ಹರಿಹರ, ಮಾ. 6 – ಇದೇ ದಿನಾಂಕ 18 ಮತ್ತು 19ರಂದು ದಾವಣಗೆರೆಯಲ್ಲಿ ನಡೆಯಲಿರುವ ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶದ ದಾವಣಗೆರೆ ಚಲೋ ಪೋಸ್ಟರ್ ಗಳನ್ನು ಶಾಸಕ ಎಸ್.ರಾಮಪ್ಪ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಶಾಸಕರು, ದಾವಣಗೆರೆಯಲ್ಲಿ ನಡೆಯುವ ದಸಂಸ ರಾಜ್ಯ ಸಮಾವೇಶ, ರಾಜ್ಯದಲ್ಲಿ ಮಹತ್ವ ಪಡೆದಿದೆ. ವಿವಿಧ ಬಣಗಳಲ್ಲಿ ಹಂಚಿ ಹೋಗಿರುವ ದಲಿತ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವ, ಸಂಘಟನೆಗೊಳ್ಳುವ ವಿಶಿಷ್ಠ ಸಂದರ್ಭವಾಗಿದೆ ಎಂದರು.
70ರ ದಶಕದಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಪ್ರೊ.ಬಿ.ಕೃಷ್ಣಪ್ಪನವರು ಹರಿಹರದವರೇ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಕೃಷ್ಣಪ್ಪನವರು ಅಂದು ಹಚ್ಚಿದ ದೀಪವು ಸತತ 4 ದಶಕಗಳ ಅವಧಿಯಲ್ಲಿ ಸಾಮಾಜಿಕ ನ್ಯಾಯದ ಕುರಿತಾಗಿ ಒಂದು ಇಡಿಯಾದ ರಾಜಕೀಯ ಪ್ರಜ್ಞೆಯನ್ನು ದಲಿತರಲ್ಲಿ ಮೂಡಿಸಲು ಯಶಸ್ವಿಯಾಯಿತು ಎಂದು ಹೇಳಿದರು.
ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಇಡೀ ರಾಜ್ಯದ ಬಡವರ ಗುಡಿಸಲುಗಳಲ್ಲಿ ಹೋರಾಟದ ಹಣತೆಯನ್ನು ಹಚ್ಚಿದ ಪ್ರೊ.ಬಿ.ಕೃಷ್ಣಪ್ಪನವರು ‘ಆ ಹಣತೆಯನ್ನು ಎಂದೂ ಆರದಂತೆ ನೋಡಿಕೊಳ್ಳಿ’ ಎಂದು ಹೇಳಿದ ಮಾತನ್ನು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕಿದೆ.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್, ಸಮಿತಿಯ ಹರಳಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಹೆಚ್.ಎಂ.ಹನುಮಂತಪ್ಪ, ರವಿಕುಮಾರ್ ಮಾರ್ಸ್, ನಾರಾಯಣಪ್ಪ, ಭಾನುವಳ್ಳಿ ಸಿ.ಚೌಡಪ್ಪ, ಎಸ್.ಕೆ.ಹರೀಶ್, ಮಂಜುನಾಥ್ ಟಿ.ಎಚ್, ರಾಜೂ, ಮಲೇಬೆನ್ನೂರು ಪುರಸಭೆ ಸದಸ್ಯರಾದ ಸಾಬಿರ್, ಜಯಸಿಂಹ, ಖಲೀಲ್, ಭೋವಿ ಕುಮಾರ್, ನಯಾಜ್, ಭೋವಿ ಶಿವು, ಆರಿಫ್ ಅಲಿ ಎ. ಮತ್ತಿತರರು ಉಪಸ್ಥಿತರಿದ್ದರು.