ಸೈಕಲ್‌ಗಳು ಬೀದಿಯಲ್ಲಿ ಬರಬೇಕಾದರೆ ಈಗ ದೊಡ್ಡವರೇ ಸ್ಫೂರ್ತಿಯಾಗಬೇಕಿದೆ. ಅಧಿಕಾರಿಗಳು, ನೌಕರರು, ಮುಖಂಡರು ಸೈಕಲ್ ಸವಾರ ರಾಗಿ ಬೀದಿಗೆ ಬಂದರೆ (ಒಂದು ದಿನವಲ್ಲ, ನಿರಂತರ) ಅದನ್ನು ನೋಡಿ ಜನರು ಸೈಕಲ್ ಹತ್ತಲು ಮನಸ್ಸು ಮಾಡಬಹುದೇನೋ! ಇಲ್ಲವಾದರೆ ಜನರಿಗೆ ಸೈಕಲ್ ಹತ್ತಲು ಮನವೊಲಿಸುವಷ್ಟರಲ್ಲಿ ಊರ ತುಂಬಾ ಎಲೆಕ್ಟ್ರಿಕ್ ವಾಹನಗಳು ಬಂದಿರುತ್ತವೇನೋ!!
ದಾವಣಗೆರೆ, ಫೆ. 10 – ಸ್ಮಾರ್ಟ್ ಸಿಟಿ ಯೋಜನೆಯಡಿ ಬಾಡಿಗೆ ಸೈಕಲ್ ಯೋಜನೆ ಆರಂಭಿಸಲಾಗಿತ್ತು. ಮುಂದುವರೆದ ಭಾಗವಾಗಿ ಸೈಕಲ್‌ಗೆ ಪ್ರತ್ಯೇಕ ಪಥ ರೂಪಿಸುವ ಪ್ರಾಯೋ ಗಿಕ ಯೋಜನೆಗೆ ಚಾಲನೆ ನೀಡಲಾಗಿದೆ.
ಸ್ಮಾರ್ಟ್ ಶೌಚಾಲಯ, ಸ್ಮಾರ್ಟ್ ಬಸ್ ನಿಲ್ದಾಣ, ಸ್ಮಾರ್ಟ್ ಪಾರ್ಕಿಂಗ್, ನಗರಪಾಲಿಕೆ ಆವರಣದ ಸ್ಮಾರ್ಟ್ ಟವರ್ ಸೇರಿದಂತೆ ಹಲವಾರು ಸ್ಮಾರ್ಟ್ ಯೋಜನೆಗಳು ನಗರದ ಜನತೆಗಾಗಿ ಈ ಹಿಂದೆ ಆರಂಭವಾಗಿದ್ದವು. ಆದರ ಸಾಲಿಗೆ ಹೊಸದಾಗಿ ಸ್ಮಾರ್ಟ್ ಸೈಕಲ್ ಪಥ ಸೇರ್ಪಡೆಯಾಗಿದೆ.
ನಗರ ವ್ಯಾಪ್ತಿಗೆ ಬರುವ ಹಳೆ ಪಿ.ಬಿ. ರಸ್ತೆಯ ಉದ್ದಕ್ಕೂ ಸೈಕಲ್ ಪಾತ್ ನಿರ್ಮಿಸುವ ಯೋಜನೆ ಸ್ಮಾರ್ಟ್ ಸಿಟಿ ಅಧಿಕಾರಿಗಳದ್ದಾಗಿದೆ. ಈಗಾಗಲೇ ಸ್ಮಾರ್ಟ್ ಸೈಕಲ್ ಪಥ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬಂದು ನಿಂತಿದೆ. ರಸ್ತೆಯಿಂದ ಸೈಕಲ್ ಪಾತ್ ಪ್ರತ್ಯೇಕಿಸಲು ಮಧ್ಯದಲ್ಲಿ ದೊಡ್ಡ ಹೂಕುಂಡಗಳನ್ನು ಇರಿಸಲಾಗುತ್ತಿದೆ. ಇಡೀ ಮಾರ್ಗ ಮೂರ್ನಾಲ್ಕು ತಿಂಗಳಲ್ಲಿ ಸಿದ್ಧವಾಗಲಿದೆ.
ಆದರೆ, ಸೈಕಲ್ ಪಥ ಆರಂಭವಾಗುವ ಮುಂಚೆಯೇ ಸ್ಮಾರ್ಟ್ ಸಮಸ್ಯೆಗಳು ಎದುರಾಗಿ, ಜನರು ಸ್ಮಾರ್ಟ್ ಪರಿಹಾರಗಳನ್ನೂ ಕಂಡುಕೊಳ್ಳುವ ಸೂಚನೆಗಳನ್ನು ನೀಡಿದ್ದಾರೆ!
