ಕೇಂದ್ರ ಬಜೆಟ್ : ಆರ್ಥಿಕತೆ ಹಳಿಗೆ ತರಲು ತೆರಿಗೆ – ಸೆಸ್ ಹೊಂದಾಣಿಕೆ ಮಾಡಿದ ಸಚಿವೆ ನಿರ್ಮಲಾ
ನವದೆಹಲಿ, ಫೆ. 1 – ಆರೋಗ್ಯ ವಲಯದ ವೆಚ್ಚ ದುಪ್ಪಟ್ಟುಗೊಳಿಸುವ, ಮೂಲಭೂತ ಸೌಲಭ್ಯ ಹೂಡಿಕೆ ಹೆಚ್ಚಿಸುವ ಹಾಗೂ ಕೃಷಿ ವಲಯಕ್ಕೆ ಸೆಸ್ ಮೂಲಕ ನೆರವು ಕಲ್ಪಿಸುವ ಮೂಲಕ ಆರ್ಥಿಕತೆಯನ್ನು ಕಠಿಣ ಪರಿಸ್ಥಿತಿಯಿಂದ ಹೊರ ತರುವ ಪ್ರಯತ್ನದ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ಮಂಗಳವಾರದಿಂದ ಜಾರಿಗೆ ಬರುವಂತೆ ಬಂಗಾರ – ಬೆಳ್ಳಿ, ಮದ್ಯ, ಕಲ್ಲಿದ್ದಲು ಹಾಗೂ ಕೃಷಿ ಉತ್ಪನ್ನಗಳ ಮೇಲೆ ನೂತನ ಕೃಷಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಸೆಸ್ ಹೇರಿಕೆ ಮಾಡಲಾಗಿದೆ. ಆದರೆ, ಇದರಿಂದ ಗ್ರಾಹಕರ ಮೇಲೆ ಹೆಚ್ಚು ಹೊರೆಯಾಗದಂತಹ ಆಮದು ಸುಂಕಗಳನ್ನು ಕಡಿತಗೊಳಿಸಲಾಗಿದೆ.
ಪೆಟ್ರೋಲ್ ಮೇಲೆ ಲೀಟರ್ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ.ಗಳ ಸೆಸ್ ವಿಧಿಸಲಾಗಿದೆ. ಆದರೆ, ಇದೇ ಪ್ರಮಾಣದ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಗ್ರಾಹಕರ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.
ಆರೋಗ್ಯ ವಲಯಕ್ಕೆ ಜಿಡಿಪಿಯ ಶೇ.1ರಷ್ಟು ವೆಚ್ಚ ಮಾಡಲು ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ಆರೋಗ್ಯ ವಲಯ 2.2 ಲಕ್ಷ ಕೋಟಿ ರೂ. ಪಡೆಯಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರೋಗ್ಯದ ವೆಚ್ಚ 94,452 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೀಗಾಗಿ ಮುಂದಿನ ವರ್ಷ ಆರೋಗ್ಯ ವಲಯ ಎರಡು ಪಟ್ಟಿಗೂ ಹೆಚ್ಚು ಹಣ ಪಡೆಯಲಿದೆ. ಬಜೆಟ್ ಮಂಡನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಿರ್ಮಲ ರಸ್ತೆ, ಸೇತುವೆ, ಬಂದರು, ವಿದ್ಯುತ್ ಉತ್ಪಾದನೆ ಸೇರಿದಂತೆ, ಹಲವಾರು ಮೂಲಭೂತ ಸೌಲಭ್ಯಗಳ ಮೇಲೆ ಬೃಹತ್ ಹೂಡಿಕೆ ಮಾಡಲಿದ್ದೇವೆ. ಆರೋಗ್ಯ ವಲಯಕ್ಕೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹಣಕಾಸು ವರ್ಷಕ್ಕೆ ಅನ್ವಯವಾಗುವ ಬಜೆಟ್ ಮಂಡಿಸಿರುವ ಸೀತಾರಾಮನ್, ನಿವೃತ್ತಿ ನಿಧಿಗೆ ನೀಡಲಾಗುವ ತೆರಿಗೆ ವಿನಾಯಿತಿಯನ್ನು ವರ್ಷಕ್ಕೆ 2.5 ಲಕ್ಷ ರೂ.ಗಳಿಗೆ ಸೀಮಿತಗೊಳಿಸಿದ್ದಾರೆ. ಎಲ್.ಟಿ.ಸಿ.ಗೆ ತೆರಿಗೆ ವಿನಾಯಿತಿ ಕಲ್ಪಿಸಿದ್ದಾರೆ.
ಇದರ ಜೊತೆಗೆ 50 ಲಕ್ಷ ರೂ.ಗಳಿಗೂ ಹೆಚ್ಚಿನ ಸರಕು ಖರೀದಿಸುವವರಿಗೆ ಶೇ.0.1ರ ಟಿ.ಡಿ.ಎಸ್. ವಿಧಿಸಲಾಗುವುದು. 10 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆಸುವವರಿಗೆ ಮಾತ್ರ ಟಿಡಿಎಸ್ ಪಡೆಯುವ ಹೊಣೆ ನೀಡಲಾಗುವುದು.
75 ವರ್ಷಕ್ಕೂ ಹೆಚ್ಚಿನವರು ಪಿಂಚಣಿ ಹಾಗೂ ಬಡ್ಡಿ ಆದಾಯ ಮಾತ್ರ ಪಡೆಯುತ್ತಿದ್ದರೆ ಅವರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಮನೆ ಕಟ್ಟಿಕೊಳ್ಳುವವರಿಗೆ ನೆರವಾಗುವ ಸಲುವಾಗಿ ಗೃಹ ಸಾಲಕ್ಕೆ ಪಾವತಿಸುವ ಬಡ್ಡಿಗೆ 1.5 ಲಕ್ಷ ರೂ.ಗಳ ಹೆಚ್ಚುವರಿ ವಿನಾಯಿತಿ ನೀಡುವ ಅವಧಿಯನ್ನು ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ.
