ದಾವಣಗೆರೆ, ಫೆ.17- ನಗರದಲ್ಲಿ ಜಲಸಿರಿ ಯೋಜನೆಯಡಿ 24×7 ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದ್ದು, ನೀರಿನ ದರ ನಿಗದಿಗೆ ಸಮಿತಿ ರಚಿಸಿ, ವರದಿ ನಂತರ ತೀರ್ಮಾನಿಸಲಾಗುವುದು ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಲಸಿರಿ ಯೋಜನೆ ಕಾರ್ಯರೂಪಕ್ಕೆ ಬಂದರೆ ನಗರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಕೆಲಸಗಳನ್ನು ಬಿಟ್ಟು ನೀರಿಗಾಗಿ ಕಾಯುವುದು ತಪ್ಪುತ್ತದೆ. ದುಡಿಮೆ ಹೆಚ್ಚಾಗುತ್ತದೆ. ಶುದ್ಧ ನೀರನ್ನು ಪೂರೈಸುವುದರಿಂದ ಬೋರ್ ನೀರು ಬಳಕೆ ಕಡಿಮೆಯಾಗಿ, ಆರೋಗ್ಯ ಹೆಚ್ಚಾಗುತ್ತದೆ. ನೀರಿನ ಅಪವ್ಯಯ ತಪ್ಪುತ್ತದೆ ಎಂದರು.
ಇದಕ್ಕೂ ಮುನ್ನ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿ ಎಸ್.ಸುಬ್ರಮಣ್ಯ ಅವರು, ವಿಪಕ್ಷ ನಾಯಕರು ಹಾಗೂ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಆರಂಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಎ.ನಾಗರಾಜ್, ಜಲಸಿರಿ ಯೋಜನೆಗೆ ಆಗಸ್ಟ್ 1, 2017ರಲ್ಲಿ ವರ್ಕ್ ಆರ್ಡರ್ ನೀಡಲಾಗಿತ್ತು. 2020ಕ್ಕೆ ಕಾಮಗಾರಿ ಮುಗಿಸಬೇಕಾಗಿತ್ತು. ಕಾಮಗಾರಿ ಅವಧಿ ವಿಸ್ತರಿಸಿದ್ದರೂ ಪೂರ್ಣಗೊಂಡಿಲ್ಲ. ಹೆಚ್ಚು ಮನೆಗಳಿಲ್ಲದ ಜೆ.ಹೆಚ್. ಪಟೇಲ್ ಬಡಾವಣೆ, ಬನಶಂಕರಿ ಬಡಾವಣೆ, ಕೆಹೆಚ್‌ಬಿ ಮುಂತಾದ ಕಡೆ ಮನೆಗಳಿಗೆ ನಲ್ಲಿಗಳನ್ನು ಅಳವಡಿಸಲಾಗಿದೆ. ಹೆಚ್ಚು ಜನರಿರುವ ವಿನೋಬನಗರದಲ್ಲಿ ಅರ್ಧ ಕೆಲಸ ಮಾತ್ರವಾಗಿದೆ ಎಂದು ಆರೋಪಿಸಿದರು.
ಜಲಸಿರಿ `ಕ್ರೆಡಿಟ್’ ಗಾಗಿ ಜಟಾಪಟಿ
24×7 ನೀರು ಪೂರೈಸುವ ಜಲಸಿರಿ ಕ್ರೆಡಿಟ್ಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಸಭೆಯಲ್ಲಿ ವಾಗ್ಯುದ್ಧ ನಡೆಯಿತು.
ವಿಪಕ್ಷ ನಾಯಕ ಎ.ನಾಗರಾಜ್, 2017ರ ಕಾಂಗ್ರೆಸ್ ಅವಧಿಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪರಿಶ್ರಮದಿಂದಾಗಿ ಜಲಸಿರಿ ಯೋಜನೆ ಆರಂಭವಾಗಿದ್ದಾಗಿ ಹೇಳಿದರು.
ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿರಿಸುವಲ್ಲಿ, ನೀರು ಪೂರೈಕೆಗೆ ಬೇಕಾದ ಸ್ಟೋರೇಜ್ ಪಾಯಿಂಟ್ಗಳನ್ನು ತುಂಬಿಸಲು ಬ್ಯಾರೇಜ್ ನಿರ್ಮಾಣಕ್ಕೆ ಕ್ಯಾಬಿನೆಟ್ನಲ್ಲಿ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಎಸ್ಸೆಸ್ಸೆಂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಬಿಜೆಪಿ ಸದಸ್ಯ ಪ್ರಸನ್ನಕುಮಾರ್, ಜಲಸಿರಿ ಯೋಜನೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಾಗಿತ್ತು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್ ಅವರು ಯೋಜನೆ ಕಾರ್ಯರೂಪಕ್ಕಿದ್ದ ಸಮಸ್ಯೆಗಳನ್ನು ಪರಿಹರಿಸಿ, ಸಾಫಲ್ಯಕ್ಕೆ ಶ್ರಮಿಸಿದ್ದಾರೆ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಎ.ನಾಗರಾಜ್, ಜಲಸಿರಿ ಡಿಪಿಆರ್ನಲ್ಲಿ ಬ್ಯಾರೇಜ್ ನಿರ್ಮಾಣದ ಪ್ರಸ್ತಾಪವೇ ಇರಲಿಲ್ಲ. ಎಸ್ಸೆಸ್ಸೆಂ ಅವರ ದೂರದೃಷ್ಟಿ ಫಲವಾಗಿ ಬ್ಯಾರೇಜ್ ನಿರ್ಮಾಣಕ್ಕೆ ಚರ್ಚಿಸಿ, ಅನುದಾನ ತರಿಸಿದ್ದಾಗಿ ಹೇಳಿದರು.
ಕಳೆದ ಮೂರು ವರ್ಷಗಳಿಂದ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಸದರು, ಶಾಸಕರು ಶ್ರಮಿಸುತ್ತಿದ್ದಾರೆ. ಕೇವಲ ಒಬ್ಬರಿಂದಲೇ ಯೋಜನೆಯಾಗಿಲ್ಲ ಎಂದು ಪ್ರಸನ್ನಕುಮಾರ್ ಹೇಳಿದರು.
ಹಿರಿಯ ಸದಸ್ಯ ಚಮನ್ ಸಾಬ್ ಮಧ್ಯ ಪ್ರವೇಶಿಸಿ, ಜಲಸಿರಿ ಯೋಜನೆ ಅನುದಾನ 110 ಕೋಟಿ ರೂ.ಗಳಿಂದ 660 ಕೋಟಿ ರೂ.ಆಗಲು ಎಸ್ಸೆಸ್, ಎಸ್ಸೆಸ್ಸೆಂ ಅವರೇ ಕಾರಣ ಎಂದರು. ದನಿಗೂಡಿಸಿದ ನಾಗರಾಜ್ ಗುಂಡಿ ತೋಡಿಸಿ, ಪೈಪ್ ಹಾಕುವ ಕೆಲಸ ಯಾರಾದರೂ ಮಾಡಿಸುತ್ತಾರೆ. ಆದರೆ ಅನುದಾನ ತರಲು ಇಚ್ಛಾಶಕ್ತಿ ಬೇಕು ಎಂದು ಕುಟುಕಿದರು.
ನಿಮ್ಮನ್ನು (ಬಿಜೆಪಿ)ಆಯ್ಕೆ ಮಾಡಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದಾಗ, ಉತ್ತಮ ಕೆಲಸ ಮಾಡಿದ್ದಕ್ಕೇ ಜನ ಬಿಜೆಪಿ ಬೆಂಬಲಿಸಿದ್ದಾರೆ ಎಂದು ಮೇಯರ್ ವೀರೇಶ್ ಹೇಳಿದರೆ, ಮುಂದಿನ ಚುನಾವಣೆ ನೋಡೋಣ ಜನರು ಯಾರನ್ನು ಬೆಂಬಲಿಸುತ್ತಾರೆಂದು ಎನ್ನುವ ಮೂಲಕ ಚಮನ್ ಸಾಬ್ `ಕ್ರೆಡಿಟ್’ ಚರ್ಚೆಗೆ ತೆರೆ ಎಳೆದರು.
ಒಬ್ಬ ಬ್ರೋಕರ್ ಸಹ ಕಚೇರಿಗೆ ಕಾಲಿಟ್ಟಿಲ್ಲ: ವೀರೇಶ್
ನಾನು ಮೇಯರ್ ಆದಾಗಿನಿಂದ ಒಬ್ಬ ಬ್ರೋಕರ್ ಸಹ ನನ್ನ ಕಚೇರಿಗೆ ಕಾಲಿಟ್ಟಿಲ್ಲ ಎಂದು ಎಸ್.ಟಿ. ವೀರೇಶ್ ಹೇಳಿದರು. ಕಾಲಿಟ್ಟಿದ್ದಾರೆ. ಆದರೆ ಅವರು ಬ್ರೋಕರ್ ಎಂದು ನಿಮಗೆ ತಿಳಿದಿಲ್ಲ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ನಗುತ್ತಲೇ ಟಾಂಗ್ ಕೊಟ್ಟ ಘಟನೆ ಸಭೆಯಲ್ಲಿ ನಡೆಯಿತು. ಅಧಿಕಾರಿಗಳು ಕಡತ ತಂದಾಗ ಮಾತ್ರ ನಾನು ಸಹಿ ಮಾಡಿದ್ದೇನೆ ಎಂದು ವೀರೇಶ್ ಹೇಳಿದಾಗ, ಡೋರ್ ನಂಬರ್ ವಿಚಾರದಲ್ಲಿ ಬ್ರೋಕರ್ಗಳಿಗೆ ಹಣ ನೀಡಿದರೆ ಮಾತ್ರ ಕೆಲಸ ಸರಾಗವಾಗುತ್ತದೆ. ಅಧಿಕಾರಿಗಳಿಂದಲ್ಲ ಎಂದು ಚಮನ್ ಸಾಬ್ ಕಾಲೆಳೆದರು.
