ಸಾರ್ವಜನಿಕ ಸ್ಮರಣ ಶಕ್ತಿ ತುಂಬಾ ದುರ್ಬಲ

ದಾವಣಗೆರೆ, ಫೆ. 18- ಸಾರ್ವಜನಿಕ ಸ್ಮರಣ ಶಕ್ತಿ ತುಂಬಾ ದುರ್ಬಲ. ಯಾರು ಮನೆ, ಸಮಾಜ, ದೇಶಕ್ಕಾಗಿ ದುಡಿದಿರುತ್ತಾರೋ ಅಂತಹವರನ್ನು ಬಹುಬೇಗ ಮರೆಯುವಂತಹ ಸ್ವಭಾವ ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಬಸವ ಬಳಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಲಕ್ಷ್ಮಿ ವೃತ್ತದಲ್ಲಿನ ಹರ್ಡೇಕರ್ ಮಂಜಪ್ಪ ವೃತ್ತದಲ್ಲಿ ನವೀಕರಣ ಪುತ್ಥಳಿಯ ಉದ್ಘಾಟನೆ ಹಾಗೂ ಹರ್ಡೇಕರ್ ಮಂಜಪ್ಪನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಒಂದು ವೇಳೆ ಅಂತವರ ಸ್ಮರಣೆ ಮಾಡಿಕೊಳ್ಳಲು ಮೂರ್ತಿ ಮಾಡಿ ಕೈಬಿಟ್ಟರೆ ಸಾಕು ಎಂದು ಭಾವಿಸುತ್ತಾರೆ. ವ್ಯಕ್ತಿಗಳ ಆದರ್ಶ ಮೂರ್ತಿಗಳಲ್ಲಿ ಇಲ್ಲ. ಆ ವ್ಯಕ್ತಿಗಳ ಬದುಕು ಹೇಗಿತ್ತು ಎಂದು ಗಮನಿಸಬೇಕಾಗುತ್ತದೆ ಎಂದರು.

ಹುಟ್ಟಿನಿಂದ ಯಾವ ವ್ಯಕ್ತಿ ಕೂಡ ದೊಡ್ಡವನಾಗಲು ಸಾಧ್ಯವಿಲ್ಲ. ಸತತ ಪರಿಶ್ರಮ, ಸಾಧನೆಯಿಂದ ಮಾತ್ರ ಶ್ರೇಷ್ಠ ವ್ಯಕ್ತಿ ಎನಿಸಿಕೊಳ್ಳಲು ಸಾಧ್ಯ. ಹರ್ಡೇಕರ್ ಮಂಜಪ್ಪ ಸಹ ತಮ್ಮ ಸಾಧನೆ ಮೂಲಕ ವಿಭೂತಿ ಪುರುಷರಾದರು ಎಂದು ಹೇಳಿದರು.

ಹರ್ಡೇಕರ್ ಅವರು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಅಪರೂಪದ ಕಾರ್ಯವನ್ನು ಮಾಡಿ ಸ್ಮರಣೀಯರಾದರು. ಮದುವೆಯಾಗದೇ ತ್ಯಾಗಜೀವಿಯಾಗಿ ಸಮಾಜವನ್ನು ಬೆಳೆಸಿದರು. ಬಸವ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದ ಶ್ರೇಷ್ಠ ಸಂತ ಎಂದು ಮಂಜಪ್ಪ ಅವರ ಸೇವಾ ಕಾರ್ಯವನ್ನು ಸ್ಮರಿಸಿದರು.

ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ರಾಷ್ಟ್ರಧರ್ಮ ಮತ್ತು ಬಸವ ಧರ್ಮ ಹರ್ಡೇಕರ್ ಮಂಜಪ್ಪನವರ ಎರಡು ಕಣ್ಣುಗಳಿದ್ದಂತೆ. ಮಹಾತ್ಮ ಗಾಂಧೀಜಿಯವರ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಹರ್ಡೇಕರ್ ವಿಭೂತಿ ಪುರುಷರಾಗಿದ್ದರು ಎಂದು ಹೇಳಿದರು.

1911 ಜೂನ್ 26 ರಂದು ಭಜನಾ ಸಂಘವನ್ನು ಸ್ಥಾಪಿಸುವ ಮೂಲಕ ಅಂದು ಪ್ರಾರಂಭವಾದ ಪ್ರವಚನ ಪ್ರತಿ ಶ್ರಾವಣ ಮಾಸದಲ್ಲಿ  ನಿತ್ಯ ನಡೆಯುತ್ತಲೇ ಬಂದಿದೆ. ಬಾಲಗಂಗಾಧರ ತಿಲಕ್ ಆರಂಭಿಸಿದ ಗಣೇಶೋತ್ಸವದಂತೆ ಹರ್ಡೇಕರ್ ಬಸವ ಜಯಂತಿಯನ್ನು ಪ್ರಾರಂಭಿಸುವ ಮೂಲಕ ಇತಿಹಾಸ ಸೃಷ್ಠಿಸುವ ಕಾರ್ಯವನ್ನು ಮಾಡಿದ್ದಾರೆಂದರು.

ಬಸವ ಬಳಗದ ಶತಾಯುಷಿ ವಿ. ಸಿದ್ಧರಾಮ ಶರಣರು, ಎ.ಹೆಚ್. ಹುಚ್ಚಪ್ಪ ಮಾಸ್ತರ್, ಪಾಲಿಕೆ ಮಾಜಿ ನಾಮನಿರ್ದೇಶನ ಸದಸ್ಯೆ ಹೆಚ್.ಸಿ. ಜಯಮ್ಮ, ಹಾಲಿ ಸದಸ್ಯ ಸೋಗಿ ಶಾಂತಕುಮಾರ್ ಮಾತನಾಡಿದರು.

ಇದೇ ವೇಳೆ ಬಸವ ಕಲಾ ಲೋಕದ ಶಶಿಧರ ಬಸಾಪುರ ಅವರನ್ನು ಸನ್ಮಾನಿಸಲಾಯಿತು. ಪಾಲಿಕೆ ಮಾಜಿ ನಾಮನಿರ್ದೇಶನ ಸದಸ್ಯ ಶಿವನಗೌಡ ಪಾಟೀಲ್, ಹಾಲಿ ಸದಸ್ಯ ಆರ್.ಎಲ್. ಶಿವಪ್ರಕಾಶ್, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ಮಹಾಂತೇಶ್ ಅಗಡಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!