ಟ್ಯಾಬ್ಲೆಟ್ ಮೂಲಕ ಬಜೆಟ್
ಮೊದಲ ಬಾರಿಗೆ ಕಾಗದ ರಹಿತ ಆಯವ್ಯಯ ಮಂಡನೆ
ನವದೆಹಲಿ, ಫೆ. 1 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನು ಮೊದಲ ಬಾರಿಗೆ ಕಾಗದದ ಕಡತದ ಬದಲು ಟ್ಯಾಬ್ಲೆಟ್ ಮೂಲಕ ಓದಿದರು. 110 ನಿಮಿಷಗಳ ಕಾಲ 2021-22ರ ಬಜೆಟ್ ಮಂಡಿಸಿದ ಸಚಿವೆ ಹಲವು ಹೊಸತುಗಳಿಗೆ ಸಾಕ್ಷಿಯಾದರು.
ಮೊದಲ ಬಾರಿಗೆ ಬಜೆಟ್ ಅನ್ನು ಕಾಗದ ರಹಿತವಾಗಿ ಮಂಡಿಸಲಾಯಿತು. ಬಜೆಟ್ ಭಾಷಣ ಹಾಗೂ ಕಡತ ಗಳನ್ನು ಆನ್ಲೈನ್ ಮೂಲಕ ನೀಡಲಾಯಿತು. ಕೆಂಪು ಬಣ್ಣದ ಚೀಲವಾದ ಬಹಿ ಖಾತಾ ಮೂಲಕ ಬಜೆಟ್ ಅನ್ನು ಸದನಕ್ಕೆ ತರುವ ಪದ್ಧತಿಯನ್ನು ಸೀತಾರಾಮನ್ ಮುಂದುವರೆಸಿದರು. ಈ ಬಾರಿ ಬಜೆಟ್ ಕಡತದ ಬದಲು ಟ್ಯಾಬ್ನಲ್ಲಿ ತಂದಿದ್ದರು.
ಆಡಳಿತಾರೂಢರ ಭಾಗದಲ್ಲಿ ಎರಡನೇ ಸಾಲಿನಲ್ಲಿ ನಿಂತಿದ್ದ ಸೀತಾರಾಮನ್, ತಮ್ಮ ಬಜೆಟ್ ಮಂಡನೆ ವೇಳೆ ಹಲವು ಬಾರಿ ನೀರು ಕುಡಿದು ಸುಧಾರಿಸಿಕೊಂಡರು. ಇದು ಸೀತಾರಾಮನ್ ಅವರ ಸಂಕ್ಷಿಪ್ತ ಬಜೆಟ್ ಆಗಿದೆ. ಜುಲೈ 2019ರಲ್ಲಿ ಅವರು ಮಂಡಿಸಿದ ಬಜೆಟ್ 137 ನಿಮಿಷಗಳದ್ದಾಗಿತ್ತು. 2020ರ ಬಜೆಟ್ 160 ನಿಮಿಷಗಳದ್ದಾಗಿತ್ತು ಹಾಗೂ ಅಸ್ವಸ್ಥರಾಗಿ ಅವರು ಬಜೆಟ್ ಸಂಕ್ಷಿಪ್ತಗೊಳಿಸಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಸಮರ್ಪಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಸತತ ಮೂರನೇ ಬಾರಿ ಬಜೆಟ್ ಮಂಡಿಸಿದ ಸೀತಾರಾಮನ್, ರವೀಂದ್ರನಾಥ ಟ್ಯಾಗೋರ್ ಹೇಳಿಕೆಗಳು ಹಾಗೂ ತಮಿಳಿನ ತಿರುಕ್ಕುರಳ್ ಉಕ್ತಿಗಳನ್ನು ಪ್ರಸ್ತಾಪಿಸಿದರು.
ಬಜೆಟ್ ಮಂಡನೆಗೂ ಮುಂಚೆ ಶಿರೋಮಣಿ ಅಕಾಲಿ ದಳದ ಹರ್ಸಿಮ್ರಾಟ್ ಕೌರ್ ಬಾದಲ್ ಹಾಗೂ ಸುಖಬೀರ್ ಸಿಂಗ್ ಬಾದಲ್, ಆರ್ಎಲ್ಪಿಯ ಹನುಮಾನ್ ಬೇನಿವಾಲ್ ಅವರು ರೈತರು ಮೂರು ಕೃಷಿ ಕಾಯ್ದೆಗಳ ವಿರೋಧಿಸುತ್ತಿರುವುದನ್ನು ಪ್ರಸ್ತಾಪಿಸಿದರು.
ಭಿತ್ತಿಪತ್ರಗಳನ್ನು ಹಿಡಿದಿದ್ದ ಅವರು, ಕೇಂದ್ರ ಸರ್ಕಾರದ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.
ಹಣಕಾಸು ಸಚಿವೆ ತಮ್ಮ ಭಾಷಣ ಆರಂಭಿಸಿದ ತಕ್ಷಣ ಅವರು ಸಭಾತ್ಯಾಗ ಮಾಡಿದರು.
ಕೃಷಿಕರು ಬಜೆಟ್ನ ಹೃದಯ : ಮೋದಿ
ನವದೆಹಲಿ, ಫೆ. 1 – ಕೇಂದ್ರ ಬಜೆಟ್ ಆತ್ಮನಿರ್ಭರ್ ದೃಷ್ಟಿಕೋನ ಹೊಂದಿದೆ ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರು ಹಾಗೂ ಗ್ರಾಮೀಣರನ್ನು ಹೃದಯ ದಲ್ಲಿಟ್ಟುಕೊಳ್ಳಲಾಗಿದೆ ಎಂದಿದ್ದಾರೆ.
