25ನೇ ವರ್ಷದ ಉಚಿತ ಮಜ್ಜಿಗೆ ವಿತರಣೆಗೆ ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಚಾಲನೆ
ದಾವಣಗೆರೆ, ಏ.1- ಹಸಿದವರಿಗೆ ಅನ್ನ ನೀಡುವ ಹಾಗೂ ಬಾಯಾರಿಕೆ ನೀಗಿಸುವ ಕಾರ್ಯ ಪ್ರಶಂಸನೀಯ. ಅಂತೆಯೇ ಬೇಸಿಗೆಯಲ್ಲಿ ಬಳಲಿದ ಜನರಿಗೆ ಮಜ್ಜಿಗೆ ನೀಡಿ, ದಣಿವಾರಿಸುವುದೂ ಸಹ ಶ್ರೇಷ್ಠ ಸೇವೆ ಎಂದು ‘ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅಭಿಪ್ರಾಯಪಟ್ಟರು.
ನಗರದ ನಗರ ಪಾಲಿಕೆ ಆವರಣದಲ್ಲಿಂದು ವಿಕಾಸ ತರಂಗಿಣಿ ಹಾಗೂ ಸ್ಪೂರ್ತಿ ಸೇವಾ ಟ್ರಸ್ಟ್ ವತಿಯಿಂದ 25ನೇ ವರ್ಷದ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕೊರೊನಾದಂತಹ ಸಂದರ್ಭದಲ್ಲೂ ಸಂಸ್ಥೆಯ ಸತ್ಯನಾರಾಯಣ ರಾವ್ ಮತ್ತು ಪ್ರಾಯೋಜಕತ್ವದ ತಂಡ ಉತ್ಸಾಹದಿಂದ ಜನತೆಗೆ ಉಚಿತ ಮಜ್ಜಿಗೆ ವಿತರಿಸುತ್ತಿರುವ ಕಾರ್ಯ ಶ್ಲ್ಯಾಘನೀಯ ಎಂದರು.
ಪ್ರತಿ ವರ್ಷವೂ ನಮ್ಮ ಪತ್ರಿಕೆಯಲ್ಲಿ ಮಜ್ಜಿಗೆ ವಿತರಣೆಯ ವಿಚಾರವನ್ನು ಪ್ರಕಟಿಸುತ್ತಿದ್ದೆವು. ಈ ವರ್ಷದ ಕಾರ್ಯಕ್ರಮದಲ್ಲಿ ನಾನೇ ಭಾಗವಹಿಸಿ, ಪರೋಪಕಾರದ ಸೇವೆಯನ್ನು ಕಂಡದ್ದು ಖುಷಿ ತಂದಿದೆ. ಇಂತಹ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಕಳೆದ 25 ವರ್ಷಗಳಿಂದ ಒಂದು ವರ್ಷವೂ ತಪ್ಪದೇ ಜನರಿಗೆ ಉಚಿತವಾಗಿ ಮಜ್ಜಿಗೆ ವಿತರಣೆ ಮಾಡುವ ಕೆಲಸ ದೊಡ್ಡ ಸಾಧನೆಯಾಗಿದೆ. ಇದು ಒಂದು ರೀತಿ ತಪ್ಪಸ್ಸಿನ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಅನ್ನದ ಪ್ರತಿ ಅಗುಳಿನ ಬೆಲೆ ಬಿತ್ತಿದ ರೈತನಿಗೆ ತಿಳಿದಿದೆ. ಆದರೆ ಜನ ಮದುವೆ ಮತ್ತಿತರೆ ಸಮಾರಂಭಗಳಲ್ಲಿ ಅನ್ನವನ್ನು ಬಿಸಾಡುವುದನ್ನು ಕಾಣುತ್ತಿದ್ದೇವೆ. ಇದನ್ನು ಅರಿತ ಸ್ಪೂರ್ತಿ ಸಂಸ್ಥೆ ಅನ್ನ ವ್ಯರ್ಥವಾಗುವುದನ್ನು ತಡೆದು ಅದು ಬಡವರಿಗೆ ಸಿಗುವಂತೆ ಮಾಡುತ್ತಿದೆ. ಈ ಸಂಸ್ಥೆಯೂ ಸಹ ಮನುಷ್ಯನ ಸೇವೆ ದೇವರ ಸೇವೆ ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದಾವಣಗೆರೆ ಇಸ್ಕಾನ್ ಮುಖ್ಯಸ್ಥ ಅವಧೂತ ಚಂದ್ರಪ್ರಭು ಗುರುಗಳು ಮಾತನಾಡಿ, ವಿಕಾಸ ತರಂಗಿಣಿ ಮತ್ತು ಸ್ಪೂರ್ತಿ ಸೇವಾ ಟ್ರಸ್ಟ್‍ನವರು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಮಜ್ಜಿಗೆಯನ್ನು ಮನೆಯಿಂದಲೇ ತಯಾರಿಸಿ ತಂದು ಜನರಿಗೆ ಕೊಡುತ್ತಿದ್ದಾರೆ. ಮಜ್ಜಿಗೆಯಿಂದ ಬಂದ ಬೆಣ್ಣೆಯನ್ನು ಈ ಸೇವೆಯಲ್ಲಿ ತೊಡಗಿಸಿಕೊಂಡ ದಾನಿಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಲಾಕ್‍ಡೌನ್ ಸಂದರ್ಭದಲ್ಲಿ ನಿತ್ಯ ಎರಡು ಸಾವಿರ ಆಹಾರದ ಪೊಟ್ಟಣಗಳನ್ನು ಸಂಕಷ್ಟದಲ್ಲಿದ್ದ ಜನರಿಗೆ ತಲುಪಿಸಲಾಗಿದೆ. ಕೇವಲ ದಾನದಿಂದ ಸಂಪೂರ್ಣತೆ ಕಾಣಲು ಅಸಾಧ್ಯ. ಸೇವೆಯೂ ಮುಖ್ಯ ಎಂದರು.
ವಿಕಾಸ ತರಂಗಿಣಿ ಗೌರವ ಕಾರ್ಯದರ್ಶಿ ಸತ್ಯನಾರಾಯಣ ರಾವ್, ಕಾರ್ಯದರ್ಶಿ ಸಿ.ಹೆಚ್. ಭಾವನಾರಾಯಣ ಮಾತನಾಡಿದರು. `ಜನತಾವಾಣಿ¬ ಉಪ ಸಂಪಾದಕ ಇ.ಎಂ. ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಮಜ್ಜಿಗೆ ವಿತರಣೆಯ ದಾನಿಗಳಾದ ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಹೆಚ್.ಆರ್. ಲಿಂಗರಾಜ್, ಬಸವರಾಜ್, ಎಂ. ವೀರಭದ್ರರಾವ್, ಮುರುಳಿ, ಕೆವಿಎಸ್ ಶರ್ಮ, ಬಳ್ಳಾರಿ ಷಣ್ಮುಖಪ್ಪ, ವೆಂಕಟರಾವ್, ಕರಿಬಸಯ್ಯ, ನಾಗರಾಜ ರಾವ್ ಶಾನಭೋಗ್ ಅವರನ್ನು ಗೌರವಿಸಲಾಯಿತು.
ಬಿಸಿಲಿನ ತಾಪದಿಂದ ನೀರು ಸಿಕ್ಕರೆ ಸಾಕಪ್ಪಾ ಎಂದುಕೊಳ್ಳುತ್ತಿದ್ದ ಸಾರ್ವಜನಿಕರು ಉಚಿತ ಮಜ್ಜಿಗೆ ಸವಿದು, ಸೇವಾ ಕಾರ್ಯವನ್ನು ಮೆಚ್ಚಿ, ಹರಸಿದರು.