ಜಗಳೂರು, ಫೆ.22- ಗ್ರಾಮೀಣ ಭಾಗದ ಜನರು ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಲಯನ್ಸ್ ಕ್ಲಬ್ ತಾಲ್ಲೂಕು ಅಧ್ಯಕ್ಷ ಹಾಗೂ ಲೀಡ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎನ್.ಟಿ. ಎರಿಸ್ವಾಮಿ ಸಲಹೆ ನೀಡಿದರು.
ಪಟ್ಟಣದ ರಾಘವೇಂದ್ರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್, ರಾಘವೇಂದ್ರ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್, ಲಿಯೋ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಬರದ ನಾಡಿನ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆರೋಗ್ಯ ಸಮಸ್ಯೆಗಳಿದ್ದು ಆರ್ಥಿಕ ಸಂಕಷ್ಟದಿಂದ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ತೆರಳಿ ಆಸ್ಪತ್ರೆ ವೆಚ್ಚ ಭರಿಸಲಾಗದೆ ಚಿಕಿತ್ಸೆ ಕೈಗೆಟಕುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಹೃದಯ, ಕಣ್ಣಿನ ಸಂಬಂಧಿತ ಉಚಿತ ಆರೋಗ್ಯ ಶಿಬಿರದಂತಹ ಸೂಕ್ತ ವೇದಿಕೆಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.
ರಾಘವೇಂದ್ರ ಆಸ್ಪತ್ರೆಯ ವೈದ್ಯ ಡಾ. ಅನಿರುದ್ದ್ ಮಾತನಾಡಿ, ಹೃದಯ ಸಂಬಂಧಿತ ಸಮಸ್ಯೆಗಳನ್ನು ವೈದ್ಯರ ಬಳಿ ಮುಕ್ತವಾಗಿ ಹಂಚಿಕೊಂಡು ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್ ವೈದ್ಯಾಧಿಕಾರಿ ಡಾ.ಗುರುರಾಜ್, ಫಾದರ್ ವಿಲಿಯಂ ಮಿರಾಂದ್, ಕಸಾಪ ಅಧ್ಯಕ್ಷರಾದ ಸುಜಾತ, ಲಯನ್ಸ್ ಕ್ಲಬ್‌ನ ಜೆ.ಕೆ.ಜಗದೀಶ್ ಗೌಡ, ಆರತಿ ಜಗದೀಶ್ ಗೌಡ, ಚಂಪ, ಸವಿತಾ, ಶಾಹಿನಾ ಬೇಗಂ, ವಾಸಿಂ ಮತ್ತಿತರರು ಇದ್ದರು.