ಬಜೆಟ್ನಲ್ಲಿ ಕೃಷಿ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಹಾಗೂ ರೈತರ ಆದಾಯ ಹೆಚ್ಚಿಸಲಾಗಿದೆ. ಗ್ರಾಮೀಣರು ಹಾಗೂ ಕೃಷಿಕರು ಬಜೆಟ್ನ ಹೃದಯ ಎಂದು ಮೋದಿ ತಿಳಿಸಿದ್ದಾರೆ. ಅಸಾಧಾರಣ ಪರಿಸ್ಥಿತಿಯಲ್ಲಿ ಬಜೆಟ್ ಮಂಡಿಸಲಾಗಿದೆ. ಬಜೆಟ್ನಲ್ಲಿ ವಾಸ್ತವಿಕತೆ ಹಾಗೂ ಅಭಿವೃದ್ಧಿಯ ವಿಶ್ವಾಸವಿದೆ. ಇದು ಸಮಾಜದ ಎಲ್ಲ ವರ್ಗಗಳಿಗೆ ಸ್ಪಂದಿಸಿದೆ ಹಾಗೂ ಆತ್ಮನಿರ್ಭರತೆಯ ದೃಷ್ಟಿಕೋನ ಹೊಂದಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಬೆಳವಣಿಗೆ ಅವಕಾಶ ಹೆಚ್ಚಿಸುವ, ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸುವ, ಮಾನವ ಸಂನಪ್ಮೂಲಕ್ಕೆ ಹೆಚ್ಚು ಒತ್ತು ಕೊಡುವ, ಹೊಸ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡುವ ಹಾಗೂ ಹೊಸ ಸುಧಾರಣೆಗಳನ್ನು ತರುವ ದಿಸೆಯಲ್ಲಿ ಸಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಇದು ಸಕಾರಾತ್ಮಕವಾದ ಬಜೆಟ್ ಆಗಿದೆ. ಆರೋಗ್ಯ ಹಾಗೂ ಆಸ್ತಿ ಎರಡಕ್ಕೂ ಒತ್ತು ನೀಡುತ್ತಿದೆ ಎಂದವರು ವಿಶ್ಲೇಷಿಸಿದ್ದಾರೆ.
ವಿದ್ಯುತ್ ಪೂರೈಕೆದಾರರ ಆಯ್ಕೆಗಾಗಿ ಸ್ವಾತಂತ್ರ್ಯ
ಹೊಸ ವಿದ್ಯುತ್ ವಿತರಣಾ ನೀತಿ ಪ್ರಕಟ
ನವದೆಹಲಿ, ಫೆ. 1 – ವಿದ್ಯುತ್ ಗ್ರಾಹಕರು ತಾವು ಇಚ್ಛೆ ಪಡುವ ಪೂರೈಕೆದಾರರು, ಇಲ್ಲವೇ ಡಿಸ್ಕಾಮ್ಗಳನ್ನು ಆಯ್ಕೆ ಮಾಡುವ ಅವಕಾಶ ಕೊಡುವ ನೀತಿ ರೂಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಪ್ರಕಟಿಸಿದ್ದಾರೆ. ಪ್ರಸಕ್ತ ದೇಶಾದ್ಯಂತ ಇರುವ ಡಿಸ್ಕಾಮ್ (ವಿದ್ಯುತ್ ವಿತರಣಾ
ಸಂಸ್ಥೆ)ಗಳು ಸರ್ಕಾರಿ ಮಾಲೀಕತ್ವದವುಗಳಾಗಿವೆ. ಈ ಸಂಸ್ಥೆಗಳು ನಿರಂತರ 24 ಗಂಟೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಮಸ್ಯೆಯನ್ನೂ ಎದುರಿಸುತ್ತಿವೆ.
ಡಿಸ್ಕಾಮ್ಗಳು ಏಕಸ್ವಾಮ್ಯದವು. ಗ್ರಾಹಕರು ಸೇವಾದಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕಿದೆ. ಈ ಬಗ್ಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಿದೆ ಎಂದು ಬಜೆಟ್ ಮಂಡನೆ ವೇಳೆ ಸೀತಾರಾಮನ್ ಹೇಳಿದ್ದಾರೆ.
ಡಿಸ್ಕಾಮ್ಗಳ ಹಣಕಾಸು ಒತ್ತಡದ ಬಗ್ಗೆ ಪ್ರಸ್ತಾಪಿಸಿದ ಅವರು, ಡಿಸೆಂಬರ್ 2020ರವರೆಗೆ ಈ ಕಂಪನಿಗಳ ಬಾಕಿ 1.35 ಲಕ್ಷ ಕೋಟಿ ರೂ.ಗಳಾಗಿದೆ ಎಂದರು.
ಮುಂದಿನ ಆರು ವರ್ಷಗಳಲ್ಲಿ 139 ಜಿಡಬ್ಲ್ಯೂ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಯಾಗಲಿದೆ. 2.8 ಕೋಟಿ ಮನೆಗಳು ವಿದ್ಯುತ್ ಸಂಪರ್ಕಕ್ಕೆ ಬರಲಿವೆ. 1.41 ಲಕ್ಷ ಸರ್ಕಿಟ್ ಕಿಲೋಮೀಟರ್ಗಳ ವಿದ್ಯುತ್ ಜಾಲವನ್ನು ಅಳವಡಿಕೆ ಮಾಡಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
ಆರೋಗ್ಯ ಅನುದಾನ ಶೇ.137ರಷ್ಟು ಹೆಚ್ಚಳ
ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆಗೆ 64,180 ಕೋಟಿ ರೂ.
