ಪ್ರವಾಸಿ ತಾಣವಾಗಿ ಹರಿಹರ ಅಭಿವೃದ್ಧಿ

ಹರಿಹರ ತುಂಗಭದ್ರಾ ನದಿ ತಟದಲ್ಲಿ 108 ಯೋಗ ಮಂಟಪಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹರಿಹರ, ಫೆ.20- ಹರಿಹರ ನಗರವು ಶಕ್ತಿ, ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿದ್ದು, ಶ್ರೀ ಹರಿಹರೇಶ್ವರ ಸ್ವಾಮಿಯ ಗೌರವಕ್ಕೆ ಪಾತ್ರವಾಗುವ ರೀತಿಯಲ್ಲಿ ಇಲ್ಲಿನ ಪ್ರದೇಶವನ್ನು ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ತುಂಗಭದ್ರಾ ನದಿಯ ತಟದಲ್ಲಿ 108 ಯೋಗ ಮಂಟಪಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ನಂತರ ವೇದಿಕೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತುಂಗಭದ್ರಾ ನದಿಯ ತಟದಲ್ಲಿ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಇಲ್ಲಿನ ನಾಗರಿಕತೆ, ಸಂಸ್ಕೃತಿ ಮಹತ್ವ ಹೆಚ್ಚಿಸುವ ನಿಟ್ಟಿನಲ್ಲಿ ತುಂಗಾರತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದು ಶ್ಲ್ಯಾಘನೀಯ ಎಂದರು.

ಪಂಚಭೂತದಲ್ಲಿ ಮುಖ್ಯವಾಗಿರುವುದು ಜಲ. ಅದರ ಸಂರಕ್ಷಣೆ, ಶುದ್ಧೀಕರಣ ಮಹತ್ವದ್ದು. ಪ್ರತಿ ನದಿಯೂ ತನ್ನದೇ ಆದ ಸಂಸ್ಕೃತಿ ಹೊಂದಿದೆ. ಅದನ್ನು ಉಳಿಸುವ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ನಾಗರಿಕತೆ-ಸಂಸ್ಕೃತಿ ಎರಡೂ ಜೊತೆ ಜೊತೆಯಲ್ಲಿ ಬೆಳೆಯಬೇಕು. ಅನೇಕರಿಗೆ ನಾಗರಿಕತೆ ಮತ್ತು ಸಂಸ್ಕೃತಿ ನಡುವೆ ಇರುವ ವ್ಯತ್ಯಾಸಗಳ ಅರಿವಿಲ್ಲ ಎಂದರು.

ಕಾಲ ಬದಲಾದಂತೆ ಚಕ್ಕಡಿ ಬದಲಾಗಿ ಟ್ರ್ಯಾಕ್ಟರ್ ಬಂದಿದೆ. ಬಿಸೇಕಲ್ಲಿನ ಬದಲಾಗಿ ಮಿಕ್ಸಿ ಬಂದಿದೆ. ಹಿಂದಿನ ದಿನಗಳಲ್ಲಿ ಬೀಸುವ ಕಲ್ಲಿನ ಜೊತೆ ಹಾಡು ಹೇಳುತ್ತಾ ತವರು ಮನೆಯವರನ್ನು ನೆನೆ ಯುತ್ತಾ ಸಂಸ್ಕೃತಿ ಉಳಿಸಿಕೊಂಡು ಹೋಗುತ್ತಿದ್ದರು. ಮಾನವೀಯತೆ, ಪರೋಪಕಾರಿ, ಉದಾರತೆ ಗುಣಗಳು ಇಂದಿನ ದಿನಗಳಲ್ಲಿ ಕಡಿಮೆಯಾಗಿವೆ. ಇದನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.

ಪ್ರವಾಸಿ ತಾಣವಾಗಿ ಹರಿಹರ ಅಭಿವೃದ್ಧಿ - Janathavani

ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ದೇವಸ್ಥಾನದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಎಲ್ಲಾ ಘಾಟ್‌ಗಳನ್ನು ಸ್ವಚ್ಚತೆ ಮಾಡಿ ಆರತಿ ಕಾರ್ಯವನ್ನು ಸ್ವಚ್ಛಂದವಾಗಿ ಮಾಡುವಂತೆ ಮಾಡಿದ್ದಾರೆ. ಅದೇ ರೀತಿ ದಕ್ಷಿಣ ಭಾರತದ ತುಂಗಾರತಿ ವೈಭವದ ಸಂಸ್ಕೃತಿ ವೃದ್ದಿಯಾಗಬೇಕು ಎಂದು ಹೇಳಿದರು.

ಹರಿ ಮತ್ತು ಹರ ಎರಡೂ ತನ್ನದೇ ಆದ ಶಕ್ತಿ ಹೊಂದಿದ್ದು, ಎರಡೂ ಶಕ್ತಿಗಳ ಸಂಗಮ ಅದ್ಭುತವಾಗಿವೆ. ಪಂಚಮಸಾಲಿ ಶ್ರೀಗಳ ಮಾರ್ಗದರ್ಶನದಲ್ಲಿ ಇಲ್ಲಿನ ಸ್ಥಳದಲ್ಲಿ 108 ಮಂಟಪದ ನಿರ್ಮಾಣ, ವಾಕಿಂಗ್ ಪಾತ್, ಸೇರಿದಂತೆ, ಈ ನಗರವನ್ನು ಸುಂದರ ಪ್ರವಾಸಿ ತಾಣವಾಗಿ ಮಾಡುವ ಮೂಲಕ ಹಲವಾರು ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಹರಿಹರ ತಾಲ್ಲೂಕಿನ ಅಭಿವೃದ್ಧಿಗೆ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ 40 ಕಿಲೋ ಮೀಟರ್ ರಸ್ತೆ ನಿರ್ಮಾಣ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 22 ಕೋಟಿ ರೂಪಾಯಿ ಅನುದಾನದಲ್ಲಿ 59 ಕಿ.ಮೀ.  ಗ್ರಾಮೀಣ ರಸ್ತೆ ಅಭಿವೃದ್ಧಿ, ಪೊಲೀಸ್ ಪಬ್ಲಿಕ್ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ನಗರ ಅಭಿವೃದ್ಧಿಗೆ 40 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. 

