ಜಿಲ್ಲೆಯಲ್ಲಿ ಕಾಲೇಜುಗಳು ಪುನರಾರಂಭ

ಹಿಜಾಬ್ ತೆಗೆಯಲು ಒಪ್ಪದೆ ವಾಪಸ್ಸಾದ ವಿದ್ಯಾರ್ಥಿನಿಯರು

ದಾವಣಗೆರೆ, ಫೆ.16- ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದಾಗಿ ರಜೆ ಘೋಷಿಸಲಾಗಿದ್ದ ಪಿಯುಸಿ ಹಾಗೂ ಪ್ರಥಮ ದರ್ಜೆ ಕಾಲೇಜುಗಳು ಇಂದು ಪುನರಾರಂಭಗೊಂಡಿವೆ.

ಧಾರ್ಮಿಕ ಸಂಕೇತದ ಬಟ್ಟೆಗಳನ್ನು ವಿದ್ಯಾರ್ಥಿಗಳು ಧರಿಸುವಂತಿಲ್ಲ ಎಂಬ ಹೈ ಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದರು. 

ಹಿಜಾಬ್‌ ಧರಿಸುವಂತಿಲ್ಲ ಎಂಬ ಅಧ್ಯಾಪಕರು, ಅಧಿಕಾರಿಗಳ ಮನವಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜು ಪ್ರವೇಶಿಸಿದರೆ, ಮತ್ತೆ ಕೆಲವರು ಹಿಜಾಬ್ ತೆಗೆಯಲು ನಿರಾಕರಿಸಿ, ನಮಗೆ ಹಿಜಾಬ್ ಮುಖ್ಯ ಎಂದು ಕಾಲೇಜಿನಿಂದ ಹೊರ ನಡೆದರು.

 

ಜಿಲ್ಲೆಯಲ್ಲಿ ಕಾಲೇಜುಗಳು ಪುನರಾರಂಭ - Janathavani

ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪಿಯು ಕಾಲೇಜು,  ಮೋತಿ ವೀರಪ್ಪ ಕಾಲೇಜು ಸಹಿತ ವಿವಿಧ ಕಾಲೇಜುಗಳಲ್ಲಿ ಸಾವಿರಾರು  ವಿದ್ಯಾರ್ಥಿನಿಯರು ತರಗತಿಗೆ ಹಾಜರಾದರೆ, ಹಿಜಾಬ್ ಧರಿಸಿ ಬಂದ ಹಲವರು ಮನವೊಲಿಕೆಗೆ ಬಗ್ಗದೆ ವಾಪಸ್ ತೆರಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು, ಬುರ್ಕಾ ತೆಗೆಯುತ್ತೇವೆ, ಮೊಬೈಲ್ ಬಿಡುತ್ತೇವೆ. ಆದರೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ಹೈ ಕೋರ್ಟ್ ಆದೇಶವಿರುವುದರಿಂದ ಹಿಜಾಬ್‌ಗೆ ಅವಕಾಶವಿಲ್ಲ ಎಂದು ಕಾಲೇಜಿನವರು ಹೇಳಿದಾಗ ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾದರು.

ಜಿಲ್ಲಾಡಳಿತ ಮೊಬೈಲ್ ನಿಷೇಧಿಸಿದ್ದರಿಂದ ಕಾಲೇಜುಗಳಲ್ಲಿ ಮೊಬೈಲ್‌ ತಪಾಸಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರ ಗುರುತಿನ ಚೀಟಿ ಪರೀಕ್ಷಿಸಿ ಕಾಲೇಜಿನ ಒಳ ಬಿಡಲಾಗುತ್ತಿತ್ತು. ಕಾಲೇಜು ಆವರಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಮೊಬೈಲ್ ಬಿಟ್ಟು ತರಗತಿಗೆ ಹಾಜರಾಗಲು ಬಯಸದ ಕೆಲ ಹುಡುಗರು ಸಮೀಪದ ಟೀ ಸ್ಟಾಲ್ ಸೇರಿದಂತೆ ಅಲ್ಲಲ್ಲಿ ಮೊಬೈಲ್‌ಗಳೊಂದಿಗೆ ಹರಟೆ ಹೊಡೆಯುತ್ತಿದ್ದುದು ಕಂಡು ಬಂತು.

error: Content is protected !!