ಆಸ್ಟ್ರೇಲಿಯಾ ವಿರುದ್ಧ ಸ್ಮರಣಾರ್ಹ‌ ಜಯ

ಆಸ್ಟ್ರೇಲಿಯಾ 369 & 294, ಭಾರತ 336 & 329/7

ಹಿರಿಯರ ಗೈರಿನಲ್ಲಿ ವಿಜೃಂಭಿಸಿದ ಕಿರಿಯರು

ಬ್ರಿಸ್ಬೇನ್, ಜ. 19 – ಸಾಲು ಸಾಲು ಗಾಯಗಳು, ಹಿರಿಯ ಆಟಗಾರರ ಅನುಪಸ್ಥಿತಿ ಹಾಗೂ ಬಳಲಿಕೆಯನ್ನು ಮೆಟ್ಟಿ ನಿಂತಿರುವ ಭಾರತೀಯ ಕ್ರಿಕೆಟ್ ತಂಡ, ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಅನ್ನು ಮೂರು ವಿಕೆಟ್‌ನಿಂದ ಗೆದ್ದುಕೊಂಡಿದೆ. ಇದರಿಂದಾಗಿ ಸರಣಿಯನ್ನು 2-1ರ ಅಂತರದಿಂದ ಗೆದ್ದಿರುವ ಭಾರತೀಯ ತಂಡ, ಬಾರ್ಡರ್ – ಗಾವಸ್ಕರ್ ಕಪ್ ತನ್ನದಾಗಿಸಿಕೊಂಡಿದೆ.

ರಿಶಭ್ ಪಂತ್ 138 ಎಸೆತಗಳಲ್ಲಿ 89 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು, ಭಾರತ 328 ರನ್‌ಗಳ ಗುರಿ ತಲುಪಲು ನೆರವಾಯಿತು. ಇದರೊಂದಿಗೆ 32 ವರ್ಷಗಳ ನಂತರ ಆಸ್ಟ್ರೇಲಿಯಾ ಗಬ್ಬಾ ನೆಲದಲ್ಲಿ ಮೊದಲ ಸೋಲು ಕಂಡಿದೆ.

ಭಾರತದ ವಿರುದ್ದ ಸತತ ಎರಡು ಸರಣಿ ಸೋಲುವುದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಟಿಮ್ ಪೈನೆ ಅವಧಿಯೂ ಅಂತ್ಯವಾಗುವ ಸಾಧ್ಯತೆ ಇದೆ.

ನೂರು ಟೆಸ್ಟ್‌ಗಳಲ್ಲಿ ಆಡಿರುವ ಆಸ್ಟ್ರೇಲಿಯಾದ ಬೌಲರ್ ನ್ಯಾಥನ್ ಲ್ಯಾನ್ ಅವರನ್ನು ಪಂತ್ ಅವರು ಹೊಸ ಆಟಗಾರ ವಾಷಿಂಗ್ಟನ್ ಸುಂದರ್ (22) ಜೊತೆಗೂಡಿ ಎದುರಿಸಿದ್ದು ಬಹು ದಿನಗಳವರೆಗೆ ನೆನಪಿನಲ್ಲಿ ಉಳಿಯಲಿದೆ. 

ಹಲವು ಬಾರಿ ಟೀಕೆಗಳಿಗೆ ಗುರಿಯಾಗಿದ್ದ ಪಂತ್, ವಿದೇಶಿ ನೆಲದಲ್ಲಿ ಸ್ಮರಣಾರ್ಹ ಹೋರಾಟ ತೋರುವುದರ ಮೂಲಕ ಮಂಗಳವಾರದಂದು ತಮ್ಮ ಟೀಕಾಕಾರಿಗೆ ಉತ್ತರ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಚೇತೋಹಾರಿಯಾಗಿತ್ತು.

ಶುಭಮ್ ಗಿಲ್ (146 ಎಸೆತಗಳಲ್ಲಿ 91 ರನ್) ಜಾಗತಿಕ ಹಂತಕ್ಕೆ ಕಾಲಿರಿಸುವುದನ್ನು ಘೋಷಿಸಿದರು. ಚೇತೇಶ್ವರ್ ಪೂಜಾರ (211 ಎಸೆತಗಳಲ್ಲಿ 56) ತಮ್ಮ ವೃತ್ತಿ ಜೀವನದ ಅತ್ಯಂತ ನಿಧಾನ ಗತಿಯ ಅರ್ಧ ಶತಕವನ್ನು ಬಾರಿಸಿದರು. ಆದರೆ, ಅವರು ಹಾಕಿಕೊಟ್ಟ ವೇದಿಕೆಯು ಪಂತ್ ನಂತರದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಲು ನೆರವಾಯಿತು.