ಉದಾಹರಣೆಗೆ ಈಗ ರೂಪಿಸಲಾಗಿರುವ ಸೈಕಲ್ ಸ್ಮಾರ್ಟ್ ಮಾರ್ಗದಲ್ಲಿ ಕೆಲವೆಡೆ ರಸ್ತೆ ಸೂಚನಾ ಫಲಕಗಳು ಬರುತ್ತಿವೆ, ಕೆಲವೆಡೆ ಲೈಟ್ ಕಂಬಗಳು, ಕೆಲವೆಡೆ ಸಾಕ್ಷಾತ್ ಟಿ.ಸಿ.ಗಳೇ ಬರುತ್ತವೆ. ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಆಟೋ ಪಾರ್ಕಿಂಗ್ ಹಾಗೂ ಸೈಕಲ್ ಪಾತ್‌ಗಳು ಸಂಗಮಿಸುತ್ತವೆ.
ಮಾರ್ಗದ ಉದ್ದಕ್ಕೂ ಇರುವ ಅಂಗಡಿ – ಶೋರೂಂಗಳವರಿಗೆ ಸೈಕಲ್ ಪಾತ್‌ಗೆಂದು ಇರಿಸಿರುವ ಹೂಕುಂಡಗಳು ಸಮಸ್ಯೆ ತಂದಿವೆ. ಕೆಲವರು ಹೂಕುಂಡಗಳನ್ನು ಸರಿಸಿದ್ದರೆ, ಇನ್ನು ಕೆಲವರು ಹೂಕುಂಡಗಳನ್ನೇ ತಮ್ಮ ಅಂಗಡಿಗೆ ಸ್ವಾಗತಿಸುವ ರೀತಿಯಲ್ಲಿ ಮರು ಜೋಡಿಸಿಕೊಂಡಿದ್ದಾರೆ. ಇನ್ನು ಕೆಲವರು ಪಾರ್ಕಿಂಗ್‌ಗೆ ಅನುಕೂಲವಾಯಿತು ಎಂದು ಕಾರುಗಳನ್ನು ಸೈಕಲ್ ಪಾತ್ ಎಂದು ಹೇಳುವ ಜಾಗದಲ್ಲಿ ನಿಲ್ಲಿಸಿದ್ದಾರೆ. ಇಟ್ಟಿಗೆ ಮಾರುವವರು ತಮ್ಮ ವಾಹನಗಳನ್ನು ಸೈಕಲ್ ಪಾತ್ ಸದ್ಬಳಕೆಯಾಗುವ ರೀತಿಯಲ್ಲಿ ನಿಲ್ಲಿಸಿಕೊಳ್ಳುತ್ತಿ ದ್ದಾರೆ. ಈ ರೀತಿ ಜನ ನಾವು ಸೂಪರ್ ಸ್ಮಾರ್ಟ್ ಎಂಬುದನ್ನು ತೋರಿಸುತ್ತಿದ್ದಾರೆ.
ನಗರದ ಪಾದಚಾರಿ ಮಹಾಜನತೆ ನಡೆದು ಸಾಗಲು ಇರುವ ಫುಟ್‌ಪಾತ್‌ಗಳೇ ಎಲ್ಲೆಂದರಲ್ಲಿ ಅತಿಕ್ರಮಣವಾಗಿ ನಡೆಯಲು ಕಷ್ಟಕರವಾಗಿದೆ. ಜನತೆ ರಸ್ತೆಯ ಸೈಡ್ ಪಾತ್‌ನಲ್ಲಿ ಸಾಗುತ್ತಿದ್ದರು. ಈಗ ಫುಟ್‌ಪಾತ್, ಸೈಡ್ ಪಾತ್ ಎರಡೂ ಇಲ್ಲವಾಗಿ ರಸ್ತೆ ನಡುವೆ ಬರಬೇಕೇನೋ ಎಂಬ ಆಲೋಚನೆಯೂ ಈಗ ಬರುತ್ತಿದೆ.
