ದಾವಣಗೆರೆ, ಮಾ.27- ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿದ್ದರೆ ಸಮಾಜದಲ್ಲಿನ ಶೋಷಣೆಗಳನ್ನು ತಡೆಯುವುದು ಅಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಿಟುವಳ್ಳಿಯ ರಾಷ್ಟ್ರೋತ್ಥಾನ ಕೇಂದ್ರದ ಸಭಾಂಗಣದಲ್ಲಿ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಜಿಲ್ಲಾ ಶಾಖೆಯಿಂದ ನಿನ್ನೆ ಏರ್ಪಡಿಸಿದ್ದ `ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಪುರುಷ ಪ್ರಧಾನ ಸಮಾಜವಾಗಿದ್ದು, ಹಿಂದಿನಿಂದಲೂ ಕೌಟುಂಬಿಕ ದೌರ್ಜನ್ಯ, ಶೋಷಣೆ, ಅತ್ಯಾಚಾರ, ಭ್ರೂಣಹತ್ಯೆ ಮುಂತಾದ ಪ್ರಕರಣಗಳು ನಡೆಯುತ್ತಲೇ ಇವೆ. ಸಂವಿಧಾನ ಬದ್ಧ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದಲ್ಲದೇ, ಕಡ್ಡಾ ಯವಾಗಿ ಪಾಲನೆ ಮಾಡಿದರೆ, ಸಮಾಜದಲ್ಲಿ ನಡೆಯುವ ಇಂತಹ ಪ್ರಕರಣಗಳನ್ನು ತಡೆಯಬಹುದು ಎಂದರು.
ದೇಶಕ್ಕೆ ಕೊಡುಗೆ ನೀಡಿದ, ಸಮಾಜಕ್ಕೆ ಮಾದರಿ ಯಾದ ಮಹಿಳೆಯರನ್ನು ನೆನೆಯಲು ವಿಶ್ವ ಮಹಿಳಾ ದಿನವನ್ನು ಆಚರಿಸುವ ಮೂಲಕ ಗೌರವಿಸಲಾಗುತ್ತದೆ ಎಂದು ಹೇಳಿದರು.ಹಿಂದೆಂದಿಗಿಂತಲೂ ಇಂದು ಮಹಿಳೆ ಬಲಿಷ್ಠಳಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದಾಳೆ. ಆದರೂ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ. ಇಂತಹ ಪ್ರಕರಣಗಳು ಜರುಗಿದ ತಕ್ಷಣ ವರದಿ ಮಾಡಬೇಕು. ಯಾವುದೇ ಕಾರಣಕ್ಕೂ ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು ಎಂದರು.
ಕಾನೂನುಗಳನ್ನು ಗೌರವಿಸುವ ಜೊತೆಗೆ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿಜಯಾನಂದ್ ಮಾತನಾಡಿ, ಸಮಾಜದಲ್ಲಿರುವ ಕೊರತೆಗಳನ್ನು ಸರಿಪಡಿಸಿಕೊಂಡು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕೆಂದರು. ಕಾನೂನುಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೇ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ ಮತ್ತು ಗೌರವಿಸಬೇಕಾಗಿದೆ. ಸಾಮಾಜಿಕವಾಗಿ ಬದಲಾವಣೆ ಸಹ ಆಗಬೇಕಾಗಿದೆ ಎಂದರು.
ಅಖಿಲ ಭಾರತೀಯ ಅಧಿವಕ್ತ ಪರಿಷತ್ ಜಿಲ್ಲಾಧ್ಯಕ್ಷ ಎಲ್. ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ರಾಜ್ಯ ಉಪಾಧ್ಯಕ್ಷ ಕಾಕನೂರು ವೈ. ಮಂಜಪ್ಪ, ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್ ಉಪಸ್ಥಿತರಿದ್ದರು.
ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಅನಿತಾ ದೊಡ್ಡಗೌಡರ್ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ವಕೀಲರಾದ ಜ್ಯೋತಿ ಪ್ರಾರ್ಥಿಸಿದರು, ರೇಖಾ ಸ್ವಾಗತಿಸಿದರು. ಸಿ.ಪಿ. ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು.