ದಾವಣಗೆರೆ, ಜ.19- ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ರೈತ – ದಲಿತ – ಕಾರ್ಮಿಕ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಇದೇ ದಿನಾಂಕ 26ರ ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್-ಬೈಕ್ ರಾಲಿ ಪರೇಡ್ ನಡೆಸಲಿದ್ದಾರೆ.
ರೈತ ಕುಲವನ್ನೇ ನಾಶಪಡಿಸಬಹುದಾದ ಕಾನೂನುಗಳನ್ನು ಜಾರಿಗೆ ತಂದು ಕೇಂದ್ರ ಸರ್ಕಾರ ರೈತರ ಮರಣ ಶಾಸನ ಬರೆದಿದ್ದು, ರೈತ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ 53 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಗಮನ ಹರಿಸದೇ ನಾಟಕೀಯವಾಗಿ ವರ್ತಿಸುತ್ತಿದೆ ಎಂದು ರೈತ – ದಲಿತ – ಕಾರ್ಮಿಕ ಐಕ್ಯ ಹೋರಾಟದ ಕೋರ್ ಕಮಿಟಿ ಮುಖಂಡ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಅದಾನಿ, ಅಂಬಾನಿ ಕಂಪೆನಿಗಳ ತಾಳಕ್ಕೆ ತಕ್ಕಂತೆ ಕುಣಿಯತ್ತಾ ವಿಮಾನಯಾನ, ರೈಲ್ವೆ, ಕಲ್ಲಿದ್ದಲು ಸರ್ಕಾರಿ ಸ್ವಾಮ್ಯವನ್ನು ಖಾಸಗಿಗೆ ಮಾರಾಟ ಮಾಡುವುದಲ್ಲದೇ ಕೃಷಿ ಕ್ಷೇತ್ರವನ್ನು ಸಹ ಈ ಕಂಪೆನಿಗೆ ಒಪ್ಪಿಸಿ ರೈತರನ್ನು ಕೂಲಿ ಕೆಲಸಗಾರರನ್ನಾಗಿ ಮಾಡಲು ವಾಮ ಮಾರ್ಗ ಅನುಸರಿಸುತ್ತಿದೆ ಎಂದು ದೂರಿದರು.
ಕೊರೊನಾ ವೈರಸ್ ಭೀತಿ ಉಂಟು ಮಾಡಿ ರೈತರನ್ನು ಮನೆಯಲ್ಲಿ ಕೂರಿಸಿ ಕೇಂದ್ರ ಸರ್ಕಾರ ರೈತ ವಿರೋಧ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಯಾವುದೇ ಚರ್ಚೆ ಇಲ್ಲದೇ ಜಾರಿಗೆ ತಂದು ಜನತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದೆ.
– ಕುರುಬೂರ್ ಶಾಂತಕುಮಾರ್, ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ
ಬಹಿರಂಗ ಚರ್ಚೆಗೆ ಆಹ್ವಾನ
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿದೆ. ಅದನ್ನು ಸರಿ ಎಂದು ಹೇಳುವ ಯಾರೇ ಆಗಲಿ ಅವರು ಪ್ರಧಾನಿ ಮೋದಿ ಕರೆದುಕೊಂಡು ಚರ್ಚೆಗೆ ಬಂದಲ್ಲಿ ನಾವು ತಿದ್ದುಪಡಿ ಕಾಯ್ದೆಗಳ ಮಾರಕ ಹೇಗೆಂದು ದೃಢಪಡಿಸಲು ಚರ್ಚೆಗೆ ಸಿದ್ಧರಿದ್ದೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಸವಾಲು ಹಾಕಿದರು.
ನಗರದ ಜಯದೇವ ವೃತ್ತದಲ್ಲಿ ಬಹಿ ರಂಗವಾಗಿ ಚರ್ಚೆಗೆ ಬರುವಂತೆ ಆಹ್ವಾನ ನೀಡುತ್ತಾ, ಹೀಗೆ ಚರ್ಚೆಗೆ ಬರುವಾಗ ರೈತನಿಗೆ ಹೇಗೆ ಈ ಕಾಯ್ದೆಗಳು ಪೂರಕ ಆಗುತ್ತವೆ ಎನ್ನುವ ವಿಷಯವಿಟ್ಟುಕೊಂಡು ಬರಬೇಕು. ನಾವುಗಳು ಕಾಯ್ದೆಗಳು ಮಾರಕ ದೃಢಪಡಿಸುತ್ತೇವೆ. ನಾವು ಸುಧಾರಣೆ ವಿರೋಧಿಗಳಲ್ಲ. ಆದರೆ, ಈ ಕಾಯ್ದೆಗಳನ್ನು ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ನಡೆಯು ತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಮಾತನಾಡುತ್ತಾರೆ. ಆದರೆ, ರೈತರ ಜಾಗ ದಲ್ಲಿ ಉದ್ಯಮಿಗಳ ಆದಾಯ ದ್ವಿಗುಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಗಳನ್ನು ಮೆಚ್ಚುವಂತವರಿಗೆ ಆ ಕಾಯ್ದೆಗಳೇ ಇರಲಿ. ಇದು ಬೇಡ ಎನ್ನುತ್ತಿರುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಿ ಎಂದರು.