ಸೈಕಲ್ ಪಾತ್ ಯೋಜನೆಯನ್ನು ಪ್ರಾಯೋಗಿಕವಾಗಿ ದಾವಣಗೆರೆ ಸೇರಿದಂತೆ ರಾಜ್ಯದ ಕೆಲ ಊರುಗಳಲ್ಲಿ ಜಾರಿಗೆ ತರಲಾಗುತ್ತಿದೆ. ಜನರು ಎದುರಿಸುತ್ತಿರುವ ಸಮಸ್ಯೆಗಳು ಗಮನಕ್ಕೆ ಬಂದಿವೆ ಎಂದಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಎಲ್ಲ ಕಡೆಗೂ ಹೂಕುಂಡ ಇಡುವುದಿಲ್ಲ. ಕೆಲವೆಡೆ ಸೈಕಲ್ ಪಾತ್‌ಗೆ ಬಣ್ಣವಷ್ಟೇ ಬಳಿಯುವ ಯೋಜನೆ ಇದೆ. ಪಾತ್‌ಗೆ ಅಡ್ಡ ಬರುವ ಕಂಬ ಇತ್ಯಾದಿಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಿದ್ದಾರೆ.
ಸೈಕಲ್ ಪಾತ್ ಏನೋ ಸಿದ್ಧವಾಗುತ್ತಿದೆ. ಸೈಕಲ್ ಸವಾರರು ಎಲ್ಲಿದ್ದಾರೆ ಎಂಬುದು ಮುಖ್ಯ ಪ್ರಶ್ನೆ. ಸ್ಮಾರ್ಟ್ ಸಿಟಿಯ ಸೈಕಲ್‌ಗಳು ನಿಲ್ದಾಣಗಳಲ್ಲಿ ಹೆಚ್ಚಾಗಿ ಕಾಣುತ್ತಿವೆಯೇ ಹೊರತು ರಸ್ತೆ ಮೇಲೆ ಕಂಡು ಬಂದಿದ್ದೇ ಕಡಿಮೆ ಎಂಬುದು ಸಾರ್ವಜನಿಕರ ಅಂಬೋಣ. ಸೈಕಲ್ ಆಕರ್ಷಣೆಯೇ ಈ ಪರಿ ಇರುವಾಗ ಪ್ರತ್ಯೇಕ ಪಥ ಮಾಡಿದರೂ ಎಷ್ಟರ ಮಟ್ಟಿಗೆ ಅನುಕೂಲ ಎಂಬ ಪ್ರಶ್ನೆಗಳೂ ಇವೆ.
ಸೈಕಲ್ ಓಡಿಸಿ ಪರಿಸರ ರಕ್ಷಿಸಬಹುದು ಎಂಬ ವಾದವೂ ಕೆಲವರದ್ದು. ಆದರೆ, ನಗರದ ವಾತಾವರಣಕ್ಕೆ ಸೈಕಲ್ ಕಾರಣದಿಂದ ನೆರವಾಗುವುದು ಕಡಿಮೆ. ಒಟ್ಟು ವಾಯು ಮಾಲಿನ್ಯದಲ್ಲಿ ವಾಹನಗಳ ಕೊಡುಗೆ ಕಡಿಮೆ. ಅದರಲ್ಲೂ 4ಜಿ ಹಾಗೂ 6ಜಿ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಬಂದ ಮೇಲಂತೂ ವಾಹನಗಳ ಮಾಲಿನ್ಯ ಇನ್ನಷ್ಟು ಕಡಿಮೆಯಾಗಿದೆ. ಮೊನ್ನೆಯಷ್ಟೇ ದಾವಣಗೆರೆ ಇಡೀ ಭಾರತದ ಸ್ವಚ್ಛ ವಾಯು ನಗರಗಳಲ್ಲಿ ಒಂದಾಗಿದೆ ಎಂಬ ವರದಿಗಳು ಬಂದಿದ್ದವು.
ಸೈಕಲ್‌ಗಳು ಬೀದಿಯಲ್ಲಿ ಬರಬೇಕಾದರೆ ಈಗ ದೊಡ್ಡವರೇ ಸ್ಫೂರ್ತಿಯಾಗಬೇಕಿದೆ. ಅಧಿಕಾರಿಗಳು, ನೌಕರರು, ಮುಖಂಡರು ಸೈಕಲ್ ಸವಾರರಾಗಿ ಬೀದಿಗೆ ಬಂದರೆ (ಒಂದು ದಿನವಲ್ಲ, ನಿರಂತರ) ಅದನ್ನು ನೋಡಿ ಜನರು ಸೈಕಲ್ ಹತ್ತಲು ಮನಸ್ಸು ಮಾಡಬಹುದೇನೋ! ಇಲ್ಲವಾದರೆ ಜನರಿಗೆ ಸೈಕಲ್ ಹತ್ತಲು ಮನವೊಲಿಸುವಷ್ಟರಲ್ಲಿ ಊರ ತುಂಬಾ ಎಲೆಕ್ಟ್ರಿಕ್ ವಾಹನಗಳು ಬಂದಿರುತ್ತವೇನೋ!!
– ಎಸ್.ಎ. ಶ್ರೀನಿವಾಸ್, [email protected]