ನವದೆಹಲಿ, ಫೆ. 1 – ಬರುವ 2021-22ರ ಸಾಲಿನ ಬಜೆಟ್ನಲ್ಲಿ ಕೇಂದ್ರ ಸರ್ಕಾರ ಆರೋಗ್ಯ ವಲಯಕ್ಕೆ 2,23,846 ಕೋಟಿ ರೂ.ಗಳನ್ನು ಪ್ರಕಟಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.137ರಷ್ಟು ಹೆಚ್ಚಾಗಿದೆ. ಇದರಲ್ಲಿ 35 ಸಾವಿರ ಕೋಟಿ ರೂ.ಗಳನ್ನು ಕೊರೊನಾ ಲಸಿಕೆಗೆ ಮೀಸಲಿಡಲಾಗಿದೆ.
ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯವು ಆತ್ಮನಿರ್ಭರ್ ಭಾರತದ ಆರು ಸ್ತಂಭಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಅಧಿಕ ಒತ್ತು ನೀಡಲಾಗಿದೆ. ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಅಗತ್ಯವಾದರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ಸೀತಾರಾಮನ್ ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಯಲ್ಲಿ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿರುವ ಸೀತಾರಾಮನ್, ಕಳೆದ ವರ್ಷ ಆರೋಗ್ಯ ವಲಯಕ್ಕೆ 94,452 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ವರ್ಷ 2,23,846 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 71,268.77 ಕೋಟಿ ರೂ. ನೀಡಲಾಗಿದೆ. ಕಳೆದ ವರ್ಷ ಇಲಾಖೆಗೆ 65,011.8 ಕೋಟಿ ರೂ. ನೀಡಲಾಗಿತ್ತು. ನಂತರ ಕೊರೊನಾ ಹಿನ್ನೆಲೆಯಲ್ಲಿ ಅನುದಾನವನ್ನು 78,866 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು.
ಕೇಂದ್ರ ಸರ್ಕಾರ ಪ್ರಾಯೋಜಿತವಾದ ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ಥ ಭಾರತ್ ಯೋಜನೆ ಆರಂಭಿಸುವುದಾಗಿಯೂ ಸೀತಾರಾಮನ್ ಪ್ರಕಟಿಸಿದ್ದಾರೆ. ಆರು ವರ್ಷಗಳಿಗೆ 64,180 ಕೋಟಿ ರೂ.ಗಳನ್ನು ಯೋಜನೆಗೆ ಒದಗಿಸಲಾಗಿದೆ.
ಈ ಯೋಜನೆ ಮೂಲಕ ಪ್ರಾಥಮಿಕ, ಮಾಧ್ಯಮ ಹಾಗೂ ತೃತೀಯ ಹಂತಗಳಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಬಲಗೊಳಿಸಲಾಗುವುದು. ಈಗಿರುವ ರಾಷ್ಟ್ರೀಯ ಸಂಸ್ಥೆಗಳನ್ನು ಬಲಗೊಳಿಸಲಾಗುವುದು ಹಾಗೂ ಹೊಸ ಸಂಸ್ಥೆಗಳನ್ನು ಕಟ್ಟಲಾಗುವುದು. ಹೊಸದಾಗಿ ಕಂಡು ಬರುತ್ತಿರುವ ರೋಗಗಳನ್ನು ಎದುರಿಸಲೂ ಈ ನಿಧಿ ನೆರವಾಗಲಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್.ಹೆಚ್.ಎಂ.)ಗೆ ಹೆಚ್ಚುವರಿಯಾಗಿ ಈ ಅನುದಾನ ನೀಡಲಾಗುವುದು.
ಗ್ರಾಮೀಣ ಭಾಗಕ್ಕೆ 17,788 ಕೋಟಿ ರೂ. ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ 11,025 ಕೋಟಿ ರೂ.ಗಳನ್ನು ಈ ಯೋಜನೆಯಡಿ ನೀಡಲಾಗುವುದು. ಯೋಜನೆಯ ಅನ್ವಯ ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಲ್ಯಾಬ್ಗಳನ್ನು ಹಾಗೂ 11 ರಾಜ್ಯಗಳಲ್ಲಿ 3,382 ಬ್ಲಾಕ್ ಹಂತದ ಆರೋಗ್ಯ ಘಟಕಗಳನ್ನು ಸ್ಥಾಪಿಸಲಾಗುವುದು. 602 ಜಿಲ್ಲೆಗಳಲ್ಲಿ ತೀವ್ರ ನಿಗಾ ಘಟಕಗಳು ಹಾಗೂ 12 ಕೇಂದ್ರೀಯ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
2021-22ರ ಬಜೆಟ್ನಲ್ಲಿ ಆರೋಗ್ಯ ಸಂಶೋಧನಾ ಇಲಾಖೆಗೆ 2,663 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಆಯುಷ್ ಇಲಾಖೆಗೆ 2,970.30 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.
ಕೃಷಿಗಾಗಿ ಬಂಗಾರದಿಂದ ಡೀಸೆಲ್, ಸೇಬಿನವರೆಗೆ ಸೆಸ್
ನವದೆಹಲಿ, ಫೆ. 1 – ಕೃಷಿ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಬಂಗಾರ ಹಾಗೂ ಆಮದು ಕೃಷಿ ಉತ್ಪನ್ನಗಳ ಮೇಲೆ ಸೆಸ್ ಹೇರಿಕೆ ಮಾಡಿದೆ.
