ಮಲೇಬೆನ್ನೂರು, ಫೆ.18- ಹಿಜಾಬ್ ತೆರವು ಮಾಡಲು ಒಪ್ಪದ 7 ವಿದ್ಯಾರ್ಥಿನಿಯರಿಗೆ ತರಗತಿಗೆ ಹೋಗಲು ಅನುಮತಿ ನೀಡದ ಕಾರಣ ಆ ವಿದ್ಯಾರ್ಥಿನಿ ಯರು ಮಧ್ಯಾಹ್ನ 1 ಗಂಟೆಯ ವರೆಗೂ ಕಾಲೇಜು ಬಳಿಯೇ ನಿಂತಿದ್ದ ಘಟನೆ ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಪ್ರಥಮ ಪಿಯುಸಿ ತರಗತಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಆಗಮಿಸಿದ್ದರು. ಕೆಲವರು ಹಿಜಾಬ್ ತೆರವು ಮಾಡಿ ತರಗ ತಿಗೆ ತೆರಳಿದರೆ 7 ವಿದ್ಯಾರ್ಥಿನಿಯರು ಮಾತ್ರ ನಾವು ಹಿಜಾಬ್ ತೆಗೆಯುವುದಿಲ್ಲ ಎಂದು ಹಠ ಮಾಡಿದರು.
ಇದೇ ವೇಳೆಗೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಅವರು ವಿದ್ಯಾರ್ಥಿನಿಯರಿಗೆ ಸಾಕಷ್ಟು ತಿಳಿ ಹೇಳಿದರು. ಅಲ್ಲದೇ ಕಾಲೇಜಿನ ಪ್ರಾಚಾರ್ಯ ರಂಗಪ್ಪ, ಹಿರಿಯ ಉಪನ್ಯಾಸಕ ತಿಪ್ಪೇಸ್ವಾಮಿ ಮತ್ತು ಪಿಎಸ್‌ಐ ರವಿಕುಮಾರ್ ಕೂಡಾ ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರೂ ಒಪ್ಪದಿದ್ದಾಗ ತರಗತಿಗೆ ಪ್ರವೇಶ ನಿರಾಕರಿಸಿದರು.
ಆಗ ಆ ವಿದ್ಯಾರ್ಥಿನಿಯರು ಮಧ್ಯಾಹ್ನ 1 ಗಂಟೆವರೆಗೂ ಮನೆಗೆ ಹೋಗದೇ ಕಾಲೇಜು ಬಳಿಯೇ ನಿಂತಿದ್ದರು. ನಂತರ ಪೋಷಕರು ಬಂದು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾಯೋಗಿಕ ಪರೀಕ್ಷೆ ಇರುವ ಕಾರಣ ಕಾಲೇಜಿಗೆ ಬಂದಿರಲಿಲ್ಲ. ಕಾಲೇಜಿನ ಸಮಯ ಮುಗಿಯುವವರೆಗೂ ಪೊಲೀಸರು ಭದ್ರತೆ ಒದಗಿಸಿದ್ದರು.