ದಾವಣಗೆರೆ, ಫೆ.9- ಕಳೆದ ಕೆಲ ದಿನಗಳಿಂದ ಹಿಜಾಬ್ ಹಾಗೂ ಕೇಸರಿ ಶಾಲುಗಳ ವಿವಾದದ ಕೇಂದ್ರಗಳಾಗಿ ಮಾರ್ಪಾಡಾಗಿದ್ದ ಕಾಲೇಜುಗಳಲ್ಲಿ ಬುಧವಾರ ನೀರವ ಮೌನ ಆವರಿಸಿತ್ತು.
ಹರಿಹರ ಹಾಗೂ ದಾವಣಗೆರೆ ಕಾಲೇಜುಗಳೂ ಸೇರಿದಂತೆ ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಉಲ್ಬಣಿಸಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿತ್ತು.
ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಿತ್ತು. ಇತ್ತ ಜಿಲ್ಲಾಡಳಿತವೂ ಸಹ 144ನೇ ಸೆಕ್ಷನ್ ಅಡಿಯಲ್ಲಿ ದಾವಣಗೆರೆ ಹಾಗೂ ಹರಿಹರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಇತ್ತ 9 ಹಾಗೂ 10ನೇ ತರಗತಿ ಮಕ್ಕಳಿಲ್ಲದೆ ಶಾಲೆಗಳೂ ಮೌನ ವಹಿಸಿದ್ದವು. ಕೆಲ ಖಾಸಗಿ ಸಂಸ್ಥೆಗಳ ಪ್ರಾಥಮಿಕ ಶಾಲೆಗಳಿಗೂ ರಜೆ ನೀಡಲಾಗಿತ್ತು.
ಶಾಲೆಗಳಲ್ಲಿ ಶಿಕ್ಷಕರು ಹಾಗೂ ಕಾಲೇಜುಗಳಲ್ಲಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಮಾತ್ರ ಕಾಲೇಜುಗಳಿಗೆ ಆಗಮಿಸಿದ್ದರು. ಪೊಲೀಸ್ ಗಸ್ತು ವಾಹನಗಳು ಕಾಲೇಜುಗಳತ್ತ ಬಂದು ಹೋಗುತ್ತಿದ್ದುದು ಕಂಡು ಬಂತು.