ಅಣಕು ನ್ಯಾಯಾಲಯ ಕಾರ್ಯಕ್ರಮದಲ್ಲಿ ವಕೀಲ ಎಲ್.ಹೆಚ್. ಅರುಣ್‌ಕುಮಾರ್
ದಾವಣಗೆರೆ, ಏ.4- ಕೋರ್ಟ್ ವಾದ-ವಿವಾದಗಳಲ್ಲಿ ಪಾಲ್ಗೊಳ್ಳಲು ಮತ್ತು ಕೋರ್ಟ್‍ಗಳಲ್ಲಿ ನಡೆಯುವ ವಿಚಾರಣೆಗಳ ನೀತಿ ನಿಯಮಗಳ ಅರಿವು ಮೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅಣಕು ನ್ಯಾಯಾಲಯ ಅಡಿಪಾಯವಿದ್ದಂತೆ ಎಂದು ಹಿರಿಯ ವಕೀಲ ಎಲ್.ಎಚ್. ಅರುಣ್ ಕುಮಾರ್ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಿಂದ ಏರ್ಪಡಿಸಿದ್ದ ಅಣಕು-ನ್ಯಾಯಾ ಲಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕರಣ ನಿರೂಪಿಸುವ ರೀತಿ ಭಾಷೆ, ಎಲ್ಲವು ವಾದ ಮಂಡಿಸುವಾಗ ಪ್ರಮುಖವಾಗಿರುತ್ತವೆ. ಅಣಕು ನ್ಯಾಯಾಲಯಗಳಿಂದ ವಿದ್ಯಾರ್ಥಿಗಳು ಕಾನೂನು ಅರ್ಥೈಸಿಕೊಂಡು ಉತ್ತಮ ಸಂವಹನ ಕಲೆ ಬೆಳೆಸಿಕೊಳ್ಳುತ್ತಾರೆ. ಭಾರತದ ಸಂವಿಧಾನದಡಿಯಲ್ಲಿ ಕಾರ್ಯಾಂಗ , ನ್ಯಾಯಾಂಗ, ಶಾಸಕಾಂಗ ಪ್ರಮುಖ ಅಂಗಗಳಾಗಿದ್ದು ವರ್ತಮಾನದ ಪರಿಸ್ಥಿತಿಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿರುವುದು ವಿಷಾದನೀಯ ಎಂದರು.
ನ್ಯಾಯಾಂಗದ ಮೇಲೆ ಜನರು ನಂಬಿಕೆ ಇಟ್ಟುಕೊಂ ಡಿದ್ದು ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಯಾಗಿದೆ. ನ್ಯಾಯಾಂಗ ವಿಫಲವಾದರೆ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಲಿದೆ. ವಿದ್ಯಾರ್ಥಿಗಳು ಕಾನೂನು ಅರಿ ಯುವ ಮೂಲಕ ಪ್ರಜಾಪ್ರಭುತ್ವ ಉಳಿಸುವ, ದೇಶಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕುಲಸಚಿವೆ ಗಾಯತ್ರಿ ದೇವರಾಜ್ ಮಾತನಾಡಿ, ರಾಜ್ಯ ಶಾಸ್ತ್ರ ಅಧ್ಯಯನ ವಿಭಾಗ ಅತಿ ಹೆಚ್ಚಿನ ಮಾನವ ಸಂಪನ್ಮೂಲ ಹೊಂದಿದ್ದು, ಇಂತಹ ಕಾರ್ಯಕ್ರಮ ರೂಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಡಾ. ನಾಗರಾಜ್ ಎನ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರವೀಣ್ ಟಿ.ಎಲ್ . ನಿರೂಪಿಸಿದರು. ಡಾ. ಬಸವರಾಜ್ ಬೆನಕನಹಳ್ಳಿ ವಂದಿಸಿದರು. ಡಾ. ಅಶೋಕ ಪಲ್ಲೇದ್, ಡಾ. ಜಾಜೂರು, ಡಾ. ಸ್ವಾಮಿ ಇನ್ನಿತರರಿದ್ದರು. ವಿದ್ಯಾರ್ಥಿಗಳು ಯಶಸ್ವಿಯಾಗಿ ಅಣಕು ನ್ಯಾಯಾಲಯದಲ್ಲಿ ಪ್ರಕರಣ ನಡೆಸಿ ಪ್ರಶಂಸೆಗೆ ಪಾತ್ರರಾದರು.