ. ರುದ್ರಪ್ಪ, ಪದ್ಮಾಕುಮಾರಿ, ಎಚ್.ಎಸ್.ಮುರುಗೇಶ್, ಶೋಭಾ, ಡಿ.ಆರ್. ವಸಂತ್, ಡಿ.ಭೈರಪ್ಪ, ಎನ್.ಬಿ. ರೇವಣಸಿದ್ದಪ್ಪ ಇತರರು ಇದ್ದರು.