ಆಯ-ವ್ಯಯದಲ್ಲಿ ಅನುದಾನ ಮೀಸಲು, ಸೌಲಭ್ಯಗಳ ಪ್ರಾಧಾನ್ಯತೆಗೆ ಮನವಿ

ಮೇಯರ್ ಅಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಪಾಲಿಕೆ ಆಯ-ವ್ಯಯ ತಯಾರಿಕೆ ಪೂರ್ವಭಾವಿ ಸಭೆ

ದಾವಣಗೆರೆ, ಜ.12- ಮಕ್ಕಳ ಚಟುವಟಿಕೆಗೆ ಅನುದಾನ ಮೀಸಲಿಡಬೇಕು, ಎಸ್ಸಿ, ಎಸ್ಟಿ ಅನುದಾನ ಆ ಸಮುದಾಯಕ್ಕೆ ಬಳಕೆಯಾಗಬೇಕು. ಜೀವ ವೈವಿಧ್ಯ ಚಟುವಟಿಕೆಗೆ ಅನುದಾನ ಮೀಸಲಿಡುವುದು, ನಾಗರಿಕರ ಮೂಲಭೂತ ಸೌಲಭ್ಯಗಳಿಗೆ ಆಯವ್ಯಯದಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಪ್ರಗತಿ ಮತ್ತು ಅನುದಾನ ಸದ್ಬಳಕೆ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಕುಂದು-ಕೊರತೆಗಳ ನಿವಾರಣೆ ಕಾರ್ಯಗತವಾಗಿಸುವ ಬಗ್ಗೆ ನಗರ ಪಾಲಿಕೆಯ ಆಯವ್ಯಯ ತಯಾರಿಕೆಯ ಪೂರ್ವಭಾವಿ ಸಭೆಯಲ್ಲಿ ಸಲಹೆಗಳು ವ್ಯಕ್ತವಾದವು.

ಪಾಲಿಕೆ ಸಭಾಂಗಣದಲ್ಲಿ  ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಸಲಹೆಗಳ ಮುಖೇನ ಗಮನ ಸೆಳೆದವು. 

ಮಕ್ಕಳ ಸ್ನೇಹಿ ಪಾಲಿಕೆಗೆ ಮನವಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಮಾತನಾಡಿ, ನಗರ ಪಾಲಿಕೆಯ ಆಯ-ವ್ಯಯದಲ್ಲಿ ಮಕ್ಕಳ ಚಟುವಟಿಕೆಗೆ ಅನುದಾನ ಮೀಸಲಿಡಬೇಕು. ಈ ವಿಚಾರವಾಗಿ ಹಲವಾರು ಬಾರಿ ಮನವಿ ನೀಡಲಾಗಿದೆ. ಆದರೆ, ಕಾರ್ಯಗತ ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಅಜಯ್ ಕುಮಾರ್, ಮಕ್ಕಳ ಯಾವ ಚಟುವಟಿಕೆಗೆ ಅನುದಾನ ನೀಡಬಹುದು ಎಂದು ಕೇಳಿದಾಗ, ಆರು ವರ್ಷದಿಂದ 14 ವರ್ಷದೊಳಗಿನ ಮಕ್ಕಳ ಸಂಖ್ಯೆ ಎರಡು ಲಕ್ಷದಷ್ಟಿದೆ. ಈ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ, ಬೇಸಿಗೆ ಶಿಬಿರ, ವಿಜ್ಞಾನ ಸಮಾವೇಶ, ಪರಿಸರ ಶಿಬಿರ ಮತ್ತು ವಿಜ್ಞಾನ ಪ್ರವಾಸ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದು. ಇವುಗಳಿಗೆ 2021-22ನೇ ಸಾಲಿನ ಆಯವ್ಯಯದಲ್ಲಿ ರೂ. 10 ಲಕ್ಷ ಮೀಸಲಿಡಬೇಕು. ಪಾಲಿಕೆ ಮಕ್ಕಳ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಗುರುಸಿದ್ಧಸ್ವಾಮಿ ಮನವಿ ಮಾಡಿದರು. 

