ದಾವಣಗೆರೆ, ಫೆ. 28- ಕಾಂಗ್ರೆಸ್ ಪಕ್ಷದ ಧೋರಣೆ ಖಂಡಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿತು.
ಸದನದಲ್ಲಿ ವಿಷಯ ಇಲ್ಲದಿದ್ದರೂ ಗದ್ದಲವೆಬ್ಬಿಸಿ ಕಲಾಪ ವ್ಯರ್ಥ ಮಾಡಿದ ಕಾಂಗ್ರೆಸ್. ಇದರಿಂದ ಬೊಕ್ಕಸಕ್ಕೆ ಅನಗತ್ಯ ಹೊರೆ ಯಾಗಿದೆ. ಕಾಂಗ್ರೆಸ್ ಧರಣಿಯಿಂದ ಕಲಾಪಗಳು ಬಲಿ ಆಗಿವೆ.
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಪೈಪೋಟಿ, ವೈಮನಸ್ಸು, ಒಳಜಗಳದಿಂದ ಕರ್ನಾಟಕದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅಧಿಕಾರದಲ್ಲಿ ಇಲ್ಲದ ಹತಾಷೆ, ಆಡಳಿತ ಕಳೆದುಕೊಂಡ ನೋವನ್ನು ಅವರು ಕೋಮು ಗಲಭೆಗಳಿಗಾಗಿ ಬಳಸುತ್ತಿದ್ದಾರೆ.
ಸದನಕ್ಕೆ ರಾಷ್ಟ್ರಧ್ವಜವನ್ನು ತಂದು ಧ್ವಜ ನೀತಿಯನ್ನು ಕಾಂಗ್ರೆಸ್ ಉಲ್ಲಂಘಿಸಿದೆ, ಕಾಂಗ್ರೆಸ್ ಪಕ್ಷದ ನಾಯಕರ ದುರ್ವರ್ತನೆಗೆ ಇದು ಒಂದು ಸಾಕ್ಷಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್ ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸುಳ್ಳು ಹೇಳಿಕೆ ನೀಡುತ್ತಿರುವ ಡಿ.ಕೆ.ಶಿವಕುಮಾರ್ `ಸುಳ್ಳಿನ ಕುಮಾರ್’ ಆಗಿದ್ದಾರೆ. ರಾಷ್ಟ್ರಧ್ವಜ ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾಗಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ. ಇವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದಾದಾಗಿರಿ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೂ ದಾದಾಗಿರಿಯ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಂಜಾನಾಯ್ಕ್, ಶಿವರಾಜ್ ಪಾಟೀಲ್, ಶ್ರೀನಿವಾಸ ದಾಸಕರಿಯಪ್ಪ, ಮಹಾನಗರ ಪಾಲಿಕೆ ಸದಸ್ಯ ಅಜಯ್ ಕುಮಾರ್, ಎಸ್. ಟಿ ವೀರೇಶ್, ಶಿವಪ್ರಕಾಶ್, ಜಿಲ್ಲಾ ಖಜಾಂಚಿ ಬಾತಿ ವೀರೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ವಿಶ್ವಾಸ್ ಹೆಚ್.ಪಿ, ಮಂಡಲ ಅಧ್ಯಕ್ಷರುಗಳಾದ ಸಂಗನಗೌಡ್ರು, ಆನಂದರಾವ್ ಸಿಂಧೆ, ದೇವೇಂದ್ರಪ್ಪ ಶ್ಯಾಗಲೆ, ಮೋರ್ಚಾ ಅಧ್ಯಕ್ಷ ಹನುಮಂತನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮಹೇಶ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಪುಷ್ಪವಾಲಿ, ಶ್ರೀಮತಿ ಭಾಗ್ಯ ಪಿಸಾಳೆ, ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.