ಶಾಲೆಗೆ ಬಂದ 9, 11ನೇ ತರಗತಿ ವಿದ್ಯಾರ್ಥಿಗಳು

ದಾವಣಗೆರೆ, ಫೆ.1- ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲೂ ಸೋಮವಾರದಿಂದ 9 ಹಾಗೂ 11ನೇ ತರಗತಿಗಳ ವಿದ್ಯಾರ್ಥಿಗಳಿಗೂ ಭೌತಿಕ ತರಗತಿಗಳು ಆರಂಭವಾದವು. ನಗರದಲ್ಲಿ ವಿದ್ಯಾರ್ಥಿಗಳು ಹುರುಪಿನಿಂದಲೇ ಶಾಲೆಗಳಿಗೆ ಆಗಮಿಸಿದ್ದರು.

ಕಳೆದೊಂದು ತಿಂಗಳಿನಿಂದ ಶಾಲೆ, ಕಾಲೇಜು ಗಳಿಗೆ ಹಾಜರಾಗುತ್ತಿರುವ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಜೊತೆಗೆ 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳೂ ಸಹ ಮಾಸ್ಕ್ ಧರಿಸಿ ತರಗತಿಗೆ ಹಾಜರಾಗಿದ್ದರು. 

ಕೆಲವಷ್ಟೇ  ಶಾಲಾ-ಕಾಲೇಜುಗಳನ್ನು ಹೊರತುಪಡಿಸಿ, ಉಳಿದೆಡೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಶಿಕ್ಷಣ ಇಲಾಖೆಯ ಆದೇಶ ಶನಿವಾರ ಶಿಕ್ಷಕರ ಕೈ ಸೇರಿದ್ದು, ಭಾನುವಾರ ರಜಾ ದಿನವಾಗಿದೆ. ಶಾಲೆಗೆ ಆಗಮಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲು ಸಾಧ್ಯವಾಗಿಲ್ಲವಾ ದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ. 

9ರಿಂದ 12ನೇ ತರಗತಿಗಳವರೆಗಿನ ಮಕ್ಕಳಿಗೆ ನಿತ್ಯ ಬೆಳಿಗ್ಗೆ 10ರಿಂದ ಸಂಜೆ 4.30 ರವರೆಗೆ. ಶನಿವಾರ ಮಾತ್ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರವರೆಗೆ ಶಾಲಾ, ಕಾಲೇಜು ಗಳಲ್ಲಿ ತರಗತಿ ಬೋಧನೆ ನಡೆಯಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದ ಶಾಲಾ-ಕಾಲೇಜುಗಳು ಬಂದ್ ಆಗಿದ್ದವು.  ಬಹುಜನರ ಒತ್ತಾಯದ ಮೇರೆಗೆ ಜನವರಿ 1 ರಿಂದ 10 ಮತ್ತು 12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಅನುವು ಮಾಡಿಕೊಡಲಾಗಿತ್ತು.

ಈ ಹಿಂದೆ ಶಾಲೆಗಳ ಆರಂಭದ ವೇಳೆ ಹೊರಡಿಸಲಾಗಿದ್ದ ಕೋವಿಡ್ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳು, ಬೋಧಕರು ಹಾಗೂ ಇನ್ನಿತರೆ ಸಿಬ್ಬಂದಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಬಿಸಿಯೂಟ ಯೋಜನೆ ಇನ್ನೂ ಆರಂಭವಾಗದ ಕಾರಣ, ವಿದ್ಯಾರ್ಥಿಗಳು ಮನೆಯಿಂದಲೇ ಮಧ್ಯಾಹ್ನದ ಊಟ ತರಬೇಕೆಂದು ಸೂಚಿಸಲಾಗಿದೆ.

 

error: Content is protected !!