ಬರಪೀಡಿತ ಜಗಳೂರು ತಾಲ್ಲೂಕಿಗೆ ಹೆಚ್ಚಿನ ಆದ್ಯತೆ

ಜಗಳೂರು, ಜ. 20- ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆ  ಜಗಳೂರು ತಾಲ್ಲೂಕು ಮಾತ್ರ ಸೇರಿದ್ದು, ಬರ ಪೀಡಿತ ತಾಲ್ಲೂಕಿಗೆ ಹೆಚ್ಚಿನ ಅನುದಾನ ಕಲ್ಪಿಸಲು ಆದ್ಯತೆ ನೀಡುವುದಾಗಿ ಮಂಡಳಿಯ ನೂತನ ಅಧ್ಯಕ್ಷ ಅಣಬೇರು ಜೀವನಮೂರ್ತಿ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿಂದು ಅಧಿಕಾರಿ ಗಳೊದಿಗೆ ಪ್ರಗತಿ ಪರಿಶೀಲನೆ  ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, 14 ಜಿಲ್ಲೆ ಗಳನ್ನೊ ಳಗೊಂಡ 57 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನ ಸಭಾ  ಕ್ಷೇತ್ರಗಳು ಮಂಡಳಿ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹಾಗೂ 14 ಲೋಕಸಭಾ, 70 ವಿಧಾನಸಭಾ ಹಾಗೂ 24 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 147 ಜನ ಸದಸ್ಯರನ್ನು ಹೊಂದಿದೆ ಎಂದರು.

ಬರಪೀಡಿತ ಕ್ಷೇತ್ರಗಳಲ್ಲಿ ಅಂತರ್ ಜಲ ಅಭಿವೃದ್ಧಿ ಸೇರಿದಂತೆ ಇತರೆ ಗ್ರಾಮೀಣ ಅಭಿವೃದ್ಧಿ ಕೆಲಸಗಳನ್ನು ಮಂಡಳಿ ಕೈಗೊಳ್ಳಲಿದೆ. ಈ ವರ್ಷ ಕೊರೊನಾದಿಂದಾಗಿ ಅನುದಾನದ  ಕೊರತೆ ಇದೆ. 2020-21ನೇ ಸಾಲಿಗೆ 1074 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ವರ್ಷ 16.72 ಕೋಟಿ ರೂ. ನಿಗದಿ ಪಡಿಸಿದೆ. 85 ಕೋಟಿ ರೂ. ಅನುದಾನ ಬೇಕಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಮಂಡಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಜೀವನಮೂರ್ತಿ ತಿಳಿಸಿದರು.

ಮಂಡಳಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳನ್ನು ಹೊಂದಿರುವುದಿಲ್ಲ. ಪಿ.ಆರ್.ಇ.ಡಿ., ಕೃಷಿ, ಲೋಕೋಪಯೋಗಿ, ನಿರ್ಮಿತಿ, ಕೆ.ಎಲ್.ಆರ್.ಡಿ. ಮುಂತಾದ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಿದೆ. ಹಾಗೂ ಮೇಲ್ವಿಚಾರಣೆ ನಡೆಸುತ್ತದೆ ಎಂದರು.

ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಈಗಾಗಲೇ ತುಮಕೂರು ಜಿಲ್ಲೆಯ ಪ್ರವಾಸ ಮುಗಿಸಲಾಗಿದೆ ಎಂದರು.

ಸಭೆಯಲ್ಲಿ ಮಂಡಳಿಯ ಕಾರ್ಯದರ್ಶಿ ಬಸವರಾಜಪ್ಪ, ಉಪ ಕಾರ್ಯದರ್ಶಿ ಕೃಷ್ಣಾ ನಾಯ್ಕ, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ಪಪಂ. ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಬಿಜೆಪಿ ಅಧ್ಯಕ್ಷ ಹೆಚ್.ಸಿ. ಮಹೇಶ್, ಮುಖಂಡರಾದ ಡಿ.ವಿ. ನಾಗಪ್ಪ, ಶಿವಣ್ಣ, ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.

ಕಾಮಗಾರಿ ವೀಕ್ಷಣೆ: ಸಭೆಯ ನಂತರ ಪಟ್ಟಣದ ಗುರುಭವನದ ಆವರಣದಲ್ಲಿ ನಿರ್ಮಿಸುತ್ತಿರುವ ಬಯಲು ರಂಗ ಮಂದಿರದ ಕಾಮಗಾರಿಯನ್ನು ಮಂಡಳಿ ಅಧ್ಯಕ್ಷ ಜೀವನಮೂರ್ತಿ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾಹಿತಿ ಪಡೆದರು.

error: Content is protected !!