ಕೇಂದ್ರ ಕೃಷಿ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಬಜೆಟ್ ಮಂಡಿಸುವಾಗ ಕೃಷಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಸೆಸ್ (ಎ.ಐ.ಡಿ.ಸಿ.) ಹೇರಿಕೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಆದರೆ, ಸೆಸ್ ಹೇರಿಕೆ ಮಾಡಿ ದರೂ, ಬಹುತೇಕ ಸರಕುಗಳಿಗೆ ಜನರು ಹೆಚ್ಚು ಬೆಲೆ ತೆರುವ ಅಗತ್ಯ ಬಾರದು ಎಂದವರು ತಿಳಿಸಿದ್ದಾರೆ.
ಕೃಷಿ ಮೂಲಭೂತ ಸೌಲಭ್ಯವನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ. ಇದರಿಂದಾಗಿ ನಾವು ಹೆಚ್ಚು ಇಳುವರಿ ಪಡೆಯಲು, ಹೆಚ್ಚು ದಕ್ಷವಾಗಿ ಆಹಾರ ವಸ್ತುಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಸಾಧ್ಯವಾಗಲಿದೆ ಎಂದು ಸಚಿವೆ ತಿಳಿಸಿದ್ದಾರೆ.
ಇದರಿಂದಾಗಿ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ. ಇದಕ್ಕಾಗಿ ಸಣ್ಣ ಸಂಖ್ಯೆಯ ಸರಕುಗಳ ಮೇಲೆ ಎ.ಐ.ಡಿ.ಸಿ. ಸೆಸ್ ವಿಧಿಸಲಾಗುವುದು. ಆದರೆ, ಬಹುತೇಕ ಸರಕುಗಳಿಗೆ ಗ್ರಾಹಕರು ಹೆಚ್ಚು ಬೆಲೆ ತೆರುವ ಅಗತ್ಯ ಬಾರದು ಎಂದವರು ಹೇಳಿದ್ದಾರೆ.
ಪೆಟ್ರೋಲ್ ಮೇಲೆ ಲೀಟರ್ಗೆ 2.50 ರೂ.ಗಳ ಹಾಗೂ ಡೀಸೆಲ್ ಮೇಲೆ ಲೀಟರ್ಗೆ 4 ರೂ.ಗಳ ಸೆಸ್ ಹೇರುವ ಸಂದರ್ಭದಲ್ಲಿ ಅವುಗಳ ಮೇಲಿರುವ ಇತರೆ ತೆರಿಗೆಗಳನ್ನು ಇಳಿಕೆ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರು ಇಂಧನಕ್ಕೆ ಹೆಚ್ಚು ಬೆಲೆ ತೆರುವ ಅಗತ್ಯ ಬರುವುದಿಲ್ಲ.
ಬಂಗಾರ ಹಾಗೂ ಬೆಳ್ಳಿಗಳ ಮೇಲೆ ಶೇ.2.5ರ ಆಮದು ಸೆಸ್ ಹೇರಲಾಗಿದೆ. ಮದ್ಯದ ಮೇಲೆ ಶೇ.100, ಕಚ್ಚಾ ತಾಳೆ ಎಣ್ಣೆ ಮೇಲೆ ಶೇ.17.5, ಸೇಬಿನ ಮೇಲೆ ಶೇ.35, ಕಲ್ಲಿದ್ದಲು, ಇಗ್ನೀಟ್ ಹಾಗೂ ಪೀಟ್ ಮೇಲೆ ಶೇ.1.5, ಯುರಿಯಾ ಸೇರಿದಂತೆ, ರಸಗೊಬ್ಬರದ ಮೇಲೆ ಶೇ.5 ಹಾಗೂ ಹತ್ತಿಯ ಮೇಲೆ ಶೇ.5ರ ಸೆಸ್ ವಿಧಿಸಲಾಗಿದೆ.
16.5 ಲಕ್ಷ ಕೋಟಿ ರೂ. ಕೃಷಿ ಸಾಲ
ಶೇ.100ರವರೆಗೆ ಕೃಷಿ ಮೂಲಭೂತ ಸೌಲಭ್ಯ ಸೆಸ್
ನವದೆಹಲಿ, ಫೆ. 1 – ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಾಲ ವಿತರಣೆಯ ಗುರಿಯನ್ನು ಶೇ.10ರಷ್ಟು ಹೆಚ್ಚಿಸಿ 16.5 ಲಕ್ಷ ಕೋಟಿ ರೂ.ಗಳಿಗೆ ನಿಗದಿ ಪಡಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ಈ ಘೋಷಣೆ ಮಾಡಿರುವ ಅವರು, ಕೃಷಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಸೆಸ್ ಅನ್ನು ವಿಧಿಸುವುದಾಗಿ ತಿಳಿಸಿದ್ದಾರೆ. ಕಟಾವಿನ ನಂತರ ರೈತರ ಆದಾಯ ಹೆಚ್ಚಳ ಕ್ಕಾಗಿ ಕೆಲ ಸರಕುಗಳ ಮೇಲೆ ಶೇ.100 ರವರೆಗೆ ಸೆಸ್ ವಿಧಿಸಲು ಪ್ರಸ್ತಾಪಿಸಲಾಗಿದೆ.
ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಧಿ ಹಾಗೂ ಕಿರು ನೀರಾವರಿ ನಿಧಿಗೆ ಹೆಚ್ಚಿನ ಅನುದಾನ ನೀಡಲಾಗುವು ದು ಹಾಗೂ ಎ.ಪಿ.ಎಂ.ಸಿ.ಗಳಿಗೆ ಕೃಷಿ ಮೂಲ ಸೌಲಭ್ಯ ನಿಧಿ ವಿಸ್ತರಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ರೈತರ ಆದಾಯ ದುಪ್ಪಟ್ಟುಗೊಳಿಸುವ ಸಂಕಲ್ಪ ಹಾಗೂ ಕೃಷಿಗೆ ಬಲಿಷ್ಟ ಮೂಲಭೂತ ಸೌಲಭ್ಯವನ್ನು ಒದಗಿಸುವ ಬದ್ಧತೆಯನ್ನು ಈ ಬಜೆಟ್ ಬಲಗೊಳಿಸಲಿದೆ ಎಂದು ಸಚಿವೆ ತಿಳಿಸಿದ್ದಾರೆ.
