ಹರಿಹರ, ಫೆ. 9- ನಗರದಲ್ಲಿ ನಿನ್ನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವ ರಣದಲ್ಲಿ ಹಿಜಾಬ್ ಧರಿಸುವ ವಿವಾದದ ವಿಚಾರಕ್ಕೆ ಎರಡು ಕೋಮಿನ ನಡುವೆ ನಡೆದ ಗಲಾಟೆಯ ಬಗ್ಗೆ ದಾವಣಗೆರೆ ಪೂರ್ವ ವಲಯ ಐಜಿಪಿ ಸತೀಶ್ ಕುಮಾರ್ ರವರು ಕಾಲೇಜು ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಅವರು, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಿವಿಧ ಬಡಾವಣೆಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿಗೆ ಭೇಟಿ ನೀಡಿದ ನಂತರ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ನಿನ್ನೆ ನಡೆದ ಘರ್ಷಣೆ ವಿಚಾರಕ್ಕೆ ಈಗಾಗಲೇ 6 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ನಾನು ಮನೆಗೆ ನಡೆದುಕೊಂಡು ಹೋಗುವಾಗ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಓರ್ವ ಯುವಕ ಪ್ರತ್ಯಕ್ಷವಾಗಿ ದೂರನ್ನು ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಬೇಡ
ಪೋಷಕರು ಸಾಲ – ಸೋಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ರಾಜಕೀಯವನ್ನು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಬಾರದು. ಪ್ರಚೋದನೆಯಿಂದ ಅವರ ಭವಿಷ್ಯ ಹಾಳು ಮಾಡಬಾರದು ಎಂದು ಶಾಸಕ ಎಸ್. ರಾಮಪ್ಪ ಮನವಿ ಮಾಡಿಕೊಂಡಿದ್ದಾರೆ. ಹರಿಹರ ನಗರದಲ್ಲಿ ಹಿಂದಿನಿಂದಲೂ ಎಲ್ಲಾ ವರ್ಗದವರೂ ಸಹ ಸಹೋದರರಂತೆ ಪ್ರೀತಿ, ವಿಶ್ವಾಸದಿಂದ ಜೀವನ ಮಾಡಿಕೊಂಡು ಬಂದಿದ್ದಾರೆ. ಶಾಲೆಯಲ್ಲಿ ಎಲ್ಲಾ ವರ್ಗದ ಮಕ್ಕಳೂ ಸಹ ಭೋಜನ ಮಾಡಿಕೊಂಡು ಬಂದಿ ರುತ್ತಾರೆ. ವಿದ್ಯಾರ್ಥಿಗಳು ಸಹ ನಿನ್ನೆ ಆಗಿರೋದು ಸಣ್ಣ ಘಟನೆ ಎಂದು ಭಾವಿಸಿ ಕೊಂಡು ಮುಂದೆ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಿ ಎಂದು ಹೇಳಿದರು.
ಗೇಟ್ ಇಲ್ಲದಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು
ನಮ್ಮ ಕಾಲೇಜು ಮುಂಭಾಗದಲ್ಲಿ ಗೇಟ್ ಇಲ್ಲದೇ ಹೋಗಿದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗುತ್ತಿತ್ತು. ಮಕ್ಕಳಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವಿರೂಪಾಕ್ಷಪ್ಪ ಹೇಳಿದ್ದಾರೆ. ನಿನ್ನೆ ಘಟನೆ ನೋಡಿ ದರೆ, ಮುಂದೆ ಪ್ರತಿನಿತ್ಯವೂ ಮಕ್ಕಳಿ ಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಬೇಕು ಎಂದು ಗೊಂದಲ ಸೃಷ್ಟಿ ಯಾಗಿದೆ ಎಂದವರು ಹೇಳಿದ್ದಾರೆ.
ನಿನ್ನೆ ನಡೆದ ಘಟನೆಯ ಎಲ್ಲಾ ವಿಚಾರಗಳನ್ನು ಐಜಿಪಿ, ಎಸ್ಪಿ , ಶಾಸಕರ ಗಮನಕ್ಕೆ ತರಲಾಗಿದೆ. ಅವರು ಯಾವ ರೀತಿಯಲ್ಲಿ ಮಾರ್ಗ ದರ್ಶನ ನೀಡುತ್ತಾರೋ ಅಂದು ಕಾಲೇಜು ಪ್ರಾರಂಭ ಮಾಡಲಾಗುತ್ತದೆ ಎಂದರು.