ಶುಭಮ್ ಗಿಲ್ ಅವರು ಆಸ್ಟ್ರೇಲಿಯಾದ ಬೌಲರ್‌ಗಳನ್ನು ಲೆಕ್ಕಕ್ಕಿಲ್ಲದ ರೀತಿಯಲ್ಲಿ ಚಚ್ಚಿದ್ದು, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗೂ ಹೆಮ್ಮೆ ತರಬಹುದಾಗಿದೆ. 21 ವರ್ಷದ ಗಿಲ್, ತಮ್ಮ ಸಾಧನೆಯ ಹಾದಿಯಲ್ಲಿ ದೂರ ಕ್ರಮಿಸುವ ಸೂಚನೆ ನೀಡಿದ್ದಾರೆ.

ರಕ್ಷಣಾತ್ಮಕ ಆಟಕ್ಕೆ ಮುಂದಾದ ಪೂಜಾರ ತಲೆ, ಎದೆ, ಕಾಲು ಸೇರಿದಂತೆ ಹಲವು ಅಂಗಗಳಿಗೆ ಚೆಂಡಿನ ಹೊಡೆತ ತಿಂದರು. ಆದರೆ, ವಿಕೆಟ್ ಮಾತ್ರ ಚೆಲ್ಲಲಿಲ್ಲ. ನಂತರದಲ್ಲಿ ಕಣಕ್ಕಿಳಿದ ಪಂತ್, ಆಸ್ಟ್ರೇಲಿಯಾದ ಬೌಲರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿದರು. ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಕಾಣಿಕೆಯೂ ಗೆಲುವಿಗೆ ನೆರವಾಯಿತು.

ಹಲವಾರು ಆಟಗಾರರು ಗಾಯಗೊಂಡಿದ್ದ ಕಾರಣ ಕೊನೆಯ ಟೆಸ್ಟ್‌ಗೆ 11 ಜನರ ತಂಡವನ್ನು ಕಂಡುಕೊಳ್ಳಲೂ ಸಹ ಭಾರತ ಪರದಾಡುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸೋಲುಂಡಿರುವುದು ಆಸ್ಟ್ರೇಲಿಯಾ ತಂಡಕ್ಕೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

ಹಂಗಾಮಿ ನಾಯಕ ಅಜಿಂಕ್ಯ ರೆಹಾನೆ ನೇತೃತ್ವದ ತಂಡ ಗಳಿಸಿದ ಈ ಸರಣಿ ಗೆಲುವು ಕ್ರಿಕೆಟ್ ಇತಿಹಾಸದಲ್ಲಿ ಬಹಳ ದಿನಗಳವರೆಗೆ ನೆನಪಿನಲ್ಲಿ ಉಳಿಯಲಿದೆ. 

ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ, ಆರ್. ಅಶ್ವಿನ್ ಹಾಗೂ ಜಸ್‌ಪ್ರಿತ್ ಬುಮ್ರಾ ಅವರು ಸರಣಿಯ ಹಲವಾರು ಹಂತಗಳಲ್ಲಿ ಲಭ್ಯವಿರಲಿಲ್ಲ. ಇದನ್ನು ಪರಿಗಣಿಸಿದಾಗ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇರದ 2018-19ರ ಸರಣಿಯಲ್ಲಿ ಭಾರತ ಗೆದ್ದಿದ್ದಕ್ಕಿಂತ, ಪ್ರಸಕ್ತ ಸರಣಿ ಗೆಲುವು ಎಷ್ಟೋ ಪಟ್ಟು ಅಮೂಲ್ಯವಾಗಿದೆ.

ಮೂರನೇ ಟೆಸ್ಟ್‌ನಲ್ಲಿ ಭಾರತ ಡ್ರಾ ಮಾಡಿಕೊಂಡಿದ್ದು ಹಲವಾರು ಗೆಲುವುಗಳಿಂದ ಸ್ಮರಣಾರ್ಹ ಎಂದು ಬಣ್ಣಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ಟೆಸ್ಟ್‌ನ ಗೆಲುವು ಎಷ್ಟು ಬಹುಮೂಲ್ಯ ಎಂಬುದನ್ನು ತೋರಿಸುತ್ತದೆ.

ಭಾರತೀಯ ಕ್ರಿಕೆಟ್ ತಂಡದ ಸಾಧನೆಯಿಂದಾಗಿ ಹೆಮ್ಮೆಯಿಂದ ಬೀಗಿರುವ ಬಿ.ಸಿ.ಸಿ.ಐ. ತಂಡಕ್ಕೆ 5 ಕೋಟಿ ರೂ. ಬಹುಮಾನ ಪ್ರಕಟಿಸಿದೆ.

error: Content is protected !!