ನಮ್ಮ ರೈತರಿಗೆ ಸಮರ್ಪಕ ಸಾಲ ಒದಗಿಸಲು ಕೃಷಿ ಸಾಲದ ಗುರಿಯನ್ನು 16.5 ಲಕ್ಷ ಕೋಟಿ ರೂ.ಗಳಿಗೆ ವಿಸ್ತರಿಸಲಾಗಿದೆ. ಪಶು ಸಂಗೋಪನೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಸಾಲ ಒದಗಿಸಲಾಗುವುದು ಎಂದವರು ಹೇಳಿದ್ದಾರೆ.
ಕೃಷಿ ಮೂಲಭೂತ ಸೌಲಭ್ಯ ಸುಧಾರಿಸುವ ಮೂಲಕ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಹೇಳಿರುವ ಸಚಿವೆ ಸೀತಾರಾಮನ್, ಶೇ.2.5ರಿಂದ ಶೇ.100ರವರೆಗೆ ಕೆಲ ಸರಕುಗಳ ಮೇಲೆ ಕೃಷಿ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಸೆಸ್ (ಎ.ಐ.ಡಿ.ಸಿ.) ವಿಧಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರ ಕಳೆದ ವರ್ಷ ಕಟಾವಿನ ನಂತರದ ಮೂಲಭೂತ ಸೌಲಭ್ಯಗಳಿಗಾಗಿ 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಭೂತ ಸೌಲಭ್ಯ ನಿಧಿ ಸ್ಥಾಪಿಸುವುದಾಗಿ ತಿಳಿಸಿತ್ತು.
ಈ ವರ್ಷ ಸೆಸ್ ವಿಧಿಸುವ ಜೊತೆಗೆ ಎ.ಪಿ.ಎಂ.ಸಿ.ಗಳಿಗೆ ಸೌಲಭ್ಯ ಹೆಚ್ಚಿಸಲು ಕೃಷಿ ಮೂಲಭೂತ ಸೌಲಭ್ಯ ನಿಧಿ ಮೂಲಕ ನೆರವು ನೀಡಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಗ್ರಾಮೀಣ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಧಿಯನ್ನು ಈಗಿರುವ 30 ಸಾವಿರ ಕೋಟಿ ರೂ.ಗಳಿಂದ 40 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಸಣ್ಣ ನೀರಾವರಿ ನಿಧಿಯನ್ನು ಈಗಿರುವ 5 ಸಾವಿರ ಕೋಟಿ ರೂ.ಗಳಿಂದ 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ನಬಾರ್ಡ್ ಮೂಲಕ ಈ ನಿಧಿ ನೀಡಲಾಗುವುದು.
ಕೃಷಿಯಲ್ಲಿ ಮೌಲ್ಯವರ್ಧನೆ ಹಾಗೂ ಕೃಷಿ ಉತ್ಪನ್ನಗಳ ರಫ್ತಿಗಾಗಿ ಆಪರೇಷನ್ ಗ್ರೀನ್ ಸ್ಕೀಮ್ ರೂಪಿಸಲಾಗಿದೆ. ಪ್ರಸಕ್ತ ಇದು ಟೊಮ್ಯಾಟೋ, ಈರುಳ್ಳಿ ಹಾಗೂ ಆಲೂಗಡ್ಡೆಗಳಿಗೆ ಅನ್ವಯವಾಗುತ್ತಿದೆ. ಇದನ್ನು 22 ಹಣ್ಣು – ತರಕಾರಿಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಅಗಾಧ ಬದಲಾವಣೆ ಕಂಡಿದೆ. ಇದರಿಂದಾಗಿ ಎಲ್ಲಾ ಇಳುವರಿಗಳಿಗೆ ವೆಚ್ಚದ ಕನಿಷ್ಠ 1.5 ಪಟ್ಟು ಆದಾಯ ಸಿಗುತ್ತಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.
ಕೃಷಿ ಇಳುವರಿ ಖರೀದಿ ಸಹ ವೇಗವಾಗಿ ಸಾಗಿದೆ. ಇದರಿಂದ ರೈತರಿಗೆ ಮಾಡುವ ಪಾವತಿ 2013-14ರ ನಂತರ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಚಿವೆ ತಿಳಿಸಿದರು.
2013-14ರಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾಡಲಾದ ಖರೀದಿ 33,874 ಕೋಟಿ ರೂ. ಆಗಿತ್ತು. ಇದು 2019-20ರಲ್ಲಿ 62,802 ಕೋಟಿ ರೂ.ಗಳಿಗೆ ಹೆಚ್ಚಾಗಿದೆ ಎಂದವರು ತಿಳಿಸಿದ್ದಾರೆ.