 ಈ ಭಾಗದ ಮಾಜಿ ಶಾಸಕ ಹರೀಶ್ ಮತ್ತು ಶಾಸಕ ಎಸ್.ರಾಮಪ್ಪ ಅವರ ಬಹುದಿನಗಳ ಬೇಡಿಕೆಯಾದ ಭೈರನಪಾದ ಯೋಜನೆಗೆ  ಮುಂದಿನ ದಿನಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಇಲ್ಲಿನ ಕೈಗಾರಿಕಾ ವೈಭವವನ್ನು ಮರುಕಳಿಸುವ ನಿಟ್ಟಿನಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿಯವರಿಗೆ ಕೈಗಾರಿಕಾ ಕಾರಿಡಾರ್ ಮಾಡಲು ತಿಳಿಸುವುದಾಗಿಯೂ ದಾವಣಗೆರೆ, ಹರಿಹರ, ರಾಣೇಬೆನ್ನೂರು ಕ್ಷೇತ್ರದ ಅಭಿವೃದ್ಧಿ ಜೊತೆಗೆ ಒಟ್ಟಾರೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ತುಂಗಾ ತಟದಲ್ಲಿ ತುಂಗಾರತಿ ಮಾಡುವುದು ಹಾಗೂ ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಯುವಕರಿಗೆ ಉದ್ಯೋಗ ಸಿಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಸರ್ಕಾರದಿಂದ 30 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯದ ಹೃದಯ ಭಾಗದಲ್ಲಿರುವ ಈ ನಗರವನ್ನು ಸುಂದರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಿ ಕಾಶಿ ಮಾದರಿಯಲ್ಲಿ 300 ಕೈಲಾಸ ಕಾರಿಡಾರ್ ಮಾಡುವ ಮೂಲಕ ಇಲ್ಲಿನ ನದಿಯಲ್ಲಿ ಪೂಜೆಗೆ ಮತ್ತು ಅಧ್ಯಾತ್ಮಿಕ ಕಾರ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ ಎಂದರು.

ದೇಶದಾದ್ಯಂತ ಹಿಂದುತ್ವ, ಸನಾತನ ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಾಗಿದೆ. ಜೊತೆಗೆ ಯುವಕರಿಗೆ ಉದ್ಯೋಗ ಮತ್ತು ಈ ಭಾಗದ ರೈತರ ಬೇಡಿಕೆಯಾದ ಭೈರನಪಾದ ಯೋಜನೆಗೆ ಆದ್ಯತೆ ನೀಡಬೇಕು ಮತ್ತು ಶ್ರೀ ಹರಿಹರೇಶ್ವರ ದೇವಾಲಯಕ್ಕೆ ಶ್ರೀ ಶಂಕರಾಚಾರ್ಯರು ಆಗಮಿಸಿದ್ದರಿಂದ ಇಲ್ಲಿನ ದೇವಾಲಯದ ಬಳಿ ಶ್ರೀ ಶಂಕರಾಚಾರ್ಯರ ಮೂರ್ತಿ ಸ್ಥಾಪಿಸುವುದು  ಸೇರಿದಂತೆ, ಇಲ್ಲಿನ ತುಂಗಭದ್ರಾ ನದಿ ದಂಡೆಯನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡುವ ಕಾರ್ಯವನ್ನು ನಾವು  ಮುಂದಿನ ದಿನಗಳಲ್ಲಿ ಮಾಡುವುದಾಗಿ ಹೇಳಿದರು.     

ಈ ಸಂದರ್ಭದಲ್ಲಿ ಸಚಿವರಾದ ಮುರುಗೇಶ್‌ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ರಾಮಪ್ಪ, ರಾಣೇಬೆನ್ನೂರು  ಶಾಸಕ ಅರುಣ್ ಕುಮಾರ್ ಪೂಜಾರ್,  ನಗರಸಭೆ ಅಧ್ಯಕ್ಷೆ ರತ್ನ ಡಿ.ಉಜ್ಜೇಶ್, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಎಸ್ಪಿ ಸಿ.ಬಿ. ರಿಷ್ಯಂತ್, ನೀರಾವರಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಗುಂಗೆ,   ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ, ನಗರಸಭೆ ಎಇಇ ಬಿರಾದಾರ ಇತರರು ಉಪಸ್ಥಿತರಿದ್ದರು.

ವೇದಿಕೆ ಸಮಾರಂಭದಲ್ಲಿ ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ  ಜಿ.ಎಂ. ಸಿದ್ದೇಶ್ವರ್ ಮತ್ತು ಶಾಸಕ ಎಸ್ ರಾಮಪ್ಪ ನವರಿಗೆ ಮಾತನಾಡಲು ಅವಕಾಶ ಸಿಗದೆ, ಕೇವಲ ಮನವಿ ನೀಡುವುದಕ್ಕೆ ಮಾತ್ರ ವೇದಿಕೆ ಸೀಮಿತವಾಯಿತು.


– ಎಂ.ಚಿದಾನಂದ ಕಂಚಿಕೇರಿ, [email protected]

error: Content is protected !!