ಬಿಜೆಪಿ ಎಸ್.ಸಿ. ಮೋರ್ಚಾ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರೋಪ
ದಾವಣಗೆರೆ, ಜ.6- ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಹೆಸರೇಳಿಕೊಂಡು ಬೆಂಕಿ ಹಚ್ಚಲು ಯತ್ನಿಸುತ್ತಿರುವ ಕಾಂಗ್ರೆಸ್ ನಿಂದ ದೇಶವನ್ನು ರಕ್ಷಿಸಬೇಕಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಹೇಳಿದರು.
ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಇಂದು ಏರ್ಪಾಡಾಗಿದ್ದ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕಹಳೆ ಊದುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಆಡಳಿತಾವಧಿಯಲ್ಲಿ ರಾಷ್ಟ್ರಭಕ್ತ ಅಂಬೇಡ್ಕರ್ ಅವರಿಗೆ ಸತತ ಆರು ಬಾರಿ ಅವಮಾನಿಸುವ ಮೂಲಕ ಕಾಂಗ್ರೆಸ್ ಮಾಡಿದ ಪಾಪವನ್ನು ಪ್ರಧಾನಿ ನರೇಂದ್ರ ಮೋದಿ ಸರಿ ಪಡಿಸುತ್ತಿದ್ದಾರೆ ಎಂದರು.
ದೇಶ ವಿಭಜನೆಯ ಕಳಂಕ ಹೊರಲು ಸಿದ್ಧರಿಲ್ಲ ಎಂದಿದ್ದ ಅಂಬೇಡ್ಕರ್ ಮಾತನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ದೇಶ ವಿಭಜನೆಗೆ ಮುಂದಾಯಿತು. ರಾಜಕಾ ರಣದಲ್ಲಿ ನೆಹರೂ ಅವರು ತಂತ್ರ ನಡೆಸಿ ಅಂಬೇಡ್ಕರ್ ಸೋಲುವಂತೆ ಮಾಡಿ ಅವಮಾನ ಮಾಡಿದರು.
ಗಾಂಧೀಜಿ, ನೆಹರು ಸಮಾಧಿಗಳನ್ನು ದೆಹಲಿಯಲ್ಲಿ ನಿರ್ಮಿಸಿದ ಕಾಂಗ್ರೆಸ್ ಮುಖಂಡರು ಅಂಬೇಡ್ಕರ್ ಸಮಾಧಿಯನ್ನು ದೆಹಲಿಯಲ್ಲಿ ನಿರ್ಮಿಸಲು ಅವಕಾಶ ನೀಡಲಿಲ್ಲ. ಅಂತಿಮ ಕ್ರಿಯೆಗಳನ್ನೂ ನಡೆಸಲಿಲ್ಲ. ಈ ರೀತಿ ಕಾಂಗ್ರೆಸ್ ಸತತವಾಗಿ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಲೇ ಬಂದಿದೆ ಎಂದರು.