ಯೋಜನೆ ಮೈಸೂರಿನಲ್ಲಿ ವಿಫಲವಾಗಿ, ಅಲ್ಲಿನ ಶಾಸಕರು ಗಲಾಟೆ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಸಫಲವಾಗಿದೆ. ಅಲ್ಲಿ ತೆಗೆದುಕೊಂಡ ಕ್ರಮಗಳನ್ನು ಚರ್ಚಿಸಿ, ನಿರ್ಣಯ ತೆಗೆದುಕೊಳ್ಳುವಂತೆ ಹೇಳಿದರು.
ಹಿರಿಯ ಸದಸ್ಯ ಚಮನ್ ಸಾಬ್, ರಸ್ತೆ ಅಗೆದು ಸರಿಯಾಗಿ ಮುಚ್ಚಿಲ್ಲ ಎಂದರೆ, ಉಮಾ ಪ್ರಕಾಶ್, ಪೈಪ್ ಅಳವಡಿಕೆ ಸರಿಯಾಗಿಲ್ಲ. ಬೇಗ ಸರಿಪಡಿಸಬೇಕು ಎಂದರು. ಮೇಯರ್ ವೀರೇಶ್ ಮಾತನಾಡಿ, ಈ ಸಮಸ್ಯೆಗಳ ಬಗ್ಗೆ ಒತ್ತು ನೀಡಿ ಸರಿಪಡಿಸುವಂತೆ ಸೂಚಿಸಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, 2018ರಲ್ಲಿ ಯೋಜನೆಗೆ ವರ್ಕ್ ಆರ್ಡರ್ ನೀಡಲಾಯಿತು. 31.1.2022ಕ್ಕೆ ಮುಕ್ತಾಯವಾಗಬೇಕಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದರಿಂದ ತಡವಾಯಿತು. ಶೇ.30ರಷ್ಟು ಕಾರ್ಯ ಬಾಕಿ ಇದ್ದು, 2023ರ ಜನವರಿ ವರೆಗೆ ಕೆಲಸ ಮುಗಿಸಲು ಅವಧಿ ವಿಸ್ತರಿಸಲಾಗಿದೆ. ಅಷ್ಟರೊಳಗೆ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಎ.ನಾಗರಾಜ್, ಯೋಜನೆಯಲ್ಲಿ ಅಕ್ರಮ ನಲ್ಲಿಗಳನ್ನು ಸಕ್ರಮಗೊಳಿಸಲು ಅವಕಾಶವಿದೆಯೇ? ಎಂದು ಪ್ರಶ್ನಿಸಿದಾಗ, ಉತ್ತರಿಸಿದ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿ ಎಸ್.ಸುಬ್ರಹ್ಮಣ್ಯ, ಜಲಸಿರಿ ಯೋಜನೆಯಲ್ಲಿ ಸಿವಿಲ್ ಕೆಲಸ ಒಂದೆಡೆಯಾದರೆ, ಯೋಜನೆ ಸುಧಾರಣೆಗಾಗಿ ಏಳು ಆದೇಶಗಳನ್ನು ನೀಡಿದೆ. ಅದರಲ್ಲಿ ಅಕ್ರಮ ನಲ್ಲಿಗಳನ್ನು ಸಕ್ರಮ ಮಾಡುವ ಕ್ರಮವೂ ಒಂದಾಗಿದೆ ಎಂದು ಹೇಳಿದರು.
ನಲ್ಲಿಗಳನ್ನು ಸಕ್ರಮಗೊಳಿಸಲು ಪಾಲಿಕೆ ವ್ಯಾಪ್ತಿಯ ಎಲ್ಲಾ ನಲ್ಲಿಗಳ ವಿವರಗಳನ್ನು ದಾಖಲಿಸಿ, ಕಂಪ್ಯೂಟರೀಕರಣಗಳಿಸಬೇಕಿದೆ ಎಂದರು.
