ದಾವಣಗೆರೆ, ಫೆ.14- ಯಾರ ಮಾತಿಗೂ ಕಿವಿಗೊಡದೇ, ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ನಿಮ್ಮ ಭವ್ಯ ಭವಿಷ್ಯತ್ತಿಗೆ ಭದ್ರ ಬುನಾದಿ ಹಾಕಿಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಮನವಿ ಮಾಡಿದ್ದಾರೆ
ಕುವೆಂಪು `ಸರ್ವ ಜನಾಂಗದ ಶಾಂತಿ ತೋಟ’ ಎಂದು ಕರುನಾಡನ್ನು ಬಣ್ಣಿಸಿದ್ದಾರೆ. ಇಲ್ಲಿ ಎಲ್ಲಾ ಜಾತಿ, ಜನಾಂಗದವರು ಒಟ್ಟಾಗಿ ಬೆರೆತು ಸಹಬಾಳ್ವೆ ನಡೆಸುತ್ತಿದ್ದಾರೆ. ಉಡುಪಿ ನಗರದ ಕಾಲೇಜಿನಲ್ಲಿ ನಡೆದ ಘಟನೆ ರಾಷ್ಟ್ರವ್ಯಾಪಿ ಕಿಚ್ಚನ್ನು ಹಚ್ಚಿದೆ. ಅದನ್ನು ಸ್ಥಳೀಯರೇ ಬಗೆಹರಿಸಿದ್ದರೆ, ಇಷ್ಟೊಂದು ಗಲಭೆ ಹೋರಾಟಕ್ಕೆ ಅವಕಾಶವೇ ಇರುತ್ತಿರಲಿಲ್ಲ.
ಯಾರದೋ ಮಾತಿಗೆ ಮರುಳಾಗಿ, ಆಕ್ರೋಶಗೊಂಡು, ಆವೇಶಭರಿತವಾಗಿ ಸಣ್ಣಪುಟ್ಟ ವಿಚಾರಗಳಿಗೆ ಹೋರಾಟಕ್ಕೆ ಇಳಿಯಬೇಡಿ, ನಿಮ್ಮ ಜೀವ, ಜೀವನ ಅಮೂಲ್ಯವಾದದ್ದು. ಇದನ್ನು ಹಾಳುಮಾಡಿಕೊಳ್ಳಬಾರದು, ಇದಕ್ಕೆ ರಾಜಕೀಯ ನಾಯಕರು ಬೇರೆಯದೇ ಬಣ್ಣ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಅಬ್ಬುಲ್ ಕಲಾಂರವರು ನಮ್ಮ ದೇಶದ ಹೆಮ್ಮೆಯ ಭಾರತೀಯರಲ್ಲವೇ? ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳಿಗೆ ಗೌರವ ತೋರಿ, ರಾಷ್ಟ್ರಪತಿ ಸ್ಥಾನಮಾನ ಅವರನ್ನು ಹುಡುಕಿಕೊಂಡು ಬರಲಿಲ್ಲವೇ?, ಶ್ರೀಮತಿ ಇಂದಿರಾಗಾಂಧಿ ನಮ್ಮ ದೇಶದ ಒಬ್ಬ ಹೆೆಮ್ಮೆಯ ಮಹಿಳೆ, ದೇಶವನ್ನು
20 ವರ್ಷಗಳ ಕಾಲ ಸಮರ್ಥವಾಗಿ ಮುನ್ನಡೆಸಲಿಲ್ಲವೇ?
ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಪ್ರತಿಭೆ ಇರುತ್ತದೆ. ಇದನ್ನು ಜಾತೀಯತೆ ಯಿಂದ ಗಂಡು, ಹೆಣ್ಣು ಎಂಬ ತಾರತಮ್ಯದಿಂದ ನೋಡಬಾರದು. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಷ್ಟು ವರ್ಷಗಳ ಕಾಲ ಇಲ್ಲದ ಈ ಸಮಸ್ಯೆ ಈಗ ಎದುರಾಗಿದೆ. ಇದಕ್ಕೆ ಕಾರಣ ಯಾರು? ಸಮಸ್ಯೆಯನ್ನು ದೊಡ್ಡದು ಮಾಡುತ್ತಿರುವವರ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಹೆಚ್. ದುಗ್ಗಪ್ಪ ಒತ್ತಾಯಿಸಿದ್ದಾರೆ.