ಸಿರಿಗೆರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

ಸಿರಿಗೆರೆ, ಫೆ.15-ಗುರುಶಾಂತೇಶ್ವರ ದಾಸೋಹ ಭವನದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ವರ್ಣರಂಜಿತ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿವಿಧ ಸಂಗೀತ ನೃತ್ಯ ಪ್ರಕಾರಗಳು ಪ್ರೇಕ್ಷಕರ ಚಿತ್ತಾಕರ್ಷಕವಾಗಿದ್ದವು. 

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಪ್ರಥಮ ಸಲ ತರಳಬಾಳು ಹುಣ್ಣಿಮೆಯ ವೇದಿಕೆಯಲ್ಲಿ  ಪಿಟೀಲು ವಾದನ ನುಡಿಸಿದರು. ಶ್ರೀಗಳ ಪಿಟೀಲು ವಾದನಕ್ಕೆ ಖ್ಯಾತ ಗಾಯಕ ಶಶಿಧರ ಕೋಟೆಯವರ ವಾದ್ಯವೃಂದ  ಸಾತ್ ನೀಡಿದರು.  ಮಥುರ ಬೃಂದಾವನದ ಕು. ವಿಷ್ಣುಪ್ರಿಯ ಗೋಸಾಮಿಯವರ ಭಕ್ತಿಪ್ರಧಾನ ಒಡಿಸ್ಸಿ ನೃತ್ಯ ಮತ್ತು ಚೆನ್ನೈನ ಚಿತ್ರಾ ಚಂದ್ರಶೇಖರರ ಭರತನಾಟ್ಯ ಮನಸೂರೆಗೋಂಡಿತು.

ಸಿರಿಗೆರೆ ಬಾಲಕಿಯರ  ಮಲ್ಲಿಹಗ್ಗದ ಕಸರತ್ತು ಮೈನವೀರೇಳಿಸುವಂತಿತ್ತು. ಶಶಿಧರ ಕೋಟೆ ವiತ್ತು ಸಂಗಡಿಗರ ಭಕ್ತಿ ಸಂಗೀತದ ರಸಧಾರೆ  ಸೂಜಿಗಲ್ಲಿನಂತೆ ಸೆಳೆಯಿತು.    ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ `ವೀರ ವಧೆ’ ದೊಡ್ಡಾಟ ಪ್ರೇಕ್ಷಕರ ಕರತಾಡನಕ್ಕೆ ಪಾತ್ರವಾಯಿತು.   

ತರಳಬಾಳು ಹುಣ್ಣಿಮೆಯ ಎರಡನೆಯ ದಿನವಾದ ಕಾರ್ಯಕ್ರಮದಲ್ಲಿ ತಳಕಲ್ಲು ತಂಡದವರಿಂದ ಭಜನೆ ಹಾಗೂ ಬೆಂಗಳೂರು ಶಶಿಧರ ಕೋಟೆ ಮತ್ತು ತಂಡದವರಿಂದ ವಚನಗೀತೆ ಮತ್ತು ಸಂಗೀತ ಸಂಭ್ರಮ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ಜಿ.ಎಚ್.ತಿಪ್ಪಾರೆಡ್ಡಿ, ಬೆಳ್ಳಿಪ್ರಕಾಶ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರಪ್ಪ, ಜಗಳೂರು ಎಚ್.ಪಿ.ರಾಜೇಶ್ ಇತರರು ಉಪಸ್ಥಿತರಿದ್ದರು. 

ಬೃಹನ್ಮಠದ ಗುರುಶಾಂತೇಶ್ವರ ಭವನದ ಮುಂಭಾಗದ ಆವರಣದಲ್ಲಿ ನೀರಿನ ಕಾರಂಜಿ ಮನರಂಜಿಸುತ್ತಿತ್ತು. ಗಣ್ಯರ ಹಾಗೂ ಭಕ್ತರ ಆಗಮನಕ್ಕೆ ತೆಂಗಿನ ಗರಿಗಳಿಂದ ಎಣೆದ ಚಪ್ಪರ ಆಕರ್ಷಿಸುತ್ತಿತ್ತು. 

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಲಾವಿದರಿಂದ ಚಿತ್ರಾ ಚಂದ್ರಶೇಖರ್ ತಂಡದಿಂದ ಭರತ ನಾಟ್ಯಂ, ಉತ್ತರಪ್ರದೇಶ ಬೃಂದಾವನ ವಿಷ್ಣುಪ್ರಿಯ ಗೋಸ್ವಾಮಿ ಕಲಾವಿದರಿಂದ ಒಡಿಸ್ಸಿ ನೃತ್ಯ,  ಹಾವೇರಿ ಗೊಟಗೋಡಿ ತಂಡದಿಂದ ‘ವೀರ ಅಭಿಮನ್ಯವಿನ ವಧೆ’ ದೊಡ್ಡಾಟ,  ತರಳಬಾಳು ಕಲಾಸಂಘದಿಂದ ಮಲ್ಲಿಹಗ್ಗ, ನಗಾರಿ, ಬೀಸು ಕಂಸಾಳೆ ಪ್ರದರ್ಶವಿತ್ತು. 

error: Content is protected !!