ಇದೀಗ ಪ್ರಧಾನಿ ಮೋದಿ ಅಂಬೇಡ್ಕರ್ ಅವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸುವ ಮೂಲಕ ಕಾಂಗ್ರೆಸ್‌ನ ತಪ್ಪುಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪರಿಶಿಷ್ಟ ಜಾತಿಯ ಜನತೆ ಇಂತಹ ವಿಷಯಗಳನ್ನು ತಿಳಿಯಬೇಕಿದೆ. ಓಟ್ ಬ್ಯಾಂಕ್‌ಗೆ ಬಳಸಿಕೊಂಡು ನಿರ್ಲಕ್ಷಿಸುವ ಕಾಂಗ್ರೆಸ್‌ಗೆ ಪಾಠ ಕಲಿಸುವ ಅಗತ್ಯವಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಾಂಗ್ರೆಸ್ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳಿಂದಲೇ ನಾವು ಗೆಲ್ಲುತ್ತೇವೆ ಎಂಬ ಕಾಲ ಬದಲಾಗಿ, ಹಿಂದುಳಿದ ಜನಾಂಗದ ಉದ್ಧಾರ ಬಿಜೆಪಿಯಿಂದ ಮಾತ್ರ ಎನ್ನುವ ಕಾಲ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡರು ಗರೀಬಿ ಹಠಾವೋ ಎಂದು ಹೇಳುತ್ತಲೇ 70 ವರ್ಷ ಕಾಲ ಕಳೆದರು. ಆದರೆ ಪ್ರಧಾನಿ ಮೋದಿ ಪ್ರತಿ ಬಡವನಿಗೂ ಸೂರು ಕೊಡಲು ಕಾರ್ಯಪ್ರವೃತ್ತರಾದರು. ಎಸ್ಸಿ ಜನಾಂಗದವರನ್ನು ರಾಷ್ಟ್ರಪತಿ ಮಾಡಿದ ಹಾಗೂ ಹಿಂದುಳಿದವರ ಮೀಸಲಾತಿಯನ್ನು ಮುಂದುವರೆಸಿದ ಕೀರ್ತಿ ಬಿಜೆಪಿ ಸರ್ಕಾರದ್ದು ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡುತ್ತಾ, ಸರ್ಕಾರ ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡುತ್ತದೆ. ಅದು ಸದ್ಬಳಕೆ ಯಾಗುವಂತೆ ಮಾಡುವ ಕೆಲಸ ಎಸ್ಸಿ ಮೋರ್ಚಾ ಪದಾಧಿಕಾರಿಗಳದ್ದು ಎಂದರು.
ಸರ್ಕಾರದ ಹೊಸ ಯೋಜನೆಗಳನ್ನು ಹಿಂದುಳಿದ ವರ್ಗದವರಿಗೆ ತಲುಪಿಸುವಂತಾದಾಗ ಮಾತ್ರ ಇಂತಹ ಸಭೆ ಸಾರ್ಥಕತೆ ಪಡೆಯುತ್ತದೆ ಎಂದರು.
ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಚಲುವಾದಿ ನಾರಾಯಣ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬಿಜೆಪಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಎಂಬ ಕಾಂಗ್ರೆಸ್‌ನ ಸುಳ್ಳುಗಳಿಗೆ ಮೋದಿ ಸೇರಿದಂತೆ ಪಕ್ಷದ ನಾಯಕರು ತಮ್ಮ ನಡವಳಿಕೆಗಳ ಮೂಲಕವೇ ಉತ್ತರ ನೀಡುತ್ತಿದ್ದಾರೆ ಎಂದರು.
ಎಸ್ಸಿ ಜನರಲ್ಲಿ ಅರಿವು ಹೆಚ್ಚಾಗುತ್ತಿದ್ದು ಕಾಂಗ್ರೆಸ್‌ನವರ ಸುಳ್ಳುಗಳಿಗೆ ಸೊಪ್ಪು ಹಾಕದೆ ಬಿಜೆಪಿ ಜೊತೆ ಕೈ ಜೋಡಿಸುವ ಕೆಲಸ ನಡೆಯುತ್ತಿದೆ. ಎಸ್ಸಿ ಜನಾಂಗವನ್ನು ಮೀಸಲಾತಿಗಷ್ಟೇ ಸೀಮಿತಗೊಳಿಸದೆ, ಬೇರೆ ರೀತಿಯಲ್ಲೂ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ದಲಿತ ಮುಖಂಡರಿಗೆ ಬಿಜೆಪಿ ವಿರೋಧಿಸಲು ಸಕಾರಣಗಳೇ ಇಲ್ಲ. ಅನಗತ್ಯ ಟೀಕೆ ಮಾಡುವುದನ್ನು ನಿಲ್ಲಿಸಿ, ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಪರಿಶಿಷ್ಟರು ಸಂಘಟಿತರಾಗಬೇಕು ಎಂದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುನಿಕೃಷ್ಣ, ಮಾಜಿ ಶಾಸಕ ಬಸವರಾಜ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.