ಪ್ರಸ್ತುತ 97 ಸಾವಿರ ನಲ್ಲಿ ಸಂಪರ್ಕವಿದ್ದು, 47 ಸಾವಿರ ಸಂಪರ್ಕಗಳಿಂದ ಮಾತ್ರ 16 ಕೋಟಿ ರೂ. ತೆರಿಗೆ ವಸೂಲಿ ಮಾಡಲಾಗಿದೆ. 2011ರಿಂದ ಇಲ್ಲಿಯವರೆಗೆ ಶೇ.10ರಷ್ಟು ಸಂಪರ್ಕಗಳು ಹೆಚ್ಚಾಗಿವೆ ಎಂದು ಅಂದಾಜಿಸಿದರೂ, 1.10 ಲಕ್ಷ ಮನೆಗಳಿಗೆ ಅಧಿಕೃತ ನಲ್ಲಿ ಸಂಪರ್ಕ ಕಲ್ಪಿಸಬಹುದು. ಇದರಿಂದ ತೆರಿಗೆ ವಸೂಲು ಮಾಡಿದರೆ ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚವನ್ನು ಸುಲಭವಾಗಿ ಭರಿಸಿ, ನೀರು ಸರಬರಾಜು ಮಾಡಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ನಲ್ಲಿ ಸಂಪರ್ಕವನ್ನು ಸಕ್ರಮಗೊಳಿಸುವ ಸಂಬಂಧ ನಾಗರಿಕರಿಗೆ ಹೊರೆಯಾಗದಂತೆ, ಕನಿಷ್ಠ ದರ ನಿಗದಿಪಡಿಸುವ ಅಧಿಕಾರವನ್ನು ಸರ್ಕಾರವು ಪಾಲಿಕೆಗೆ ನೀಡಿದೆ. ಗೃಹ, ಗೃಹೇತರ, ವಾಣಿಜ್ಯ ಹಾಗೂ ಕೈಗಾರಿಕೆಗೆ ಸಂಬಂಧಿಸಿದಂತೆ ನೀರಿನ ಬಳಕೆಗೆ ಪ್ರತ್ಯೇಕ ದರ ವಿಧಿಸಲಾಗುತ್ತದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ದರ ಪರಿಷ್ಕರಿಸಿ,ಅನುಷ್ಠಾನಗೊಳಿಸಬೇಕಿದೆ ಎಂದರು.
ದರ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಬೇಕು. ತಂಡವು ಬೇರೆ ನಗರಗಳಿಗೆ ತೆರಳಿ ಅಧ್ಯಯನ ಮಾಡಲಿ. ನಂತರ ಚರ್ಚಿಸಿ, ದರ ನಿಗದಿ ಪಡಿಸುವಂತೆ ಸದಸ್ಯ ಪ್ರಸನ್ನಕುಮಾರ್ ಸಲಹೆ ನೀಡಿದರು.
ಜನರು ಹೆಚ್ಚಾಗಿರುವ ಸಾರ್ವಜನಿಕ ಸ್ಥಳದಲ್ಲಿನ ನಲ್ಲಿಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕಿದೆ. ಅದರ ಹಣವನ್ನು ಸ್ಥಳೀಯ ಸಂಸ್ಥೆಗಳೇ ಭರಿಸಬೇಕು. ತೀರಾ ಹಿಂದುಳಿದ ಅಥವಾ ಸ್ಲಂ ಪ್ರದೇಶಗಳನ್ನು ಆಯ್ಕೆ ಮಾಡಿ ಎಸ್ಸಿ-ಎಸ್ಟಿಗಾಗಿ ಮೀಸಲಿಡುವ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು ಎಂದರು.
ಕೆಲ ತಿಂಗಳು ಟ್ರಯಲ್ ಅಂಡ್ ರನ್ ನಡೆಸುವಾಗ ಸಮಿತಿ ರಚಿಸಿ, ದಾಖಲೆ ಸಂಗ್ರಹಿಸಿದರೆ ಯೋಜನೆ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ಸುಬ್ರಮಣ್ಯ ಸಲಹೆ ನೀಡಿದರು. ಅಂತಿಮವಾಗಿ ಸಮಿತಿ ರಚನೆಗೆ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಆಯುಕ್ತ ವಿಶ್ವನಾಥ ಮುದಜ್ಜಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಲ್.ಡಿ. ಗೋಣೆಪ್ಪ, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಯಪ್ಪ, ಉಮಾ ಪ್ರಕಾಶ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.