ಕೇಂದ್ರ ಸರ್ಕಾರದ ಕಾಯ್ದೆಗಳಿಂದ ಬೆಲೆ ನಿಗದಿ ಮಾಡುವ ಮಾನದಂಡವೂ ತಪ್ಪಿ ಹೋಗಿ ಖಾಸಗಿ ಉದ್ಯಮಿಗಳ ಮಾಲೀಕತ್ವದ ಕಂಪನಿಗಳು ತಮಗೆ ಇಚ್ಛೆ ಬಂದ ಬೆಲೆ ನಿಗದಿ ಮಾಡುವಂತಾಗುತ್ತದೆ. ಆಗ ರೈತರು ಅನಿವಾರ್ಯವಾಗಿ ಸಂಕಷ್ಟಕ್ಕೆ ಸಿಲುಕಬೇಕಾ ಗುತ್ತದೆ. ಈ ಬಗ್ಗೆ ರೈತರು ಜಾಗೃತರಾಗಬೇಕು. ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ರೈತರ ಬಗ್ಗೆ ಹಗುರ ಮಾತಾಡಿದರೆ ದಾವೆ : ರೈತ ಮುಖಂಡ ಬಲ್ಲೂರು ರವಿ ಕುಮಾರ್ ಮಾತನಾಡಿ, ದೆಹಲಿಯಲ್ಲಿ ಹೋ ರಾಟ ನಡೆಸುತ್ತಿರುವ ರೈತರು ಏಜೆಂಟ್ಗ ಳೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳು ತ್ತಾರೆ. ಅವರದ್ದೇ ಕೇಂದ್ರ ಸರ್ಕಾರ ರೈತರನ್ನು ಮಾತುಕತೆಗೆ ಕರೆಯುತ್ತಿದೆ. ಹಾಗಿದ್ದರೆ ರೈತರು ಏಜೆಂಟ್ಗಳಾದರೆ ಮಾತುಕತೆಗೆ ಸರ್ಕಾರವೇಕೆ ಕರೆಯಬೇಕು. ಇಂತಹ ಹೇಳಿಕೆಗಳನ್ನು ನೀಡುವ ಈ ನಾಯಕರು ರೈತ ಹೋರಾಟವನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದೇ ರೀತಿ ರೈತರ ಬಗ್ಗೆ ಮಾತನಾಡುತ್ತಿದ್ದರೆ ನಾವುಗಳು ನ್ಯಾಯಾಲಯದಲ್ಲಿ ಅವರ ವಿರುದ್ಧ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದರು.
ಕನಿಷ್ಠ ಬೆಂಬಲ ಬೆಲೆ ಜಾರಿ ಮಾಡಿ: ರೈತ ಮುಖಂಡ ಹುಚ್ಚವ್ಬನಹಳ್ಳಿ ಮಂಜುನಾಥ ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಘೋಷಿ ಸುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಆ ಕಾಯ್ದೆ ಜಾರಿ ತರಲು ಮುಂದಾಗುತ್ತಿಲ್ಲ. ಈ ಕಾಯ್ದೆ ಜಾರಿಗೊಳಿ ಸಲು ಆದ್ಯತೆ ನೀಡುವಂತೆ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ರಾದ ಹೊನ್ನೂರು ಮುನಿಯಪ್ಪ, ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್, ಐರಣಿ ಚಂದ್ರು, ಅಂಜಿನಪ್ಪ ಪೂಜಾರ್ ನಿಟುವಳ್ಳಿ, ದೇವ ಕುಮಾರ್, ಅತ್ತಹಳ್ಳಿ ದೇವರಾಜ್, ಜಯನಾಯಕ, ರಾಂಪುರ ಬಸವರಾಜ್, ಇಟಗಿ ಬಸವರಾಜಪ್ಪ, ಕೋಲ್ಕುಂಟೆ ಬಸಣ್ಣ ಸೇರಿದಂತೆ ಇತರರಿದ್ದರು.