ದಾವಣಗೆರೆ, ಫೆ.17- ನಗರದ ಅಂಬೇಡ್ಕರ್ ವೃತ್ತದಲ್ಲಿ ಇದೇ ದಿನಾಂಕ 13 ರಂದು ಡಾ. ಬಿ.ಆರ್. ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮಾಡುವುದಲ್ಲದೇ, ದಲಿತ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ. ಬಿ.ಆರ್. ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಹೆಚ್. ಮಲ್ಲೇಶ್ ನೇರವಾಗಿ ಆರೋಪಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಬಿಜೆಪಿ ಕಾರ್ಯಕ್ರಮ ಎನ್ನುವಂತೆ ಬಿಂಬಿಸಿದ್ದು, ನಿಗದಿಪಡಿಸಿದ ಸಮಯಕ್ಕಿಂತ ಮುಂಚೆಯೇ ಕಾರ್ಯಕ್ರಮವನ್ನು ಮುಗಿಸಿದ್ದು, ಯಾವುದೇ ದಲಿತ ಸಂಘಟನೆಗಳನ್ನು ಆಹ್ವಾನಿಸದೇ ಸಂಸದರು, ಶಾಸಕರು ದಲಿತ ಸಮುದಾಯವನ್ನು ಅವಮಾನಗೊಳಿಸಿದ್ದಾರೆಂದು ಕಿಡಿಕಾರಿದರು.
ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಜಿಲ್ಲಾ ಕೇಂದ್ರದಲ್ಲಿ ಅದರಲ್ಲೂ ನಗರದ ಮಧ್ಯೆ ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಆಗ್ರಹಿಸಿ, ಸುಮಾರು 15-20 ವರ್ಷಗಳಿಂದ ನಡೆಸಿರುವ ಹೋರಾಟವನ್ನು ನಿರ್ಲಕ್ಷಿಸುವ ಮೂಲಕ ಜಿಲ್ಲಾಡಳಿತ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಇಂತಹ ಅವಮಾನಗಳನ್ನು ಕೊನೆಗಾಣಿಸಲು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒತ್ತಾಯಿಸಿ, ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಶೋಷಿತ ಸಮುದಾಯವನ್ನು ನಿರ್ಲಕ್ಷಿಸಿರುವುದರ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಪ್ರಗತಿಪರ ದಲಿತ ಚಿಂತಕರು, ದಲಿತ ಚಳವಳಿಗಾರರು, ಅಂಬೇಡ್ಕರ್ ಅನುಯಾಯಿಗಳ ಜೊತೆಗೂಡಿ ಜಿಲ್ಲೆಯಲ್ಲಿ ಜನಾಂದೋಲನ ರೂಪಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಎಸ್.ಜಿ. ವೆಂಕಟೇಶ್ ಬಾಬು, ಹೆಚ್.ಸಿ. ಮಲ್ಲಪ್ಪ, ಡಿ. ತಿಪ್ಪಣ್ಣ, ಸಿ. ಬಸವರಾಜ್, ಡಿ. ಸಮಾದೆಪ್ಪ ಶಾಮನೂರು, ವಕೀಲರಾದ ಅನಿಸ್ ಪಾಷ ಮತ್ತಿತರರು ಉಪಸ್ಥಿತರಿದ್ದರು.