ಬಜೆಟ್ನ ಮುಖ್ಯಾಂಶಗಳು
ಬಜೆಟ್ನ ಆರು ಸ್ತಂಭಗಳು :
1. ಆರೋಗ್ಯ ಮತ್ತು ಸ್ವಾಸ್ಥ್ಯ
2. ಭೌತಿಕ ಹಾಗೂ ಹಣಕಾಸು ಬಂಡವಾಳ ಮತ್ತು ಮೂಲಭೂತ ಸೌಲಭ್ಯ
3. ಆಶಯದ ಭಾರತಕ್ಕಾಗಿ ಒಳಗೊಳ್ಳುವಿಕೆಯ ಅಭಿವೃದ್ಧಿ
4. ಮಾನವ ಬಂಡವಾಳದ ಪುನರುಜ್ಜೀವನ
5. ಅನ್ವೇಷಣೆ, ಸಂಶೋಧನೆ ಮತ್ತು ಅಭಿವೃದ್ಧಿ
6. ಕನಿಷ್ಠ ಸರ್ಕಾರ ಹಾಗೂ ಗರಿಷ್ಠ ಆಡಳಿತ.
ಆರೋಗ್ಯಕ್ಕಾಗಿ 2,23,846 ಕೋಟಿ ರೂ., ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ರೂ.
ಭಾರತದಲ್ಲಿ ರೂಪಿಸಲಾದ ನ್ಯುಮೋನಿಯಾ ಲಸಿಕೆ ದೇಶಾದ್ಯಂತ ವಿಸ್ತರಣೆ
ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ 64,180 ಕೋಟಿ ರೂ.
ಪೌಷ್ಠಿಕಾಂಶ ಹೆಚ್ಚಿಸಲು ಮಿಷನ್ ಪೋಷಣ್ 2.0ಗೆ ಚಾಲನೆ
ಜಲ ಜೀವನ್ ಮಿಷನ್ (ನಗರ)ಕ್ಕಾಗಿ ಐದು ವರ್ಷಗಳಿಗೆ 2.87 ಲಕ್ಷ ಕೋಟಿ ರೂ.
ನಗರ ಸ್ವಚ್ಛ ಭಾರತ ಮಿಷನ್ 2.0ಗೆ ಐದು ವರ್ಷಗಳಿಗೆ 1,41,678 ಕೋಟಿ ರೂ.
ಹಳೆಯ ವಾಹನಗಳ ವಿಲೇವಾರಿಗೆ ಸ್ಕ್ರಾಪ್ ನೀತಿ. ವೈಯಕ್ತಿಕ ವಾಹನಗಳಿಗೆ 20 ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ನಂತರ ತಪಾಸಣೆ
ಉತ್ಪಾದನೆ ಆಧರಿತ ಉತ್ತೇಜನ ಯೋಜನೆಗಾಗಿ 13 ವಲಯಗಳಿಗೆ ಐದು ವರ್ಷಗಳಿಗೆ 1.97 ಲಕ್ಷ ಕೋಟಿ ರೂ.
ಮೂರು ವರ್ಷಗಳಲ್ಲಿ 7 ಜವಳಿ ಪಾರ್ಕ್ ರೂಪಿಸಲು ಮೆಗಾ ಜವಳಿ ಪಾರ್ಕ್ ಹೂಡಿಕೆ ಯೋಜನೆ
ಮೂಲಭೂತ ಸೌಲಭ್ಯಗಳಿಗೆ ಹಣಕಾಸು ಒದಗಿಸಲು ಅಭಿವೃದ್ಧಿ ಬಂಡವಾಳ ಸಂಸ್ಥೆಗೆ 20 ಸಾವಿರ ಕೋಟಿ ರೂ.
2021-22ರಲ್ಲಿ ಬಂಡವಾಳ ವೆಚ್ಚಕ್ಕೆ 5.54 ಲಕ್ಷ ಕೋಟಿ ರೂ.
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಗೆ 1.81 ಲಕ್ಷ ಕೋಟಿ ರೂ.
ಬೆಂಗಳೂರು – ಚೆನ್ನೈ ನಡುವೆ 278 ಕಿ.ಮೀ.ಗಳ ಎಕ್ಸ್ಪ್ರೆಸ್ವೇ ನಿರ್ಮಾಣ
ವಿದ್ಯುತ್ ವಿತರಣಾ ವಲಯ ಯೋಜನೆಗೆ ಐದು ವರ್ಷಗಳಿಗೆ 3.05 ಲಕ್ಷ ಕೋಟಿ ರೂ.
ಉಜ್ವಲ ಯೋಜನೆ ಇನ್ನೂ ಒಂದು ಕೋಟಿ ಫಲಾನುಭವಿಗಳಿಗೆ ವಿಸ್ತರಣೆ
ವಿಮಾ ವಲಯದ ವಿದೇಶಿ ನೇರ ಹೂಡಿಕೆ ಮಿತಿ ಈಗಿರುವ ಶೇ.49ರಿಂದ ಶೇ.74ಕ್ಕೆ ಹೆಚ್ಚಳ
ಸರ್ಕಾರಿ ವಲಯದ ಕಂಪನಿಗಳ ಬಂಡವಾಳಕ್ಕೆ 20 ಸಾವಿರ ಕೋಟಿ ರೂ.
ಬಂಡವಾಳ ಹಿಂತೆಗೆತದ ಮೂಲಕ 1.75 ಲಕ್ಷ ಕೋಟಿ ರೂ.
ಸ್ವಾಮಿತ್ವ ಯೋಜನೆ ಇಡೀ ದೇಶಕ್ಕೆ ವಿಸ್ತರಣೆ
2021-22ರಲ್ಲಿ ಕೃಷಿ ವಲಯಕ್ಕೆ 16.5 ಲಕ್ಷ ಕೋಟಿ ರೂ. ಸಾಲ
ನೂತನ ಶಿಕ್ಷಣ ಯೋಜನೆಯಡಿ 15 ಸಾವಿರ ಶಾಲೆಗಳ ಸಬಲೀಕರಣ
ಬುಡಕಟ್ಟು ಪ್ರದೇಶಗಳಲ್ಲಿ 750 ಏಕಲವ್ಯ ಶಾಲೆಗಳ ಸ್ಥಾಪನೆ
ಡಿಜಿಟಲ್ ಜನಗಣತಿಗಾಗಿ 3,768 ಕೋಟಿ ರೂ.
