ಜಿಲ್ಲಾಸ್ಪತ್ರೆಗೆ ಡಿಸಿ ದಿಢೀರ್ ಭೇಟಿ

ದಾವಣಗೆರೆ, ಏ. 6- ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, ಎಸ್ಪಿ ಹನುಮಂತರಾಯ ಅವರೊಂದಿಗೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಇಎಂಸಿಯು, ಐಸೋಲೇಷನ್ ಹಾಗೂ ಐಸಿಯು ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುರಿತು ಶಸ್ತ್ರಚಿಕಿತ್ಸಕರು ಮತ್ತು ಇತರೆ ವೈದ್ಯರ ಬಳಿ ವಿಚಾರಿಸಿದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು, ಗುಣಮಟ್ಟದ ಆಹಾರ ಪೂರೈಕೆ, ಆಸ್ಪತ್ರೆಯ ಕೊಠಡಿಗಳನ್ನು ಹಾಗೂ ಹೊರ ಆವರಣದ ಸ್ವಚ್ಚತೆ ಕುರಿತು ವೈಯಕ್ತಿಕ ಗಮನ ಹರಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ವೈದ್ಯರುಗಳು ಹಾಗೂ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಿ ಅವರುಗಳಿಗೆ ಪ್ರಯೋಜನ ಸಿಗುವ ಹಾಗೆ ಕ್ರಮ ವಹಿಸುವಂತೆ ತಿಳಿಸಿದರು. ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗದ ಹಾಗೆ ವ್ಯವಸ್ಥಿತವಾಗಿ ಎಲ್ಲಾ ಸೌಕರ್ಯಗಳು ಸಿಗುವಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು ಸರ್ಕಾರದ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಅವುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಅಲ್ಲದೇ ಕೋವಿಡ್ 19 ಸಾಂಕ್ರಾಮಿಕ ರೋಗಕ್ಕೆ ಎದೆಗುಂದದೆ ಹಗಲು, ರಾತ್ರಿ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗಿದ್ದು, ಈ ಕುರಿತು ಯಾರೂ ಕೂಡ ನಿರ್ಲಕ್ಷ್ಯ ತೋರದೆ ಮಾನವೀಯತೆಯಿಂದ ಕಾರ್ಯ ನಿರ್ವಹಿಸುವಂತೆ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಆಸ್ಪತ್ರೆ ಭೇಟಿ ಮುಗಿದ ನಂತರ ನಗರ ಪ್ರದಕ್ಷಿಣೆ ಸಮಯದಲ್ಲಿ ಮೋತಿ ವೀರಪ್ಪ ಕಾಲೇಜಿನ ಮುಂಭಾಗ ಕೆಲ ವಿದ್ಯಾರ್ಥಿಗಳು ಮಾಸ್ಕ್ ಹಾಕದೇ ಇರುವುದನ್ನು ಗಮನಿಸಿ, ಅವರುಗಳಿಗೆ ಬುದ್ದಿ ಹೇಳಿ ಪುನಃ ತಪ್ಪಾಗದಂತೆ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು.

error: Content is protected !!