ಜಗಳೂರು, ಜ.21- ಬರಪೀಡಿತ ಜಗಳೂರು ಕ್ಷೇತ್ರದ ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ 2.4ಟಿಎಂಸಿ ನೀರು ಹಂಚಿಕೆ ಮಾಡಿ ಸರ್ಕಾರ ಆದೇಶದ ಹೊರಡಿಸಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ 75 ವರ್ಷ ಪೂರ್ಣಗೊಂಡ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಹಾಗೂ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಜ.20ನೇ ಬುಧವಾರ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ನೀಡಿದೆ. 2.4 ಟಿಎಂಸಿ ನೀರು ಹರಿದು ತಾಲ್ಲೂಕಿನ 11 ಕೆರೆಗಳು ಭರ್ತಿಯಾಗಲಿವೆ. ಶೀಘ್ರ ಟೆಂಡರ್ ಪ್ರಕ್ರಿಯೆ ನಡೆದು, ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದೆ. ನಿರೀಕ್ಷೆಯಂತೆ ಸಂಗೇನಹಳ್ಳಿ ಕೆರೆ ಮೂಲಕವೇ ತಾಲ್ಲೂಕಿಗೆ ಭದ್ರೆ ಹರಿದುಬರಲಿದೆ ಎಂದು ಶಾಸಕರು ತಿಳಿಸಿದರು.
ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕ ಧನಸಹಾಯ ನೀಡಲಾಗು ವುದು. ವೃದ್ಧಾಪ್ಯ ಜೀವನದಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿ ಕೊಳ್ಳಿ ಎಂದು ನಿವೃತ್ತ ನೌಕರರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, ನಿವೃತ್ತ ನೌಕರರನ್ನು ಮಕ್ಕಳು ಗೌರವಿಸಬೇಕು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ತಾಲ್ಲೂಕಿನಲ್ಲಿನ ಪದವೀಧರ ನಿರುದ್ಯೋಗಿಗಳಿಗೆ ಅನುಕೂಲವಾಗಲು ಉದ್ಯೋಗ ತರಬೇತಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.
ನಿ.ನೌ.ಸಂಘದ ತಾಲ್ಲೂಕು ಅಧ್ಯಕ್ಷ ಎ.ಪಾಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ 1600 ಕ್ಕೂ ಅಧಿಕ ನಿವೃತ್ತ ನೌಕರರಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಆರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಶೀಘ್ರ ಒದಗಿಸಬೇಕು ಎಂದು ಮನವಿ ಮಾಡಿದರು.
ನೌಕರರು ನಿವೃತ್ತಿಯ ನಂತರ ನಿರುತ್ಸಾಹಗೊಳ್ಳುತ್ತಾರೆ. ಇನ್ನು ಕೆಲ ಇಲಾಖೆಗಳಲ್ಲಿ ಅವರಿಗೆ ಗೌರವ ನೀಡದೆ ಬೀಳ್ಕೊಡುತ್ತಾರೆ. ಈ ದೆಸೆಯಿಂದ ಆತ್ಮಸ್ಥೈರ್ಯ ತುಂಬಲು ಸಾಂಸ್ಕೃತಿಕ ಹಾಗೂ ಕ್ರೀಡೆಗಳನ್ನು ಆಯೋಜಿಸಿ ವೇದಿಕೆಗಳಲ್ಲಿ 75 ವರ್ಷ ಪೂರೈಸಿದವರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಜಿಪಂ ಸದಸ್ಯ ಎಸ್.ಕೆ. ಮಂಜುನಾಥ್, ಪ.ಪಂ. ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಅಜ್ಜಪ್ಪ ನಾಡಿಗರ, ಎಸ್.ಬಿ.ಐ. ಬ್ಯಾಂಕ್ ವ್ಯವಸ್ಥಾಪಕ ಕೃಷ್ಣರಾಜ್, ಬಿಇಓ ವೆಂಕಟೇಶ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಸಂಘದ ಗೌರವಾಧ್ಯಕ್ಷ ಓಂಕಾರಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಪದಾಧಿಕಾರಿಗಳಾದ ನಾರಪ್ಪ, ಬಸವನಗೌಡ, ನಜೀರ್ ಅಹಮ್ಮದ್. ಟಿ.ಕೆ. ಮಂಜುನಾಥ್, ಪಿ.ಮಲ್ಲಿಕಾರ್ಜುನ್, ಮಹಮ್ಮದ್ ಇಸ್ಮಾಯಿಲ್ ಸಾಬ್, ವಸಂತರೆಡ್ಡಿ, ಚಂದ್ರಶೇಖರ್, ಬಸವರಾಜಪ್ಪ, ಹುಚ್ಚಲಿಂಗಯ್ಯ, ಸತ್ಯಪ್ಪ, ಸುಧಾದೇವಿ, ಉಮಾದೇವಿ, ಶಿಖರಗೌಡ ಮುಂತಾದವರು ಭಾಗವಹಿಸಿದ್ದರು.