ಬಜೆಟ್ ಅಧಿವೇಶನದೊಳಗೆ 2ಎ ಮೀಸಲಾತಿ ನೀಡಿ

ದಾವಣಗೆರೆ, ಫೆ.21- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ಮುಂಬರುವ ಬಜೆಟ್ ಅಧಿವೇಶನದೊಳಗೆ ಪಂಚಮಸಾಲಿಗಳಿಗೆ ಮೀಸಲಾತಿ ನೀಡಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರು ವರೆಗೆ ನಡೆಸಿದ ಬೃಹತ್ ಪಾದಯಾತ್ರೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಭೆಯ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಬಜೆಟ್ ಅಧಿವೇಶನದೊಳಗೆ ಮುಖ್ಯಮಂತ್ರಿ ಗಳು ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಒಂದು ವೇಳೆ ವಿಳಂಬವಾದರೆ ಮತ್ತೊಮ್ಮೆ ಪಂಚಮಸಾಲಿ ಸಮಾಜದ ಶಾಸಕರ ಸಭೆ ಕರೆದು, ಅಲ್ಲಿನ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯತ್ನಾಳ್, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್, ಸಚಿವರಾದ ಸಿ.ಸಿ. ಪಾಟೀಲ್, ಶಂಕರ್ ಪಾಟೀಲ್, ಶಾಸಕರಾದ ಸಿದ್ದು ಸೊಗಡೆ, ಅರವಿಂದ ಬೆಲ್ಲದ್ ಅವರಿಗೆ,  ಎ.ಬಿ.ಪಾಟೀಲ್, ಶಿವಶಂಕರ್ ಅವರುಗಳ ಮುಂದೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದಾರೆ. ಅವರು ಮಾತು ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಶ್ರೀಗಳು ಹೇಳಿದರು.

2ಎ ಮೀಸಲಾತಿ ಸಿಗುವವರೆಗೂ ಯಾವುದೇ ಶಾಖಾ ಮಠ ಸ್ಥಾಪನೆ ಬಗ್ಗೆ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ ಶ್ರೀಗಳು, 2ಎ ಮೀಸಲಾತಿ ದೊರೆತು, ಭಕ್ತರು ಅಪೇಕ್ಷೆ ಪಟ್ಟರೆ ಶಾಖಾ ಮಠಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಪೀಠ ಎಂದರೆ ಅದು ಕೂಡಲ ಸಂಗಮದಲ್ಲಿ 2008ರಲ್ಲಿ ಸ್ಥಾಪನೆಯಾದ  ಪೀಠ ಮಾತ್ರ. ಉಳಿದಂತೆ ಯಾವ ಪಂಚಮಸಾಲಿ ಪೀಠದ ಬಗ್ಗೆಯೂ ನನಗೆ ತಿಳಿದಿಲ್ಲ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಮುಖಂಡರುಗಳಾದ ತೇಜಸ್ವಿ ಪಟೇಲ್, ಅಣಜಿ ಚಂದ್ರಶೇಖರ್, ನಂದಿಹಳ್ಳಿ ಹಾಲಪ್ಪ, ಬಿ.ಜಿ. ಅಜಯ ಕುಮಾರ್, ಸೋಗಿ ಶಾಂತಕುಮಾರ್ ಹಾಗು ಇತರರು ಈ ಸಂದರ್ಭದಲ್ಲಿದ್ದರು.

error: Content is protected !!