ಕೊಂಡಜ್ಜಿ ಕೆರೆ, ಕೊಮಾರನಹಳ್ಳಿ ಗುಡ್ಡ ಪ್ರದೇಶ ಜೀವವೈವಿಧ್ಯ ತಾಣ

ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ : ಆಶೀಸರ

ದಾವಣಗೆರೆ, ಜ. 5 – ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆ ಹಾಗೂ ಕೊಮಾರನಹಳ್ಳಿ ಗುಡ್ಡದ ಪ್ರದೇಶಗಳಲ್ಲಿ ಅಮೂಲ್ಯ ಮರಗಳಿರುವ ಮಾಹಿತಿ ಸಿಕ್ಕಿದೆ. ಇವುಗಳನ್ನು ಜೀವವೈವಿಧ್ಯ ತಾಣ ಎಂದು ಘೋಷಿಸಲು ಈ ವರ್ಷ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕುರುಚಲು ಅರಣ್ಯಗಳಲ್ಲಿ ಸಾಕಷ್ಟು ಜೀವವೈವಿಧ್ಯ ಇದೆ. ಇಂತಹ ತಾಣಗಳನ್ನು ಗುರುತಿಸಲು ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾಡಳಿತಗಳ ಜೊತೆಗೂಡಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಪಂಚಾಯ್ತಿ ಜೀವ ವೈವಿಧ್ಯ ಸಮಿತಿ, ನಗರಸಭೆ ಜೀವ ವೈವಿಧ್ಯ ಸಮಿತಿಗಳಿಗೂ ಸಹ ಜೀವ ವೈವಿಧ್ಯ ತಾಣ ಗುರುತಿಸಲು ಅವಕಾಶವಿದೆ. ಈ ವರ್ಷದ ಕಾರ್ಯಸೂಚಿ ಪಟ್ಟಿಯಲ್ಲಿ ಇಂತಹ ಹಲವು ತಾಣಗಳನ್ನು ಗುರುತಿಸುವುದನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಜೀವ ವೈವಿಧ್ಯ ಕಾಯ್ದೆಯ ಅನ್ವಯ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳಿರುತ್ತವೆ. ದಾವಣಗೆರೆ ಜಿಲ್ಲೆಯಲ್ಲೂ ಸಹ ಗ್ರಾಮ, ತಾಲ್ಲೂಕು, ಜಿಲ್ಲೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜೀವ ವೈವಿಧ್ಯ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ನಗರ ತ್ಯಾಜ್ಯದಿಂದ ಬಯೋಗ್ಯಾಸ್ ತಯಾರಿಕೆ ಮಾಡಬಹುದಾಗಿದೆ. ಹಾಸ್ಟೆಲ್, ಕಲ್ಯಾಣ ಮಂಟಪ ಹಾಗೂ ಮನೆಗಳ ತ್ಯಾಜ್ಯ ಸಂಗ್ರಹಿಸಿಯೂ ಗ್ಯಾಸ್ ತಯಾರಿಸಬಹುದು. ಆದರೆ, ದಾವಣಗೆರೆಯಲ್ಲಿ ಇಂತಹ ಕ್ರಮ ತೆಗೆದುಕೊಂಡಿಲ್ಲ. ಈ ಕ್ರಮ ತೆಗೆದುಕೊಂಡರೆ ತ್ಯಾಜ್ಯ ಸಮಸ್ಯೆ ಬಗೆಹರಿಯುವ ಜೊತೆಗೆ ಇಂಧನವೂ ಸಿಗುತ್ತದೆ ಎಂದು ಹೇಳಿದರು.

ಕೆಲ ಔಷಧೀಯ ಸಸ್ಯಗಳು ಅಳಿವಿನ ಅಂಚಿಗೆ ಬಂದಿವೆ. ಜಿಲ್ಲೆಯಲ್ಲಿ ಇಂತಹ ಅಳಿವಿನ ಅಂಚಿನ ಸಸ್ಯಗಳಿದ್ದರೆ, ಅವುಗಳನ್ನು ಗುರುತಿಸಿ ರಕ್ಷಿಸಲು ಕ್ರಮ ತೆಗೆದುಕೊಳ್ಳಲು ವರದಿ ರೂಪಿಸಲಾಗುತ್ತಿದೆ. ಪಾರ್ಕ್‌ಗಳಲ್ಲೂ ಮರಗಳನ್ನು ಹೆಚ್ಚಾಗಿ ಬೆಳೆಸಬಹುದು ಎಂದೂ ಆಶೀಸರ ಹೇಳಿದ್ದಾರೆ.

ನದಿ ಪ್ರದೇಶಗಳಲ್ಲಿನ ಗಣಿಗಾರಿಕೆಯಿಂದಾಗಿ ಮೀನುಗಳಿಗೆ ತೊಂದರೆಯಾಗಿದೆ. ಹೀಗಾಗಿ ತುಂಗಭದ್ರಾ ನದಿ ಸೇರಿದಂತೆ, 15 ನದಿ ಪ್ರದೇಶಗಳಲ್ಲಿ ಮತ್ಸ್ಯಧಾಮ ರೂಪಿಸಲು ನಿರ್ಧರಿಸಲಾಗಿದೆ. ಈಗಾಗಲೇ 11 ಮತ್ಸ್ಯಧಾಮಗಳನ್ನು ರೂಪಿಸಲಾಗಿದೆ ಎಂದವರು ತಿಳಿಸಿದರು.

ಪರಿಸರ ರಕ್ಷಣೆಯ ಜೊತೆಗೆ ಸುಸ್ಥಿರ ಅಭಿವೃದ್ಧಿ ಹೊಂದುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ 2030 ಹಾಗೂ 2050ರ ಮಾರ್ಗಸೂಚಿಗಳು ಸಿದ್ಧವಾಗಿವೆ. ಇವುಗಳ ಅನ್ವಯ ಪ್ರತಿ ವರ್ಷವೂ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಆಶೀಸರ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!