ಫೆ. 11ರವರೆಗೆ ನಿಷೇಧಾಜ್ಞೆ ವಿಸ್ತರಣೆ
‘ಹಿಜಾಬ್’ ಹಾಗೂ ‘ಕೇಸರಿ ಶಾಲು’ ವಿವಾದದ ಹಿನ್ನೆಲೆಯಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಲು ಮಹಾನಗರ ಪಾಲಿಕೆ ಹಾಗೂ ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯರಾತ್ರಿವರೆಗೆ ಹೇರಿದ್ದ ನಿಷೇಧಾಜ್ಞೆಯನ್ನು ಫೆ. 11ರ ಮಧ್ಯರಾತ್ರಿ 12ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ. ಇದರೊಟ್ಟಿಗೆ ಹರಿಹರ ನಗರಸಭೆ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದ ನಿಷೇಧಾಜ್ಞೆಯನ್ನು ಇದೀಗ ಮಲೇಬೆನ್ನೂರು ಸೇರಿದಂತೆ ಇಡೀ ತಾಲ್ಲೂಕಿನಾದ್ಯಂತ ವಿಸ್ತರಿಸಲಾಗಿದೆ.
ನಾವು ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಬಂಧನದ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ನಗರದಾದ್ಯಂತ 144 ನೇ ಸೆಕ್ಷನ್ ಜಾರಿಯಲ್ಲಿ ಇರುವುದರಿಂದ, ಯಾವುದೇ ರೀತಿಯ ಪ್ರತಿಭಟನೆ ಮಾಡುವುದಾಗಲೀ ಜೊತೆಗೆ ಇತರೆ ಚಟುವಟಿಕೆಗಳನ್ನು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಸಾರ್ವಜನಿಕರಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಅವರು ಸ್ವಯಂ ಪ್ರೇರಿತರಾಗಿ ನನಗೆ ದೂರವಾಣಿ ಕರೆ ಮಾಡಬಹುದು. ನಂತರದಲ್ಲಿ ನಿರಪರಾಧಿಗಳಿಗೆ ತೊಂದರೆ ಆಗದಂತೆ ವಿಚಾರಣೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.
ಈ ಘಟನೆ ಪೂರ್ವ ನಿಯೋಜಿತ ಕಾರ್ಯ ಎಂದು ಈಗ ಸದ್ಯದ ಪರಿಸ್ಥಿತಿಯಲ್ಲಿ ಏನು ಹೇಳಲಿಕ್ಕೆ ಸಾಧ್ಯವಿಲ್ಲ. ಆದರೆ ಹೊರಗಡೆಯಿಂದ ಬಂದ ಕೆಲವು ಯುವಕರು ದಾಂಧಲೆಗೆ ಮುಂದಾಗಿ ಅತಿರೇಕದ ವರ್ತನೆ ಮಾಡಿದ್ದರಿಂದ ಅದನ್ನು ಹತೋಟಿಗೆ ತರಲು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿಲಾಯಿತು ಎಂದವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆಯ ಘಟನೆಯನ್ನು ಯಾರೂ ಮುಂದುವರೆಸಲು ಹೋಗಬಾರದು. ಒಂದು ವೇಳೆ ಮುಂದುವರೆಸಿದರೆ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ಮಾಡಿ, ಹಲ್ಲೆ ನಡೆಸಿದವರ ಮೇಲೆ ಮೂರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಇನ್ನೂ ಸ್ವಲ್ಪ ಮಟ್ಟಿಗೆ ಸುಧಾರಣೆ ಬಂದ ನಂತರದಲ್ಲಿ ಎರಡೂ ಕೊಮಿನ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ಏರ್ಪಡಿಸಲಾಗುತ್ತದೆ ಎಂದು ಹೇಳಿದರು.
ಶಾಸಕ ಎಸ್ ರಾಮಪ್ಪ ಮಾತನಾಡಿ, ನಿನ್ನೆ ಹಿಜಾಬ್ ಧರಿಸುವ ವಿಚಾರಕ್ಕೆ ನಡೆದ ಘರ್ಷಣೆ 100 ಕ್ಕೆ100 ರಷ್ಟು ಪೂರ್ವ ನಿಯೋಜಿತವಾಗಿದೆ. ಈ ಕೃತ್ಯ ನಡೆದಿರೋದು ರಾಜಕೀಯ ಉದ್ದೇಶಕ್ಕಾಗಿ ಮಾಡಿರುವುದು ನಿಜ ಸಂಗತಿ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಸತೀಶ್ ಕುಮಾರ್, ಹನುಮಂತಪ್ಪ ಶಿರಹಳ್ಳಿ, ಪಿಸಿಐ ಸುನಿಲ್ ಬಸವರಾಜ್ ತೆಲಿ, ಪೊಲೀಸ್ ಸಿಬ್ಬಂದಿಗಳಾದ ನಿಂಗರಾಜ್, ಸತೀಶ್, ಮಂಜುನಾಥ್, ಕಾಲೇಜು ಉಪನ್ಯಾಸಕರು, ನಗರಸಭೆ ಸದಸ್ಯರು, ಮುಸ್ಲಿಂ ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.