ಪಾಲಿಕೆಗೆ ಸೇರಿದ 506 ಮಳಿಗೆಗಳಿಂದ 2.10 ಕೋಟಿ ರೂ. ಬಾಡಿಗೆ ಬಾಕಿ
ದಾವಣಗೆರೆ, ಫೆ.2- ಮಹಾನಗರ ಪಾಲಿಕೆಯ ಮಳಿ ಗೆಗಳನ್ನು ಪಡೆದು ಹಲವಾರು ವರ್ಷಗಳಿಂದ ಬಾಡಿಗೆ ಪಾವತಿ ಸದೇ ಇರುವ ವ್ಯಾಪಾರಸ್ಥರಿಗೆ ಪಾಲಿಕೆ ಅಧಿಕಾರಿಗಳು ಮಳಿಗೆ ಗಳಿಗೆ ಬೀಗ ಜಡಿಯುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರ ನಿರ್ದೇಶನದ ಮೇರೆಗೆ ಪಾಲಿಕೆಯ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಪಾಲಿಕೆಗೆ ಸೇರಿದ ಬಾಡಿಗೆ ಕಟ್ಟಡದ 8 ಮಳಿಗೆಗಳಿಗೆ ಮಂಗ ಳವಾರ ಬೀಗ ಜಡಿದಿದ್ದಾರೆ.
ನಗರದ ವಿವಿಧೆಡೆ ಪಾಲಿ ಕೆಗೆ ಸೇರಿದ 506 ಮಳಿಗೆಗಳಿವೆ. ಕೆಲವರು ಎರಡ್ಮೂರು ತಿಂಗಳು ಗಳಿಂದ ಬಾಡಿಗೆ ಉಳಿಸಿಕೊಂಡಿ ದ್ದರೆ, ಮತ್ತೆ ಕೆಲವರು ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ. ಒಟ್ಟಾರೆ ಇಲ್ಲಿಯವರೆಗೆ 2 ಕೋಟಿ 65 ಲಕ್ಷ ರೂ. ಬಾಡಿಗೆ ಪಾಲಿಕೆಗೆ ಪಾವತಿಯಾಗ ಬೇಕಿತ್ತು. ಆದರೆ ಸುಮಾರು 70 ಲಕ್ಷದಷ್ಟು ಹಣ ಮಾತ್ರ ಪಾವತಿ ಯಾಗಿದೆ. ಈ ಹಿನ್ನೆಲೆಯಲ್ಲಿ ಆಯುಕ್ತರ ಆದೇಶದಂತೆ ಪ್ರತಿ ಮಳಿಗೆ ಮಾಲೀಕರಿಗೂ ಬಾಡಿಗೆ ಪಾವತಿಸಲು ಪ್ರತ್ಯೇಕವಾಗಿ ನೋಟೀಸ್ ಮೂಲಕ ಗಡುವು ನೀಡಿ, ಡಿಸೆಂಬರ್ ವರೆಗೆ 53.78 ಲಕ್ಷ ರೂ. ಬಾಡಿಗೆ ಹಣ ವಸೂಲಿ ಮಾಡಲಾಗಿತ್ತು. ಇನ್ನೂ 2.10 ಕೋಟಿ ರೂ. ಬಾಕಿ ಇದ್ದು, ಇದೀಗ ಪಾಲಿಕೆ ಅಧಿಕಾರಿಗಳು ಬಾಡಿಗೆ ವಸೂಲಿ ಅಭಿಯಾನಕ್ಕಿಳಿದಿದ್ದಾರೆ. ಬಾಡಿಗೆ ಪಾವತಿಸದ ಮಳಿಗೆಗೆ ಬೀಗ ಹಾಕಲಾರಂಭಿಸಿದ್ದಾರೆ.
ನಿವೇಶನ ಸ್ವಚ್ಛಗೊಳಿಸಿ ಮಾಲೀಕರಿಂದ ಹಣ ವಸೂಲಿ: ಆಯುಕ್ತ
ಖಾಲಿ ನಿವೇಶನಗಳಲ್ಲಿರುವ ಕಸ, ಜಾಲಿ ಗಿಡ ಸ್ವಚ್ಛಗೊಳಿಸಿ ಮಾಲೀಕರಿಂದಲೇ ಹಣ ವಸೂಲಿ ಮಾಡಲಾಗುವುದು. ಈ ಕಾರ್ಯ ಮುಖ್ಯ ರಸ್ತೆಗಳ ಬಳಿ ರುವ ಖಾಲಿ ನಿವೇಶನ ಗಳಿಂದ ಆರಂಭವಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಹೇಳಿದ್ದಾರೆ.
ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಹಲವಾರು ಬಾರಿ ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛಗೊಳಿಸುವಂತೆ ನೋಟಿಸ್ ನೀಡಿದ್ದೆವು. ಆದಾಗ್ಯೂ ಸ್ವಚ್ಛಗೊಳಿಸದ ಕಾರಣ , ಮಹಾನಗರ ಪಾಲಿಕೆವತಿಯಿಂದಲೇ ನಿವೇಶನ ಸ್ವಚ್ಛಗೊಳಿಸಿ, ಖರ್ಚನ್ನು ದಂಡದ ರೂಪದಲ್ಲಿ ಕಂದಾಯದ ವಸೂಲಿ ಮಾಡಲಾಗುವುದು ಎಂದು ಹೇಳಿದರು.
ಈಗಾಗಲೇ ಕಂದಾಯ ಕಟ್ಟಿದ್ದರೆ, ಮುಂದಿನ ವರ್ಷದ ಕಂದಾಯದ ಜೊತೆ ಸ್ವಚ್ಛತಾ ಖರ್ಚಿನ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.
ಕಳೆದ ಜನವರಿ ತಿಂಗಳಲ್ಲಿ ಸುಮಾರು 12.50 ಲಕ್ಷ ರೂ. ಬಾಡಿಗೆ ವಸೂಲಾಗಿದ್ದರೆ, ಅಭಿಯಾನ ಆರಂಭದ ಮೊದಲ ದಿನವೇ 10.50 ಲಕ್ಷ ರೂ. ಬಾಡಿಗೆ ವಸೂಲಿಯಾಗಿದೆ.
ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ, ಪಾಲಿಕೆಯ ಮಳಿಗೆಗಳಲ್ಲಿ ವ್ಯವಹಾರ ಮಾಡುತ್ತಿರುವರು ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಿಲ್ಲ. ಈ ಬಗ್ಗೆ ನೋಟೀಸ್ ನೀಡಿ ಅಂತಿಮ ಗಡುವು ನೀಡಿದ್ದರೂ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಬೀಗ ಹಾಕಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಮುಂದುವರೆಯಲಿದೆ ಎಂದು ಹೇಳಿದರು
ಬಾಡಿಗೆ ಅಭಿಯಾನದಲ್ಲಿ ಕಂದಾಯಾಧಿಕಾರಿ ಕೆ.ನಾಗರಾಜ್, ಸಹಾಯಕ ಕಂದಾಯ ಅಧಿಕಾರಿ ಸುನೀಲ್, ಕಂದಾಯ ನಿರೀಕ್ಷಕ ತಿಮ್ಮಯ್ಯ ಹಾಗೂ ಕರ ವಸೂಲಿಗಾರರು ಇದ್ದರು.