ದಾವಣಗೆರೆ: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎನ್ನುವುದು ಎಷ್ಟು ಸತ್ಯವೋ, ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಂಗಣಗಳು ಅತಿ ಅಗತ್ಯ ಎನ್ನುವುದೂ ಸಹ ಅಷ್ಟೇ ಸತ್ಯ.
ಬಹುತೇಕ ನಗರಗಳಲ್ಲಿ ಕ್ರೀಡಾಂಗಣ ಗಳಿ ರುವಂತೆ ದಾವಣಗೆರೆಯಲ್ಲೂ ಜಿಲ್ಲಾ ಕ್ರೀಡಾಂಗ ಣವಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅನೇಕ ಕ್ರೀಡಾಪಟುಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡಿದವರು.
ನಗರ ಶರವೇಗದಲ್ಲಿ ಬೆಳೆಯುತ್ತಲೇ ಇದೆ. ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಕ್ರೀಡಾ ಸಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ದೇವನಗರಿಗೆ ಮತ್ತೊಂದು ಕ್ರೀಡಾಂಗಣ ಇದ್ದರೆ ಚೆನ್ನ ಎನ್ನು ವುದು ಹಲವಾರು ಕ್ರೀಡಾಪಟುಗಳ ಆಶಯವಾಗಿತ್ತು.
ಇದೀಗ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ ಹಳೆ ಭಾಗದಲ್ಲಿರುವ ಎಸ್.ಎಸ್.ಎಂ. ನಗರದಲ್ಲಿ ನೂತನ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ . 6 ಎಕರೆ ಪ್ರದೇಶದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸ್ಟೇಡಿಯಂ ಹಲ ವೈಶಿಷ್ಟ್ಯತೆಗಳನ್ನು ಹೊಂದಲಿದೆ.
ಏನೆಲ್ಲಾ ಇರಲಿದೆ ಸ್ಟೇಡಿಯಂನಲ್ಲಿ ?
6 ಪಥಗಳ 400 ಮೀಟಲ್ ಓಟದ್ ಟ್ರ್ಯಾಕ್ ನಿರ್ಮಿಸಲಾಗುತ್ತದೆ. ಫುಟ್ ಬಾಲ್, ವಾಲಿಬಾಲ್, ಟೆನ್ನಿಸ್, ಕ್ರಿಕೆಟ್, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್ ಪುಟ್ ಎಸೆತದಂತಹ ಆಟಗಳಗೆ ಕ್ರೀಡಾಂಗಣ ನೆರವಾಗಲಿದೆ. ವೀಕ್ಷಕರು ಕುಳಿತುಕೊಳ್ಳಲು 1000 ಆಸನಗಳ ವ್ಯವಸ್ಥೆ ಇರಲಿದೆ. ಭವಿಷ್ಯದಲ್ಲಿ 2 ಸಾವಿರ ಆಸನಗಳಿಗೆ ವಿಸ್ತರಿಸಬಹುದಾಗಿದೆ. ದೈಹಿಕ ಕಸರತ್ತು ನಡೆಸಲು ಜಿಮ್, ಸ್ಟೋರ್ ರೂಂ, ಆಫೀಸ್ ರೂಂ, ಪ್ರಥಮ ಚಿಕಿತ್ಸಾ ಕೊಠಡಿ, ಸಿಸಿ ಟಿವಿ ಕೊಠಡಿ, ಪುರುಷರ ವಸತಿ ಕೊಠಡಿ, ಚಿಕ್ಕ ಅಡುಗೆ ಕೊಠಡಿ, ವಾಶ್ ರೂಂ, ಗ್ಯಾಲರಿ, ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ಶೌಚಾಲಯ ಇತ್ಯಾದಿ ಸೌಲಭ್ಯಗಳನ್ನು ಈ ಸುಸಜ್ಜಿತ ಕ್ರೀಡಾಂಗಣ ಹೊಂದಿರಲಿದೆ. ತುರ್ತು ವೈದ್ಯಕೀಯ ಸಹಾಯಕ್ಕೊಂದು ಕೊಠಡಿ, ಕಾರು ಹಾಗೂ ಬೈಕ್ಗಳ ಪಾರ್ಕಿಂಗ್ ಮಾಡಲು ವ್ಯವಸ್ಥೆ. ಭದ್ರತೆ ವ್ಯವಸ್ಥೆಯಲ್ಲಿ ಪ್ರತ್ಯೇಕ ಆಗಮನ, ನಿರ್ಗಮನ ವ್ಯವಸ್ಥೆ ಇರಲಿದೆ. ಅಲ್ಲದೆ ಕ್ರೀಡಾಂಗಣಕ್ಕೆ ಬರುವ ಜನಸ್ತೋಮ ನಿರ್ವಹಿಸಲು ವಿಶಾಲವಾದ ರಸ್ತೆಗಳನ್ನು ಹೊಂದಿರುವ ಸಂಚಾರಿ ಯೋಜನೆ ರೂಪಿಸಲಾಗುತ್ತಿದೆ.
