ಮಾರ್ಚ್ ಒಳಗೆ ಕಾಮಗಾರಿ ಪೂರ್ಣಕ್ಕೆ ಕಾರಜೋಳ ಸೂಚನೆ
ದಾವಣಗೆರೆ, ಜ. 7 – ಡಾಂಬರ್ ರಸ್ತೆಗಳಲ್ಲಿ ಗುಂಡಿ ಕಂಡು ಬಂದರೆ ಮಣ್ಣು ಹಾಕದೇ ಎಂಟು ದಿನಗಳಲ್ಲೇ ಡಾಂಬರ್ ತೇಪೆ ಹಾಕಬೇಕು ಎಂದು ತಾಕೀತು ಮಾಡಿ ರುವ ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಜನರು ರಸ್ತೆ ಸಂಚಾರ ಮಾಡುವಾಗ ಗುಂಡಿಗಳಿಂದಾಗಿ ಬೈದುಕೊಳ್ಳುವಂತಾಗ ಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿರುವ ಉಪ ಮುಖ್ಯಮಂತ್ರಿ, ಜಿಲ್ಲೆಯ 939.51 ಕಿ.ಮೀ. ಮುಖ್ಯ ರಸ್ತೆಗಳಲ್ಲಿ ಶೇ.2ರಷ್ಟು ಕಡೆ ಗುಂಡಿಗಳನ್ನು ಮುಚ್ಚಬೇಕಿದೆ. ಈ ಬಗ್ಗೆ ತ್ವರಿತ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ದಾವಣಗೆರೆ – ಹರಿಹರ ರಸ್ತೆಯಲ್ಲಿ ಗುಂಡಿಗಳಿಗೆ ಮಣ್ಣು ಹಾಕುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಪಿಡಬ್ಲ್ಯೂಡಿ ಬಂಗಲೆ
ಪ್ರವಾಸಿ ಬಂಗಲೆಗಳ ನಿರ್ವಹಣೆ ಲೋಕೋಪ ಯೋಗಿ ಇಲಾಖೆಗೆ ಹೊರೆಯಾಗುತ್ತಿದೆ. ಅಲ್ಲಿ ಸಿಬ್ಬಂದಿ ಕೊರತೆಯಾಗಿದ್ದು, ಕಸ ಗುಡಿಸುವವರೂ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬಂಗಲೆಗಳನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಗೆ ಬಂಗಲೆ ವಹಿಸುವು ದರಿಂದ ನಿರ್ವಹಣೆ ಸುಲಭವಾಗಲಿದೆ, ಜನರಿಗೂ ಅನುಕೂಲವಾಗಲಿದೆ ಎಂದವರು ತಿಳಿಸಿದ್ದಾರೆ. ಇನ್ನು ಮುಂದೆ ಗಣ್ಯರು, ಅಧಿಕಾರಿಗಳು ನಿಯಮಿತ ವಾಗಿ ಭೇಟಿ ನೀಡುವ ಸ್ಥಳಗಳನ್ನು ಹೊರತು ಪಡಿಸಿ ಬೇರೆಡೆ ಪ್ರವಾಸಿ ಬಂಗಲೆ ನಿರ್ಮಿಸದಿರಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ರಸ್ತೆಗಳಿಗೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಕೆಲವು ಕಾಮಗಾರಿಗಳು ಬಾಕಿ ಇದ್ದು, ಮಾರ್ಚ್ 31ರ ಒಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 385 ಕಿ.ಮೀ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ 12 ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದ ಅವರು, ಎಸ್‌ಸಿಪಿ – ಟಿಎಸ್‌ಪಿ ಅಡಿಯಲ್ಲಿ 35.75 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, 110 ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಕೆಶಿಪ್ – 3ರಡಿ ಗದಗ – ಹೊನ್ನಾಳಿ ರಸ್ತೆಯ ಹೊನ್ನಾಳಿ ವ್ಯಾಪ್ತಿಯ 10 ಕಿ.ಮೀ. ರಸ್ತೆಯನ್ನು 45 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ 189 ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ 362.55 ಕಿ.ಮೀ.ಗಳ ಮುಖ್ಯ ರಸ್ತೆಗಳ ಉನ್ನತೀಕರಣಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾರಜೋಳ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ವೈ.ರಾಮಪ್ಪ, ಲಿಡ್ಕರ್ ಅಧ್ಯಕ್ಷ ಹಾಗೂ ಶಾಸಕ ಪ್ರೊ. ಲಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.