ಮೂರು ಶಾಪಗಳಿಂದ ಕಾಂಗ್ರೆಸ್‌ ಅವನತಿ

ಹೊನ್ನಾಳಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಹೊನ್ನಾಳಿ, ಜ.10- ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗೋಮಾತೆ ಶಾಪದಿಂದ ಭಾರತ ಕಾಂಗ್ರೆಸ್ ಮುಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಪಟ್ಟಣದಲ್ಲಿ  ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ನೂತನ ಸದಸ್ಯರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರು ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ವಿಸರ್ಜಿಸಿ ಎಂದು ಹೇಳಿದ್ದರೂ ವಿಸರ್ಜಿ ಸದೆ ಗಾಂಧೀಜಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್,  ನಂತರದ ದಿನಗಳಲ್ಲಿ ಗಾಂಧೀಜಿಯವರ ಅನೇಕ ಯೋಜನೆಗಳನ್ನು ಗಾಳಿಗೆ ತೂರಿದ ಪರಿ ಣಾಮ ಗಾಂಧೀಜಿಯವರ ಶಾಪಕ್ಕೆ ಗುರಿಯಾಗಿದೆ.

ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಅಲ್ಲದೆ ಚುನಾವಣೆಯಲ್ಲಿ ಅವರ ವಿರುದ್ಧ ಬೇರೊಬ್ಬ ಅಭ್ಯರ್ಥಿ ಸ್ಪರ್ಧಿಸುವಂತೆ ಕಾಂಗ್ರೆಸ್ ತಂತ್ರ ಮಾಡಿತು. ಅಲ್ಲದೆ ಅವರ ನಿಧನದ ನಂತರ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆಗೆ ಜಾಗ ಕೊಡದೆ ಅವರಿಗೆ ಅವಮಾನ ಮಾಡಿದ್ದರ ಪರಿಣಾಮ ಡಾ. ಬಿ.ಆರ್.ಅಂಬೇಡ್ಕರ್ ಅವರ ಶಾಪಕ್ಕೆ ಗುರಿ ಯಾಯಿತು. ಇಂದಿರಾ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಹಸು ಕರು ಇತ್ತು.  ಅಲ್ಪ ಸಂಖ್ಯಾತರ ಮತ ಬ್ಯಾಂಕ್‍ಗಾಗಿ ಗೋಹತ್ಯೆ ನಿಷೇಧ ವಿರೋಧಿಸಿದ್ದರ ಪರಿಣಾಮ ಗೋಮಾತೆಯ ಶಾಪವೂ ಕಾಂಗ್ರೆಸ್‍ಗೆ ತಟ್ಟಿದೆ. ಇದೆಲ್ಲರ ಕಾರಣದಿಂದಾಗಿ ಕಾಂಗ್ರೆಸ್ ಇಂದು ರಾಷ್ಟ್ರದಲ್ಲಿ ಹೇಳ ಹೆಸರಿಲ್ಲದಂತಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಾರದೆ ಇದ್ದರೂ ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸತೀಶ್‌ ಜಾರಕಿಹೊಳಿ ನಡುವೆ ಕಿತ್ತಾಟ ಪ್ರಾರಂಭವಾಗಿದೆ ಎಂದು ಲೇವಡಿ ಮಾಡಿದರು.

ಮತ ಬ್ಯಾಂಕ್‍ಗಾಗಿ ರಾಷ್ಟ್ರದ್ರೋಹದ ಕೆಲಸಗಳಲ್ಲಿ ಭಾಗಿಯಾದ ಪರಿಣಾಮ ದೆಹಲಿಯ ತಿಹಾರ್ ಜೈಲಿನಲ್ಲಿ ಕಾಂಗ್ರೆಸ್ ಮುಖಂಡರೇ ತುಂಬಿ ತುಳುಕುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರು ಯಾರ ಕಷ್ಟವನ್ನೂ ಕೇಳದೆ ಮನೆಯಲಿದ್ದು, ಈಗ ಹೊರಗಡೆ ಬಂದು ನನ್ನ ಬಗ್ಗೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ನನ್ನ ಬಗ್ಗೆ ಭ್ರಷ್ಟಾಚಾರದ ಆರೋಪ ಇದ್ದರೆ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು. 

ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಪಟ್ಟಣದ ಕುಡಿಯುವ ನೀರಿಗೆ 25 ಕೋಟಿ ರೂ. ಹಾಗೂ ಪಟ್ಟಣದ ಯುಜಿಡಿ ಕಾಮಗಾರಿಗೆ 60 ಕೋಟಿ ರೂ., ನ್ಯಾಮತಿ ಕುಡಿಯುವ ನೀರಿಗೆ 40 ಕೋಟಿ ರೂ.ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ. ಟೆಂಡರ್ ಮಾತ್ರ ಬಾಕಿ ಇದೆ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೋವಿಡ್‍ನಂತಹ ಮಾರಕ ಖಾಯಿಲೆ ಸಮಯದಲ್ಲೂ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಜನತೆಗೆ ಸಾಂತ್ವನ ಹೇಳಿದ್ದು  ಶ್ಲ್ಯಾಘನೀಯ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೇಶ್ ಹನಗವಾಡಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಬಯಲು ಸೀಮೆ ನಿಗಮ ಮಂಡಲಿ ಅಧ್ಯಕ್ಷ ಜೀವನ್‍ಮೂರ್ತಿ, ಜಿ.ಪಂ. ಸದಸ್ಯರಾದ ದೀಪಾ ಜಗದೀಶ್, ವೀರಶೇಖರಪ್ಪ, ಎಂ.ಆರ್.ಮಹೇಶ್, ಉಮಾ ರಮೇಶ್, ಸುರೇಂದ್ರನಾಯ್ಕ್, ತಾ.ಪಂ. ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ ,ಉಪಾಧ್ಯಕ್ಷ ರಂಗನಾಥ್, ನ್ಯಾಮತಿ ತಾ.ಪಂ. ಅಧ್ಯಕ್ಷ ರವಿಕುಮಾರ್, ಪುರಸಭೆ ಅಧ್ಯಕ್ಷ ಕೆ.ವಿ.ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ತಿಪ್ಪಾನಾಯ್ಕ್, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ್, ಸಿ.ಆರ್.ಶಿವಾನಂದ್ ಹಾಗೂ ಇತರರು ಇದ್ದರು.

error: Content is protected !!