ಜೀವ ವೈವಿಧ್ಯ ಸಂರಕ್ಷಣೆಗೆ ಒತ್ತು ನೀಡಿ: ಪರಿಸರ ರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ಎಸ್. ದೇವರಮನೆ ಮಾತನಾಡಿ, ಜೀವ ವೈವಿಧ್ಯ ಚಟುಕವಟಿಕೆಗಳಿಗೆ ಈ ವರ್ಷದ ಆಯವ್ಯಯದಲ್ಲಿ 12 ಲಕ್ಷ ಅನುದಾನ ಮೀಸಲಿಡಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಜೀವ ವೈವಿದ್ಯತೆಯ ಸಮತೋಲನ ಕಾಪಾಡಲು ನಗರ ವ್ಯಾಪ್ತಿಯ ಸೂಕ್ಷ್ಮ ಜೀವಿಗಳು, ವಿಶೇಷ ಗಿಡ-ಮರಗಳು, ಪಾರಂಪರಿಕ ತಾಣಗಳು, ಕೆರೆಗಳ ಸಂರಕ್ಷಣೆಯ ಬಗ್ಗೆ ಚರ್ಚೆ, ಸಂವಾದದಂತಹ ಪೂರಕ ಚಟುವಟಿಕೆಗಳನ್ನು ನಡೆಸಬೇಕು. ಭವಿಷ್ಯದಲ್ಲಿ ಜೀವ ವೈವಿಧ್ಯ ಸಂರಕ್ಷಣೆಗಾಗಿ ಅಧ್ಯಯನ ಕೇಂದ್ರದ ಅಗತ್ಯವಿದ್ದು, ಅದಕ್ಕೆ ಬೇಕಾಗುವ ಸ್ಥಳ, ಅನುದಾನ ಆಯವ್ಯಯದಲ್ಲಿಟ್ಟು ಮಂಜೂರಾತಿ ನೀಡಬೇಕು. ಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಪರಿಸರ ದಿನಾಚರಣೆಯನ್ನೂ ಆಚರಿಸುವಂತಾಗಬೇಕಿದೆ. ಇದರಲ್ಲಿ ಪರಿಸರ ಸಂರಕ್ಷಣೆಯ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು

ಎಸ್ಸಿ-ಎಸ್ಟಿ ಅನುದಾನ ರಸ್ತೆ, ಚರಂಡಿ ಬಳಕೆಗೆ ಸಲ್ಲ: ಸೋಮಲಾಪುರ ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಬರುವ 24:10 ಅನುದಾನವನ್ನು ನಗರದ ರಸ್ತೆ, ಚರಂಡಿಗೆ ಬಳಕೆ ಮಾಡಿಕೊಳ್ಳಬಾರದು. ಈ ಸಮುದಾಯಕ್ಕೆ ಅನುಕೂಲವಾಗುವ ಸಮುದಾಯ ಭವನಗಳಿಗೆ ಬಳಕೆ ಮಾಡಿಕೊಳ್ಳಬೇಕು. ಈ ಬಾರಿಯ ಆಯ-ವ್ಯಯದಲ್ಲಿ ಇದಕ್ಕಾಗಿ ಅನುದಾನ ಮೀಸಲಿಡಬೇಕಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ದಲಿತ ಕೇರಿಗಳನ್ನೂ ಅಭಿವೃದ್ಧಿಪಡಿಸಬೇಕು. ಸಭೆಯಲ್ಲಿ ನೀಡಿದ ಸಲಹೆಗಳನ್ನು ಸಭೆಗಷ್ಟೇ ಸೀಮಿತವಾಗಿಸದೇ ಕಾರ್ಯರೂಪಕ್ಕೆ ತರಬೇಕೆಂದರು.

ಎಂಎಸ್‍ಡಬ್ಲ್ಯೂ ಪದವೀಧರರಿಗೆ ಅವಕಾಶ ನೀಡಿ : ಯುವಕ ಸಂತೋಷ್ ಮಾತನಾಡಿ, ಎಂಎಸ್‍ಡಬ್ಲೂ ಓದಿದ ಪದವೀಧರರಿಗೆ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗದ ಅವಕಾಶ ಕಲ್ಪಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವು ಮತ್ತು ಅವುಗಳನ್ನು ಸಮರ್ಥವಾಗಿ ಪರಿಹರಿಸುವ ಸಾಮರ್ಥ್ಯವಿದೆ. ಇದರಿಂದ ಪಾಲಿಕೆಗೂ ಅನುಕೂಲ. ಈ ಬಾರಿಯ ಬಜೆಟ್‍ನಲ್ಲಿ ಇದನ್ನು ಸೇರಿಸಬೇಕೆಂದರು. 

ವಿಕಲಚೇತನರಿಗೆ ಹೆಚ್ಚಿನ ಸೌಲಭ್ಯ ನೀಡಿ: ಎನ್ ಜಿಓ ಸಂಸ್ಥೆಯ ಸುರೇಶ್ ಮಾತನಾಡಿ, ವಿಕಲಚೇತನರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಅವರಿಗೆ ವಾಹನಗಳನ್ನು ಕೊಡುವ ಜೊತೆಗೆ ಉದ್ಯೋಗಕ್ಕಾಗಿ ಹೆಚ್ಚಿನ ಆದ್ಯತೆ ಕೊಟ್ಟು ಪ್ರೋತ್ಸಾಹಿಸಬೇಕು. ಅಂಗವಿಕಲತೆ ತಡೆಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಹುಟ್ಟಿದಂದಿನಿಂದ 10 ವರ್ಷ ವಿಕಲಚೇತನ ಮಕ್ಕಳಿಗೆ ಸೌಲಭ್ಯಗಳನ್ನು ಕೊಡುವಂತೆ ಕೋರಿದರು. 

ನಿರುದ್ಯೋಗಿ ಯುವಕರಿಗೆ ಪರವಾನಗಿ ನೀಡಿ: ಕಳೆದ ಕೆಲ ವರ್ಷಗಳ ಹಿಂದೆ ನಿರುದ್ಯೋಗಿ ಯುವಕರು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯಿಂದಲೇ ಕಾರು ಚಾಲನೆಯ ತರಬೇತಿ ಜೊತೆಗೆ ಬ್ಯಾಡ್ಜ್ ಸಹಿತ ಚಾಲನಾ ಪರವಾನಗಿ ನೀಡಲಾಗುತ್ತಿತ್ತು. ಆದರೀಗ ಅದನ್ನು ನಿಲ್ಲಿಸಿದ್ದು, ಆ ಯೋಜನೆ ಪುನರ್ ಕಾರ್ಯಗತಗೊಳಿಸುವಂತೆ ಮಲ್ಲಿಕಾರ್ಜುನ ಇಂಗಳದಾಳ್ ಕೋರಿದರು.

ಶುಲ್ಕ ವಿಧಿಸಿ ನಿವೇಶನ ಸ್ವಚ್ಚತೆಗೆ ಆದ್ಯತೆ: ಬಡಾವಣೆಯಲ್ಲಿನ ಹಂದಿ, ಮಂಗ, ನಾಯಿಗಳ ಹಾವಳಿ ನಿಯಂತ್ರಿಸುವಂತೆ ವಿವೇಕಾನಂದ ಬಡಾವ ಣೆಯ ನಾಗರಿಕರ ಸಮಿತಿ ಒತ್ತಾಯಿಸಿತಲ್ಲದೇ, ಖಾಲಿ ನಿವೇಶನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ನಿವೇಶನಗಳ ಸ್ವಚ್ಚತೆ ಕಾಪಾಡಿಕೊಳ್ಳು ವಂತೆ ಅದರ ಮಾಲೀಕರಿಗೆ ಸೂಚನೆ ನೀಡಲಾಗಿ ದ್ದರೂ ಕೆಲವರು ಮುಂದಾಗದ ಕಾರಣ ಪ್ರತಿ ಚದರಡಿಗೆ 10 ರೂ. ಶುಲ್ಕ ವಿಧಿಸಿ ಪಾಲಿಕೆಯಿಂದಲೇ ಸ್ವಚ್ಚತೆಗೆ ಕಾರ್ಯಪ್ರವೃತ್ತರಾಗುತ್ತೇವೆಂದರು. 

ಸಭೆಯಲ್ಲಿ ಸಂಘ ಸಂಸ್ಥೆಗಳ ಮುಖಂಡರಾದ ಸಿದ್ದರಾಮಪ್ಪ, ಕೆ.ಜಿ. ನಾಗರಾಜ್ ಮತ್ತಿತರರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪಮೇಯರ್ ಸೌಮ್ಯ ನರೇಂದ್ರ ಸೇರಿದಂತೆ ಇತರರು ಇದ್ದರು.

error: Content is protected !!