ದಾವಣಗೆರೆ, ಫೆ.10- ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆ ಹಾಗೂ ನಗರದೇವತೆ ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ನಿಮಿತ್ತ ನಗರದ ಹಳೇ ದಾವಣಗೆರೆ ವ್ಯಾಪ್ತಿಯಲ್ಲಿ ಇಂದು ಸಂಜೆ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಹೊಂಡದ ವೃತ್ತದಿಂದ ಆರಂಭಗೊಂಡ ಪಥ ಸಂಚಲನವು ಹಾಸಬಾವಿ ಸರ್ಕಲ್, ಮದೀನಾ ಸರ್ಕಲ್, ಬಾಷಾ ನಗರ, ಆಜಾದ್ ನಗರ, ನೂರಾನಿ ಶಾದಿ ಮಹಲ್, ವೆಂಕಟೇಶ್ವರ ಸರ್ಕಲ್, ಅರಳಿಮರ ವೃತ್ತದವರೆಗೆ ಸಾಗಿತು.
ಡಿಎಆರ್, ಕೆಎಸ್ಆರ್ ಪಿ, ಹೋಂ ಗಾರ್ಡ್ಸ್, ದುರ್ಗಾ ಪಡೆ, ಪೊಲೀಸ್ ಬ್ಯಾಂಡ್ ತಂಡ, ರಾಪಿಡ್ ಆಕ್ಷನ್ ಫೋರ್ಸ್ (ಆರ್ ಎಎಫ್) ತಂಡ, ವಿದ್ಯಾನಗರ ಮತ್ತು ಕೆಟಿಜೆ ನಗರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಕ್ರೈಂ ಸಿಬ್ಬಂದಿ ತಂಡ ಹಾಗೂ ವಿವಿಧ ಪೊಲೀಸ್ ತುಕಡಿಗಳು ಹೆಜ್ಜೆ ಹಾಕಿ ಸಾರ್ವಜನಿಕರನ್ನು ತಮ್ಮತ್ತ ಸೆಳೆದು ಜಾಗೃತಿ ಮತ್ತು ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದವು. ಉತ್ತರ ಸಂಚಾರ ವಾಹನ, 4 ಟ್ರಾಫಿಕ್ ಇಂಟರ್ ಸೆಪ್ಟರ್ ವಾಹನ, ಇಆರ್ ಎಸ್ 112 ವಾಹನ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಾಹನಗಳು ಒಂದರ ಹಿಂದೆ ಒಂದರಂತೆ ಸಾಗಿದವು.
ಎಎಸ್ಪಿ ಆರ್.ಬಿ. ಬಸರಗಿ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ನರಸಿಂಹ ವಿ. ತಾಮ್ರಧ್ವಜ, ಪಿ.ಬಿ. ಪ್ರಕಾಶ್, ಸಿಪಿಐಗಳಾದ ಹೆಚ್. ಗುರುಬಸವರಾಜ್, ಪಿಎಸ್ಐಗಳಾದ ಗಜೇಂದ್ರಪ್ಪ, ವೈ.ಎಸ್. ಶಿಲ್ಪಾ, ಆರ್ಎಎಫ್ ಡೆಪ್ಯುಟಿ ಕಮಾಂಡೆಂಟ್ ಬೇನಮ್ಮ ಜೋಸೆಫ್, ಅಸಿಸ್ಟೆಂಟ್ ಕಮಾಂಡೆಂಟ್ ಪ್ರಜ್ವಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.