12 ಲಕ್ಷ ಕೋಟಿ ರೂ.ಗಳ ಸಾಲ
75 ವರ್ಷಕ್ಕೂ ಹಿರಿಯರು ಪಿಂಚಣಿ ಹಾಗೂ ಬಡ್ಡಿಯನ್ನಷ್ಟೇ ಆದಾಯವಾಗಿ ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ ದಾಖಲಿಸುವ ಅಗತ್ಯವಿಲ್ಲ
ಸೋಲಾರ್ ಇನ್ವರ್ಟರ್ಗಳ ಮೇಲಿನ ಆಮದು ತೆರಿಗೆ ಶೇ.5ರಿಂದ 20ಕ್ಕೆ ಏರಿಕೆ. ಸೌರ ದೀಪಗಳ ಆಮದು ತೆರಿಗೆ ಶೇ.5 ರಿಂದ 15ಕ್ಕೆ ಏರಿಕೆ
ವಿಮಾ ವಲಯದ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಈಗಿರುವ ಶೇ.40ರಿಂದ ಶೇ.74ಕ್ಕೆ ಏರಿಕೆ ಮಾಡಲಾಗಿದೆ.
ಡೆವಿಡೆಂಡ್ ಘೋಷಣೆ, ಇಲ್ಲವೇ ಪಾವತಿಯ ನಂತರವೇ ತೆರಿಗೆದಾರರು ಆ ಕುರಿತ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರಿಯಲ್ ಎಸ್ಟೇಟ್ ಇನ್ಫ್ರಾಸ್ಟ್ರಕ್ಚರ್ ಟ್ರಸ್ಟ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ಗಳ ಡಿವಿಡೆಂಡ್ ಪಾವತಿಗೆ ಟಿ.ಡಿ.ಎಸ್. ವಿನಾಯಿತಿ ನೀಡಲಾಗಿದೆ.
ನವೋದ್ಯಮಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿ ಅವಧಿಯನ್ನು ಮಾರ್ಚ್ 31, 2022ರವರೆಗೆ ವಿಸ್ತರಿಸಲಾಗಿದೆ.
ಆದಾಯ ತೆರಿಗೆ ಅಸೆಸ್ಮೆಂಟ್ ಅನ್ನು ಮರು ಪರಿಶೀಲಿಸಲು ಇರುವ ಗಡುವನ್ನು ಈಗಿರುವ ಆರು ವರ್ಷಗಳಿಂದ ಮೂರು ವರ್ಷಕ್ಕೆ ಇಳಿಸಲಾಗಿದೆ.
ವರ್ಷವೊಂದರಲ್ಲಿ 50 ಲಕ್ಷ ರೂ.ಗಳಿಗೂ ಹೆಚ್ಚು ಮೊತ್ತದ ಅಘೋಷಿತ ಆದಾಯಕ್ಕೆ ಸಾಕ್ಷಿ ಇದ್ದರೆ ಮಾತ್ರ ಹತ್ತು ವರ್ಷಗಳವರೆಗಿನ ಹಳೆಯ ಪ್ರಕರಣಗಳನ್ನು ಮತ್ತೆ ಪರಿಶೀಲಿಸಲು ಅವಕಾಶ ನೀಡಲಾಗುವುದು.
2021-22ರ ಸಾಲಿನ ವಿತ್ತೀಯ ಕೊರತೆ ಶೇ.6.8ರಷ್ಟಿರಲಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯ ಪ್ರಮಾಣ ಶೇ.9.5ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಹತ್ತಿ, ರೇಷ್ಮೆ, ಮೆಕ್ಕೆಜೋಳ, ಕೆಲವು ಹರಳು ಹಾಗೂ ಆಭರಣ, ವಾಹನಗಳ ಬಿಡಿ ಭಾಗ, ಸ್ಕ್ರೂ ಹಾಗೂ ನಟ್ಟುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ.
ಪ್ರಿಂಟೆಡ್ ಸರ್ಕಿಟ್ ಬೋರ್ಡ್ ಜೋಡಣೆ, ವೈರ್ ಹಾಗೂ ಕೇಬಲ್, ಸೋಲಾರ್ ಇನ್ವರ್ಟರ್ ಹಾಗೂ ಸೌರ ದೀಪಗಳ ಮೇಲಿನ ಆಮದು ಸುಂಕವನ್ನೂ ಹೆಚ್ಚಿಸಲಾಗಿದೆ.
ನಾಫ್ತಾ, ಕಬ್ಬಿಣ ಹಾಗೂ ಗುಜರಿ ಉಕ್ಕು, ವಿಮಾನಗಳ ಬಿಡಿ ಭಾಗ, ಬಂಗಾರ ಮತ್ತು ಬೆಳ್ಳಿಯ ಆಮದು ಸುಂಕವನ್ನು ಇಳಿಕೆ ಮಾಡಲಾಗಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮರು ಬಂಡವಾಳಕ್ಕಾಗಿ 20 ಸಾವಿರ ಕೋಟಿ ರೂ.ಗಳನ್ನು ಪ್ರಕಟಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣದ ಮೂಲಕ 1.75 ಲಕ್ಷ ಕೋಟಿ ರೂ.ಗಳನ್ನು ಗಳಿಸುವ ಗುರಿ ಹೊಂದಲಾಗಿದೆ. ಎಲ್.ಐ.ಸಿ. ಸೇರಿದಂತೆ ಹಲವು ಸರ್ಕಾರಿ ಕಂಪನಿಗಳ ಐ.ಪಿ.ಒ.ಗೆ ಯೋಜಿಸಲಾಗಿದೆ.