ಸ್ಮಾರ್ಟ್ ಸಿಟಿ ಲಿ.ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಸುಂದರ ಹಾಗೂ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ನಿರ್ಮಾಣದ ನಂತರ ನಿರ್ವಹಣೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗುವುದು.
ನೂತನ ಕ್ರೀಡಾಂಗಣದಿಂದ ನಗರದ ಕ್ರೀಡಾಪಟುಗಳು, ಅದರಲ್ಲೂ ಹಳೆ ಭಾಗದ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ.
– ರವೀಂದ್ರ ಮಲ್ಲಾಪುರ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ ಲಿ.,
ಇಲ್ಲಿಯವರೆಗೆ ದಾವಣಗೆರೆ ಹಳೆ ಭಾಗದಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತಹ ಕ್ರೀಡಾಂಗಣಗಳು ಇರಲಿಲ್ಲ. ಕ್ರೀಡೆಗಳಲ್ಲಿ ಭಾಗವಹಿಸಲು ಅಥವಾ ಕ್ರೀಡಾಭ್ಯಾಸಕ್ಕೆಂದು ಜಿಲ್ಲಾ ಕ್ರೀಡಾಂಗಣ, ನೇತಾಜಿ ಸುಭಾಶ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣ, ಹೈಸ್ಕೂಲ್ ಮೈದಾನ ಅಥವಾ ಖಾಸಗಿ ಶಾಲಾ ಕ್ರೀಡಾಂಗ ಣಗಳನ್ನು ಆಶ್ರಯಿಸಬೇಕಾಗಿತ್ತು. ಹಳೆಯ ಭಾಗದ ಶಾಲಾ ಮಕ್ಕಳಿಗೆ ಕ್ರೀಡಾಕೂಟಗಳನ್ನು ನಡೆಸಲು ಶಿಕ್ಷಕರು ಹರಸಾಹಸ ಪಡಬೇಕಾಗಿತ್ತು. ಇಂತಹ ಎಲ್ಲಾ ಸಮಸ್ಯೆಗಳಿಗೆ ನೂತನ ಸ್ಟೇಡಿಯಂ ಪರಿಹಾರ ನೀಡಬಲ್ಲದು.
ಇತ್ತೀಚಿನ ದಿನಗಳಲ್ಲಿ ಮುಂಜಾನೆ ವೇಳೆ ಅದರಲ್ಲೂ ವಾರದ ರಜಾ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣವು ಕ್ರೀಡಾಪಟುಗಳು, ವಾಯು ವಿಹಾರಿಗಳಿಂದ ತುಂಬಿ ಹೋಗುತ್ತಿತ್ತು. ಅನೇಕರು ಕ್ರೀಡಾಭ್ಯಾಸಕ್ಕೆ ಜಾಗವಿಲ್ಲವೆಂದು ವಾಪಾಸ್ ಹೋಗುತ್ತಿದ್ದುದೂ ಉಂಟು. ಆದರೆ ಇದೀಗ ನಿರ್ಮಿಸಲಾಗುವ ನೂತನ ಕ್ರೀಡಾಂಗಣ ದಾವಣಗೆರೆ ಕ್ರೀಡಾಪಟುಗಳ ಸಾಧನೆಗೆ ಕೊಡುಗೆ ನೀಡಲಿದೆ.
ಜನತೆ ಮಾಗಾನಹಳ್ಳಿ ಕಡೆಯಿಂದ ಇತ್ತ ಬರಲು ಎರಡು ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಿಸಲೂ ಸಹ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು ಮುಂದಾಗಿದ್ದರಾರೆ.
ಸ್ಮಾರ್ಟ್ ಸಿಟಿಯ ಬಹುಪಾಲು ಯೋಜ ನೆಗಳು ಹೊಸ ಭಾಗಕ್ಕಷ್ಟೇ ಮೀಸಲಾಗುತ್ತವೆ ಎಂಬ ಆರೋಪ ಈ ಯೋಜನೆಯಿಂದ ತುಸು ಕಡಿಮೆಯಾಗಬಹುದು.
ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]