ಸೇವೆ ಖಾಯಂ, ಸಂಚಿತ ವೇತನಕ್ಕಾಗಿ ಆಗ್ರಹ

ದಾವಣಗೆರೆ, ಫೆ.24- ದಾವಣಗೆರೆ ವಿವಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸೇವೆ ಖಾಯಂ, ಸಂಚಿತ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆಗ್ರಹಿಸಿ ದಾವಣಗೆರೆ ವಿಶ್ವವಿದ್ಯಾನಿಲಯದ ಸಿ ಮತ್ತು ಡಿ ಗ್ರೂಪ್ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿನಿಂದ  ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಸೇವೆ ಖಾಯಂ ಆಗುವವರೆಗೂ ನೌಕರರನ್ನು ಸಂಚಿತ ವೇತನದಡಿಯಲ್ಲಿ ನೇಮಕ ಮಾಡಿಕೊಂಡು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಕೋರಿ ಕಳೆದ 4 ವರ್ಷಗಳಿಂದ ವಿಶ್ವವಿದ್ಯಾನಿಲಯಕ್ಕೆ ಮನವಿ ಪತ್ರಗಳನ್ನು ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸಂಘಟನೆ ವತಿಯಿಂದ ಹೊರಗುತ್ತಿಗೆ ಆಧಾರಿತ ಸೇವೆಯಲ್ಲಿರುವ ನೌಕರರಿಗೆ ನೀಡಲಾಗುವ ವೇತನದಲ್ಲಿ ಏಜೆನ್ಸಿಯವರಿಗೆ ಶೇ. 5 ರಷ್ಟು ಸೇವಾ ಶುಲ್ಕ ಹಾಗೂ ಸರ್ಕಾರಕ್ಕೆ ಶೇ.18 ರಷ್ಟು ಸೇವಾ ತೆರಿಗೆ ಸೇರಿ ಒಟ್ಟು ಶೇ.23 ರಷ್ಟು ಹಣವು ನೌಕರರಿಗೆ ಸೇರದೆ ವ್ಯರ್ಥವಾಗುತ್ತಿದೆ. ಇದೇ ಹಣವನ್ನು ನೌಕರರ ಈಗಿನ ವೇತನಕ್ಕೆ  ಸೇರಿಸಿ ನೀಡಿದಲ್ಲಿ ನೌಕರರ ಜೀವನಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿ ರುವ ನೌಕರರನ್ನು ಸಂಚಿತ ವೇತನದಡಿಯಲ್ಲಿ ನೇಮಕ ಮಾಡಿಕೊಂಡಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿದಂತಾಗುತ್ತದೆ ಹಾಗೂ ನೌಕರರಿಗೆ ಸಾಮಾಜಿಕ ನ್ಯಾಯ ಒದಗಿಸಿದಂ ತಾಗುತ್ತದೆ ಎಂದು ಮನವರಿಕೆ ಮಾಡಿದರು.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಧ್ಯಕ್ಷ ಮಂಜುನಾಥ್ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ಶಿವಾಜಿ ರಾವ್, ತಿಪ್ಪೇಸ್ವಾಮಿ ಅಣಬೇರು, ಪ್ರಕಾಶ್, ವಿನುತಾ, ಸುಮಿತ್ರಾ, ವೀರೇಶ್, ವಿಜ ಯಮ್ಮ, ಪುಷ್ಪ, ಲಿಂಗರಾಜ್ ನಾಯ್ಕ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

error: Content is protected !!