ಧ್ಯಾನದ ಅಕ್ಷರ ರೂಪವೇ ಆರಾಧನೆಯ ಭಜನೆ : ಡಾ. ಎಂ.ಜಿ. ಈಶ್ವರಪ್ಪ

ದಾವಣಗೆರೆ, ಮಾ.2- ಆತ್ಮ ಶುದ್ಧಿಗಾಗಿ ದೇವರನ್ನು ಸ್ತುತಿಸುವ ಸಾಕ್ಷಿರೂಪವೇ ಭಜನಾ ಪರಂಪರೆ. ಭಜನಾ ಸಂಸ್ಕಾರ, ಸಂಸ್ಕೃತಿ, ಹುಟ್ಟು, ಸಾವಿನ ಎಲ್ಲಾ ಶುಭ, ಅಶುಭ ಸಂದರ್ಭಗಳಲ್ಲಿ ಸೂಕ್ತ ಭಕ್ತಿ ಪ್ರಧಾನ ಕಲಾಪರಂಪರೆ. ಧ್ಯಾನದ ಅಕ್ಷರ ರೂಪವೇ ಆರಾಧನೆಯ ಭಜನೆ. ಅದರಲ್ಲೂ ಗ್ರಾಮೀಣ ಪ್ರದೇಶದ ಭಜನಾ ಕಲಾವಿದರಿಗೆ ಯಾವುದೇ ಸಂಗೀತ ಕಲಿಕಾ ತರಬೇತಿಯ ಅಗತ್ಯವೇ ಇರುವುದಿಲ್ಲ. ಭಜನಾ ಕಲಾಸಕ್ತ ರೈತರಿಗೆ ಅವರ ಮನದಾಳದಿಂದಲೇ ರಕ್ತಗತವಾಗಿಯೇ ಈ ಭಜನಾ ಕಲೆ ಕರಗತವಾಗಿರುತ್ತದೆ. ಪ್ರಸ್ತುತ ದಿನಮಾನಗಳ ಯುವ ಪೀಳಿಗೆ ಇದನ್ನು ಅನುಸರಿಸಬೇಕಾಗಿದೆ ಎಂದು ಜನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ ತಮ್ಮ ಮನದಾಳದ ಮಾತನ್ನು ಹೇಳಿದರು.

ನಗರದ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ಪುಟ್ಟರಾಜ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಗುರು ಕುಮಾರಸ್ವಾಮಿ ವೇದಿಕೆಯಲ್ಲಿ  ನಿರಂತರವಾಗಿ ನಡೆಯುತ್ತಿರುವ `ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ’ಯ 30ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಶ್ರೀ ವೀರೇಶ್ವರ ಪುಣ್ಯಾಶ್ರಮದ ಗೌರವ ಕಾರ್ಯದರ್ಶಿ ಎ.ಹೆಚ್.ಶಿವಮೂರ್ತಿಸ್ವಾಮಿ, ಖಜಾಂಚಿ ಜೆ.ಎನ್.ಕರಿಬಸಪ್ಪ ಜಾಲಿಮರದ, ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು, ಭಜನಾ ತೀರ್ಪುಗಾರರಾದ ಹಿರಿಯ ಸಂಗೀತ ಕಲಾವಿದ ಹನುಮಂತಪ್ಪ, ವಿದುಷಿ ಶ್ರೀಮತಿ ಮಂಗಳಗೌರಿ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಭಜನಾ ಸ್ಪರ್ಧೆ ಸಮಿತಿಯ ಕಾರ್ಯಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ   ಸ್ವಾಗತಿಸಿದರು.

error: Content is protected !!